Kannada NewsLatest

ಅಮ್ಮನಿಲ್ಲದ ಮೊದಲ ದೀಪಾವಳಿ

ಸುಹಾನಿ ಎಸ್

ನನ್ನ ಎಳೆವೆಯಲ್ಲಿ ಒಂದಿಷ್ಟು ತಿಳಿವಳಿಕೆ ಅಂತ ಮೂಡಿದ ಮೇಲೆ ಅಮ್ಮ ಬೊಟ್ಟು ಮಾಡಿ ತೋರಿದವನಿಗೆ ನಾನು ಅಪ್ಪ ಎಂದು ಕರೆದದ್ದು. ಅಮ್ಮಾ.., ಈ ಅಪ್ಪ ಅಂದರೆ ಏನು..? ಕೇಳಿದ ತೊದಲು ನುಡಿಗೆ ಅಮ್ಮನಿತ್ತ ಉತ್ತರ : ಯಾವತ್ತು ನನ್ನ ಮತ್ತು ನಿನ್ನ ಮೊಗದಲ್ಲಿ ನಗುವ ಕಾಣಲು ಬದುಕಿನುದ್ದಕ್ಕೂ ಶ್ರಮಪಡುವ ದೇವರು, ಮಗಳೇ..! ಎಂದು ಹೇಳಿದ್ದಳು. ಅದರರ್ಥ ನನ್ನ ಬಾಲಬುದ್ಧಿಗೆ ಅಷ್ಟಾಗಿ ಆಗಿರಲಿಲ್ಲ. ಅಮ್ಮನಿಗೆ ಅಕ್ಷರಜ್ಞಾನವಿರಲಿಲ್ಲವಾದರೂ ಜ್ಞಾನದ ಅಕ್ಷಯ ನಿಧಿಯಾಗಿದ್ದರು. ಮಾತೂ ಮಾತಿಗೂ ನುಡಿಗಟ್ಟು, ಗಾದೆಮಾತುಗಳನ್ನು ಸಂದರ್ಭೋಚಿತವಾಗಿ ಬಳಸುತ್ತಿದ್ದಳು. ದುರಂತ ಅಂದರೆ ಅವಳಿರುವಾಗಲೇ ಅವುಗಳನ್ನು ಸಂಗ್ರಹಿಸಿ ಇಡದ್ದುದು.

ಅಮ್ಮ ಕಟ್ಟಾ ಸಂಪ್ರದಾಯಸ್ಥ ಮಹಿಳೆ. ಹಾಗೆಂದೂ ಮೂಢ ಆಚರಣೆಗಳ ಬೆನ್ನಿಗೆ ಬಿದ್ದವಳಲ್ಲ. ಪ್ರತಿಯೊಂದು ಆಚರಣೆಗಳ ಹಿಂದೆ ಇರಬಹುದಾದ ತಾತ್ವಿಕ, ವೈಜ್ಞಾನಿಕ ಹಿನ್ನೆಲೆಯನ್ನು ತನ್ನದೇ ಯಾದ ರೀತಿಯಲ್ಲಿ ಗ್ರಹಿಸಿ ಸ್ಪಷ್ಟನೆ ನೀಡುತ್ತಿದ್ದಳು. ತನ್ನ ಬದುಕಿನ ಎಲ್ಲ ಸಂಕಷ್ಟಗಳನ್ನು ಕಳೆಯಲು, ಮಾನಸಿಕ ನೆಮ್ಮದಿಯನ್ನು ಪಡೆಯಲು, ಹಬ್ಬ-ಹರಿದಿನ, ಅಮಾವಾಸ್ಯೆ-ಹುಣ್ಣಿಮೆ, ವಾರಗಳಂದು ಉಪವಾಸವನ್ನು ನಿಯಮಿತವಾಗಿ ಕೈಗೊಳ್ಳುತ್ತಿದ್ದಳು.  ಯುಗಾದಿ, ದಸರಾ, ದೀಪಾವಳಿ ಬಂದರಂತೂ ಕಥೆ ಮುಗಿತು. ಚುರುಕಿನ ಕೆಲಸ-ಕಾರ್ಯಗಳು, ಅಮ್ಮನೆದಿರೂ ಯಾರಾದರೂ ಮಾತನಾಡಿದ್ದುಂಟೇ..? ಕರಾರುವಕ್ಕಾಗಿ ಅವಳ ಅಣತಿಯಂತೆ ಸಾಗಬೇಕು. ಅಮ್ಮನದ್ದೇ ಅಂತಿಮ ನಿರ್ಧಾರ – ಅಪ್ಪ ತಲೆ ಅಲ್ಲಾಡಿಸುವ ಕೋಲೆಬಸವನಂತೆ ಸಾಧು ಪ್ರಾಣಿ, ಮುಂದೆ ಬಂದರೆ ಆಯನು, ಹಿಂದೆ ಬಂದರೆ ಒದೆಯನು.

ನಮ್ಮದು ಕುಂಟೆತ್ತಿನ ವರ್ತನದ ಕುಟುಂಬ. ಅಂದರೆ ಒಂದು ಸಣ್ಣ ಡಬ್ಬಿ ಅಂಗಡಿ. ಕಾಳು-ಕಡಿ ತುಂಬಿಕೊಂಡು, ಎಲಿ-ಅಡ್ಕಿ, ಸಕ್ಕರಿ-ಚಾಪುಡಿ ಅಂತ ವ್ಯಾಪಾರ-ಸಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಅಪ್ಪನಿಗೆ – ಅಮ್ಮ ಸಾಥ್ ನೀಡಿದ್ದಳು. ಬಾಯ್ಲೆಕ್ಕದಲ್ಲಿ ಅಮ್ಮ ತುಂಬ ಚುರುಕು. ಅವಳ ಲೆಕ್ಕದ ಕ್ರಮ ಹೀಗಿತ್ತು : ಹೋದ್ಶನಿವಾರಕ್ಕ ಈ ಶನಿವಾರಕ್ಕ ಎಂಟು ದಿನ ಆಯ್ತು, ನಾಳೆ ಕೊಡ್ತಿನಿ ಅಂತ ಉದ್ರಿ ತಗೊಂಡ್ಹೋಗಿ ಇನ್ನು ದುಡ್ಡುಕೊಟ್ಟಿಲ್ಲ ಅಂತ ಕರಾರುವಕ್ಕಾಗಿ ಲೆಕ್ಕಹಾಕಿ ರೊಕ್ಕ ಚುಪ್ತಾ ಮಾಡಿಕೊಳ್ಳತಿದ್ದಳು. ನಮ್ಮೂರು ಒಂದು ಹಳ್ಳಿ. ವಡ್ಡರ ಓಣಿಗೆ ನಮ್ಮದೇ ದೊಡ್ಡ ಅಂಗಡಿ. ಈಗಲೂ ಹಳ್ಳಿಯಲ್ಲೆಲ್ಲ ಜಾತಿವಾರು ಓಣಿಗಳನ್ನು ಕುರುಬರ ಓಣಿ, ಮುಸಲರ ಓಣಿ, ಊರು-ಕೇರಿ ಅಂತೆಲ್ಲ ಇರೋದು ಸಹಜ. ಅಮ್ಮ ಆಗಾಗ್ಗೆ ಹೇಳುತ್ತಿದ್ದಳು. ಊರು ಕೇರಿಯಾಗೈತೀ.., ಕೇರಿ ಊರಾಗೈತೀ ಅಂತ. ನಮ್ಮ ಮಂದಿ ಲಿಂಗ ಗೂಡಕ್ಕೆ ಸಿಗಾಕಿ ಹೆಂಡ ಕುಡ್ದು, ಖಂಡ-ತುಂಡು ತಿಂದು ಬಂದು ಮೈತೊಳ್ಕಂಡು ಮನ್ಯಾಕ ಬಂದು ಬೆಳ್ಳನ ಬಟ್ಟಿತೊಟ್ಟು ಶೀಲವಂತ, ಮಾನವಂತ, ಲಿಂಗವಂತರೆನಿಸಿಕೊಂಡರೆ..! ಕೇರಿ ಜನ ಮುಂಜಾಲೆದ್ದು ಸಿಸ್ತು ಜಳ್ಕಾ ಮಾಡಿ, ಇದ್ದ ಬಟ್ಟಿನಾ ಮಡಿಮಾಡಿ ತೊಟ್ಟು, ಲಿಂಗ ಧರಿಸಿ, ಹಣೆಮ್ಯಾಲ ಮೂರ್ಬಟ್ಟು ವಿಭೂತಿ ಪಟ್ಟ ಬಳಿದುಕೊಂಡು ದಾರಿಲೀ ಹೊಂಟ್ರ.., ಥೇಟ್ ಬಸವಣ್ಣನ ಥರ ಕಾಣತಿದ್ದರು, ನೋಡಾಕ ಎರಡು ಕಣ್ಣು ಸಾಲ್ದು ಅಂತಿದ್ಳು.

ನಮಗ ಅಂಗಡಿ ಮನಿಯರು ಅಂತ ಕರೆಯುತ್ತಿದ್ದದ್ದು ಜನವಾಡಿಕೆ ಮೇಲೇನೆ. ಯುಗಾದಿ, ದಸರಾ ಹಬ್ಬಗಳು ಅಷ್ಟಕ್ಕಷ್ಟೇ ಆದರೂ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ..! ಯಾಕಂದರೆ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಬೇಕು. ಒಂದು ದಿನದ ಪೂಜೆಗೆ ತಿಂಗಳಾನುಗಟ್ಟಲೇ ಉಳುಸೋದು, ಸಾರಸೋದು, ಬಣ್ಣ ಬಳಿಯೋದು, ಸಾಮಾನ ಕಿತ್ತೋದು -ಹೊಂದ್ಸೋದು. ತುಂಬಾ ಹೈರಾಣ ಆಗಿಬಿಡ್ತಿದ್ದಳು ಅಮ್ಮ. ಆದರೂ ತನ್ನ ಆಸರಕಿ-ಬ್ಯಾಸರಕಿ ತೋರುಗೊಡದೆ ಪಾದರಸದಂತೆ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಳು. ಕಳೆದ ಮೂವತ್ತು -ಮೂವತ್ತೈದು ವರುಷಗಳಿಂದ ನಮ್ಮ ಮನೆ, ಗಿರಣಿ, ಮತ್ತು ಮನೆಗಳನ್ನು ಸುಣ್ಣ-ಬಣ್ಣ ಬಳಿದೋರು ಅಂದರೆ ಹುಸೇನಮ್ಮ, ಪಾತಮ್ಮ, ಅಲಿಂಬಮ್ಮ. ಅವರುಗಳು ದಸರಾ ಹಬ್ಬದ ವಿಜಯ ದಶಮಿ ದಿನ ಬನ್ನಿ ಮುಡಿದು ಬಂದು ಅಮ್ಮನಿಗೆ ಬನ್ನಿ ಕೊಟ್ಟು ದೀಪಾವಳಿಗೆ ನಾವೇ ಬಂದು ಬಂದು ಮನಿ ಸಾರಿಸಿಕೊಡ್ತಿವಿ ಅಂತ ಮಾತುಕೊಟ್ಟು ಹೋಗತ್ತಿದ್ದರು. ಅವರೊಂದಿಗೆ ಅಮ್ಮನಿಗೆ ಅತಿಯಾದ ಸಲುಗೆ-ಆತ್ಮೀಯತೆ ಬೆಳೆದಿತ್ತಾದ್ದರಿಂದ ಬೇರೆ ಯಾರನ್ನೂ ಆ ಕೆಲಸಕ್ಕೆ ಹಚ್ಚುತ್ತಿರಲಿಲ್ಲ. ಬೇರೆಯವರನ್ನ ಯಾಕೆ ಕರಸಲ್ಲ ನೀನು ಅಂತ ನಾ ಕೇಳಿದರೆ, ನಮ್ಮದು ಅಂಗಡಿ ಮನಿ, ಕಾಳು-ಕಡಿ ಜಾಸ್ತಿ, ಅವರು ಮಾತಿನ ಮಂದಿ, ಕೈ-ಬಾಯಿ ಸುದ್ದು ಇರೋರು, ಆಟು-ಇಟು ಅನ್ಕಿಲ್ಲ, ಕೊಟ್ಟೋಟು ಕೂಲಿ ತಗೋತಾರೆ.

ಕೊಟ್ಟ ಮಾತಿನಂತೆ ಬಣ್ಣ ಬಳಿಯೊರು ಬರೋರು, ಅದು ರಾತ್ರಿ ವೇಳೆ. ಹಗಲಿನಲ್ಲಿ ವ್ಯಾಪಾರ ರಾತ್ರಿ ಸುಣ್ಣ-ಬಣ್ಣ ಬಳಿಯೊಕೆ ಪ್ರಶಸ್ತವಾದ ಸಮಯ. ಇಡೀ ರಾತ್ರಿ ಜಾಗರಣೆ ಮಾಡಿ ಕೆಲಸ ಮಾಡಿ ಮುಗಿಸೋರು. ಐದಾರು ದಿನದ ಕೆಲಸ. ರಾತ್ರಿ ಒಂಬತ್ತು ಗಂಟೆಗೆ ತಮ್ತಮ್ಮ ಮನೆಯಲ್ಲಿ ಉಂಡು-ತಿಂದು ಬಂದು ಕೆಲಸ ಶುರುವಿಟ್ಟುಕೊಳ್ಳವರು. ಪೂರ್ವ ಭಾವಿ ಎಂಬಂತೆ ಅಮ್ಮ ಮನೆ ತೊಳಿಯಲಿಕ್ಕೆ ಅಂತ ಸಾಕಷ್ಟು ನೀರು ತುಂಬಿಟ್ಟುಕೊಂಡು, ರಾತ್ರಿ ನಿದಿರೆ ಆವರಿಸದಿರಲಿ ಅಂತ ಮೂರ್ನಾಲ್ಕು ಸಲ ಚಹಾ ಮಾಡಲಿಕ್ಕೆ  ಹಾಲು ತಂದಿರಿಸಿಟ್ಟುಕೊಂಡಿರುತ್ತಿದ್ದಳು. ಚಹಾ ಕುಡಿದು, ಎಲೆ-ಅಡಿಕೆ ಆಕೊಂಡೆ ಕೆಲಸ ಪ್ರಾರಂಭಿಸುತ್ತಿದ್ದರು. ಮಾಲಿ ಸಿದ್ದಮ್ಮನ ಮಗಳು ಯಾವನ್ನೋ ತಗೊಂಡು ಓಡ್ಹೋದಳಂತೆ, ದ್ಯಾಮವ್ವನ ಮಗಳಿಗೆ ಹೆಣ್ಣು ಮಗುವಾಯ್ತಂತೆ, ಆ ನಿಂಗಮ್ಮನ ಮೊಮ್ಮಗಳು ತುಂಡು ಲಂಗ ತೊಟ್ಕೊಂಡು ಓಡಾತ್ತಿತ್ತು ಆಗಲೇ ಮೈನೆರತು ಕುಂತೈತಂತೆ..! ಇಷ್ಟಗಲ ಬಾಯಿ ತೆರೆದು ಅವರಿವರ ಮನೆ ಸಂಗತಿಗಳನ್ನೆಲ್ಲ ಮಾತಾಡಿಕೊಳ್ಳ ದಿದ್ದರೆ ಇವರ ಕೆಲಸಾನೇ ಸಾಗಲ್ಲ ಅನ್ನಿ.., ಅಂತೂ ಇಂತೂ ರಾತ್ರಿ ಬೆಳಗಿದ ಮೇಲೆ ನೋಡಿದರೆ ಅಚ್ಚರಿ ಕಾದಿರುತ್ತಿತ್ತು. ಮನೆ ಮದುವಣಗಿತ್ತಿ ಯಂತೆ ಸಿಂಗರಿಸಿಕೊಂಡು ನಿಂತಿರುತ್ತಿತ್ತು. ಸುಣ್ಣ ಸಂದರೆ ಅದೇ ಕಲ್ಲುಸುಣ್ಣ, ಬಣ್ಣವೆಂದರೆ ಡಿಸ್ಟಂಪರ್. ಅಂದಿಗೆ ಅದೇ ದೊಡ್ಡ ಮಾತಾಗಿರುತ್ತಿತ್ತು. ಯಾಕಂದರೆ ಸುಣ್ಣ-ಬಣ್ಣ ಕಾಣದ ಮನೆಗಳೇ ಹೆಚ್ಚಿರುತ್ತಿದ್ದವು ನಮ್ಮ ಹಳ್ಳಿಗಳಲ್ಲಿ.

ಐದಾರೂ ದಿನ ಕಳಿತು, ಎಲ್ಲ ಕೆಲಸ ಕಾರ್ಯ ಮುಗಿತು ಅಂತ ಸಮಾಧಾನಪಟ್ಟುಕೊಳ್ಳುವಂತಿರಲ್ಲಿ. ಅಮ್ಮ ಏನಾದರೂ ಒಂದು ಕೆಲಸ ಅಂತ ಕೂತುಬಿಡೋಳು, ಕದಕ್ಕೆ, ಬಾಗಿಲಿಗೆ, ಕಿಡಕಿಗೆ ಬಣ್ಣ ಬಳೆದದ್ದು ಆದ್ಮೇಲೆ, ಗೋಡೆ ಯೊಂದಿಗೆ ಮೂರ್ಬಟ್ಟು ಅಗಲ ಪಟ್ಟಿ ತೆಗೆಯೋಳು, ಇನ್ನು ಬಣ್ಣ ಮಿಕ್ಕಿದರೆ ತೂತೂ ಬಿದ್ದಿವೆ ಕಾಳು ಸೋರ್ತಾವೆ ಅಂತ್ಹೇಳಿ ಮೊರಕ್ಕೆ ಬಣ್ಣ ಬಳಿಯೋಳು. ದೀಪಾವಳಿ ಅಮವಾಸ್ಯೆ ದಿನ ಬಂತೆಂದರೂ ಕೂಡ ಅಮ್ಮನದು ಬಣ್ಣಬಳಿಯುವ ಕೆಲಸ ಮುಗಿದಿರುತ್ತಿರಲಿಲ್ಲ. ನಾನು ತಮಾಷೆಗೆ ಹೇಳುತ್ತಿದ್ದದು ನೆನಪಿದೆ, ಸಾಕ್ಬಿಡಮ್ಮ ಹಬ್ಬ ಮುಗದ್ಮೇಲೆ ಬಣ್ಣ ಬಳಿಯುವಂತೆ ಇವತ್ತು ಹಬ್ಬ ಮಾಡೋಕೆ ಬಿಡು ಅಂತ ಗೋಳ್ಹೋದುಕೊಳ್ಳುತ್ತಿದ್ದೆ. ಅದಕ್ಕೆ ಸಾಕು ಸುಮ್ಕಿರೆ, ಹೋಗಿ ನಿಮ್ಮ ಅಪ್ಪನ್ನ ಕರೆ ಎಂದು ಗದರುತ್ತಿದ್ದಳು.

ಅಮ್ಮ ದೀಪಾವಳಿ ಹಬ್ಬಕ್ಕೆಂದು ನಾಲ್ಕು ದಿನ ಮುಂಚಿತವಾಗಿ ಮನೆಯೆಲ್ಲರಿಗೂ ಹೊಸಬಟ್ಟೆ ತರುವುದು ವಾಡಿಕೆ. ಅದು ನಮ್ಮಿಷ್ಟದವು ಅಲ್ಲ ಅಮ್ಮನಿಷ್ಟದವು. ಹೋದ್ದೀಪಾವಳಿಗೆ ಜಾಂಬಳಿ ಬಣ್ಣದ ಲಂಗ, ಈ ದೀಪಾವಳಿಗೆ ನೀಲಿ ಬಣ್ಣದ್ದು ಲಂಗ, ನಿಮ್ಮಗೆ ಬಿಳಿ ಅಂಗಿ-ಲುಂಗಿ, ಬನಿಯನ್, ಅಂತ ಪಟ್ಟಿಮಾಡಿಸಿ ಧಿರಿಸು ತಂದಿರುಸುತ್ತಿದ್ದಳು. ಯಾವುದಾದರೂ ಒಂದು ಬಣ್ಣ ಕೆಟ್ಟಿತ್ತೆಂದರೆ ಮತ್ತೆ ಪೇಟೆಗೆ ಬದಲಿಸಿಕೊಂಡ ಬರಲು ತುದಿಗಾಲಿನಲ್ಲೇ ಓಡಿಸುತ್ತಿದ್ದಳು. ಅಮವಾಸ್ಯೆಯೆಂದು ನಸುಕಿನಲ್ಲೇ ಎದ್ದು ಕಸ ಉಡುಗಿ, ರಂಗೋಲಿ ಇಟ್ಟು, ನಮ್ಮೆಲ್ಲರನ್ನೂ ಎಬ್ಬಿಸಿ ಎಣ್ಣೆಯೊಂದಿಗೆ ತಲೆಸ್ನಾನ ಮಾಡಿಸಿ, ಹೊಸಬಟ್ಟೆ ತೊಡಿಸಿ, ಸಂಭ್ರಮಿಸುತ್ತಿದ್ದಳು. ಲಘುಬಗೆಯಿಂದ ತೊಗರಿಬೇಳೆ ಬೇಯಿಸಿ ಹುಣ್ಣದ ಹೋಳಿಗೆ, ಅನ್ನಾ-ಸಾರು ಮಾಡಿ ದೇವರ ಮುಂದೆ ದೀಪ ಹಚ್ಚಿ ನೈವೇದ್ಯ ಮಾಡಿ, ಎಡೆ ಹಿಡಿದು, ಉದಬ್ಬತ್ತಿ ಹಚ್ಚಿಟ್ಟು, ಕರ್ಪೂರ ಬೆಳಗಿ, ಕಾಯಿ ಒಡೆದು,ನಂತರ ಊರಲ್ಲಿರುವ ದೇವರ ಎಲ್ಲ ಗುಡಿಗಳಿಗೂ ದೀಪ-ಧೂಪ, ನೈವೇದ್ಯ, ಕಾಯಿ-ಕರ್ಪೂರವಾದ ಮೇಲೇನೇ ನಮ್ಮ ಹೊಟ್ಟೆಗೆ ಹಾಕಿಕೊಳ್ಳಲು ಅಮ್ಮ ಅಪ್ಪಣೆ ನೀಡುತ್ತಿದ್ದದ್ದು. ಇದರಲ್ಲಿ ಒಂದು ಏರುಪೇರಾದರೂ ಅಮ್ಮ ಚಂಡೀ ಅವತಾರ ತಾಳುತ್ತಿದ್ದಳು. ಯಾಕೆ ಹೀಗೆ ಮಾಡ್ತಾಳೆ ಅಂತ ಅಪ್ಪನನ್ನು ಕೇಳಿದರೆ, ನಿಮ್ಮ ಅಮ್ಮ ತುಂಬ ಒಳ್ಳೆಯವಳು, ಮೊನ್ನೆ ಸತ್ತಾಕಿಕಿಂತ ಬಹಳ ಪಾಡ..! ಆದರೆ ಅಮವಾಸ್ಯೆ-ಹುಣ್ಣಿಮೆ ಬಂದದಿನ ಹೀಗಾಡ್ತಾಳೆ ಅಂತಿದ್ದ. ಮೊನ್ನೆ ಸತ್ತಾಕಿ ಯಾರು..? ಅಂದರೆ ನಿಮ್ಮಪ್ಪನ ಎರಡನೆಯ ಹೆಂಡತಿ, ನನ್ನ ಸವತಿ, ನಿಮ್ಮ ಚಿಕ್ಕಮ್ಮ ಅಂತ್ಹೇಳಿ ಒಲೆ ಮುಂದಿನ ಡಬರಿ ಕುಕ್ಕಿಡುತ್ತಿದ್ದಳು ಅಮ್ಮ.

ಇನ್ನು ರಾತ್ರಿ ಸಮಯ 8.30 ಸುಮಾರಿಗೆ, ಸ್ವಾಮಿಗಳನ್ನು ಹೇಳಿದ ಸಮಯ ಅಂಗಡಿ ಪೂಜೆ. ಮಾವಿನ ತೋರಣ, ತೆಂಗಿನ ಗರಿ, ಅಡ್ಕಿ ಗಿಡ, ಬಾಳೆ ಗಿಡ, ಚಂಡುವಿನ ಮಾಲೆ, ಮಲ್ಲಿಗೆ ದಂಡೆ, ಮಲ್ಲಿಗೆ ಹೂವಿನ ಲಕ್ಷ್ಮೀ ತೊಟ್ಟಿಲು, ಸಮೇವು, ಕಳಸ, ತಾಮ್ರ ಚರಿಗೆ, ಬಾಳೆ ಹಣ್ಣಿನ ರಸಾಯನ, ಮಂಡಾಳ, ಕೊಬ್ಬರಿಚೂರು, ಪುಣಾಣಿ, ಬೆಲ್ಲ, ಹಾಕಿ ಪಣಿವಾರ ತಯಾರಿಸಿಟ್ಟು, ಸ್ವಾಮ್ಯಾರನ್ನ ಕರ್ಯಾಕೊಬ್ಬರನ್ನು, ಪೂಜೆಗೆ ಓಣಿಮಂದಿಯೆಲ್ಲರನ್ನು ಕರೆಯಲಿಕ್ಕೆ ನನ್ನನ್ನು ಕಳಸ್ತಿದ್ದಳು. ದೀಪಾವಳಿ ದಿನ ಸ್ವಾಮ್ಯಾರಿಗೆ ಬಲು ಡಿಮ್ಯಾಂಡು, ಜಲ್ದಿ ಕೈಗೆ ಸಿಗುತ್ತಿರಲಿಲ್ಲ, ನಾನು ಮಾತ್ರ ಒಂದಲ್ಲ, ಎರಡಲ್ಲ, ಮೂರ್ಮೂರು ಸರಿ ಕರದ್ಮೇಲೆ ಬರೋರು ಜನ. ನಾ ಬೇಗ ಬರದಿದ್ದಕ್ಕೆ ನನ್ನ ಬೆನ್ನಮೇಲೊಂದು ಗುದ್ದು ಯಾವತ್ತು ತಪ್ಪಿರಲಿಲ್ಲ ಅದು ಅಮ್ಮ ಪ್ರತಿ ದೀಪಾವಳಿಗೆ ಪ್ರೀತಿಯಿಂದ ನೀಡುವ ವಿಶೇಷ ಉಡುಗೊರೆ. ಪೂಜೆ ಮುಗಿದ ಮೇಲೆ ಓಣಿಯ ಆಪ್ತೆಷ್ಟರಿಗೆಲ್ಲ ಊಟ, ಸುಣ್ಣ-ಬಣ್ಣ ಬಳಿದವರಿಗೆ ಕೂಲಿಯ ಹಣದ ಜೊತೆಗೆ ಹಬ್ಬದ ಖುಷಿ ಯೊಂದಿಗೆ ಸೀರೆ-ರವಿಕೆಗಳ ಹೆಚ್ಚುವರಿ ಉಡುಗೊರೆ ಲಭಿಸುತ್ತಿತ್ತು. ನನ್ನ ವಾರಗೆಯ ಹುಡುಗರು ದನಕಾಯ್ದುಕೊಂಡು ಬರುವಾಗ ತಂದುಕೊಟ್ಟಿರುವ ಗುಬ್ಬಿಗೂಡುಗಳಿಗೆ ಬೆಂಕಿ ಹಚ್ಚಿ ಮನೆಯಂಗಣದಲ್ಲಿ ಸುರುಸರು ಬತ್ತಿಯಂತೆ ಉರಿಸಿ ಸಂಭ್ರಮಿಸುತ್ತಿದ್ದೆವು. ಗುಬ್ಬಿ ಗೂಡು ಹೊರಹೊಮ್ಮಿಸುವ ಬುರ್ ಬುರ್ ನಿನಾದ ಒಂಥರ ಖುಷಿ ನೀಡುತ್ತಿದ್ದವು. ಇದನ್ನು ಕಂಡು ಅಮ್ಮ ಗದರಿದ್ದು ನೆನಪಿದೆ : ಗುಬ್ಬಿಗೂಡುಗಳನ್ನು ಸುಡಬಾರದು, ಸುಟ್ಟರೆ ದೇವರು ಸುಟ್ಟವರ ಮನೆಗೆ ಬೆಂಕಿ ಯಿಡುತ್ತಾನೆ ಎಂದು.

ಬಾಲ್ಯದಲ್ಲಿ ನಾವು ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ನೀಡದ ದೇವರು, ದೇವರಂತಿರುವ ಅಮ್ಮನಿಗೆ ಶಿಕ್ಷೆವಿಧಿಸಿದ್ದ ಅಮ್ಮನ ಎದೆಗೂಡಿನಲ್ಲಿ ಬೆಂಕಿಯ ಉಂಡೆಯನ್ನಿಟ್ಟಿದ್ದ. ಅದಕ್ಕೆ ಡಾಕ್ಟರ್ ಕ್ಯಾನ್ಸರ್ ಎಂದು ಹೆಸರಿಟ್ಟರು. ಮೂರು ವರ್ಷ ಗಳ ಕಾಲ ಅಮ್ಮ ಒಂದು ತುತ್ತು ಅನ್ನ ಬಾಯ್ಗಿಡದೇ ಹಾಲು-ನೀರಿನೊಂದಿಗೆ ಉಪವಾಸದಂಥ ಕಠಿಣ ವ್ರತವನ್ನಾಚರಿಸಿ ಇಪ್ಪತ್ತು-ಒಂಬತ್ತನೆಯ ಮಾರ್ಚ್ – ಎರಡುಸಾವಿರದ ಇಪ್ಪತ್ತರಲ್ಲಿ ಅಮ್ಮನ ಪ್ರಾಣಪಕ್ಷಿ ಎದೆಗೋಡಿನಿಂದ ಹಾರಿತ್ತು ಎತ್ತಲೋ ತಿಳಿಯದೋ..? ಅಮ್ಮ ಹಳ್ಳಿಯ ಜನರ ಹಲವರ ಬಾಯಲ್ಲಿ ಹೌದಾಗಿ, ಕೆಲವರ ಬಾಯಲ್ಲಿ ಅಲ್ಲವಾಗಿ ಇನ್ನೂ ನೆಲೆಸಿದ್ದಾಳೆ. ಏಳು ತಿಂಗಳಿನ ಮುಂಚೆ ಅಮ್ಮನನ್ನು ಕಳೆದುಕೊಂಡವಿ, ಅಮ್ಮ ಸತ್ತತ್ತಿದ್ದಕ್ಕೆ ಸುತ್ತಿಕೊಂಡಿದೆ ಎಂದು ಹೇಳಲಾದ ದೋಷವನ್ನೂ ಕಳೆದುಕೊಂಡವಿ, ಅಮ್ಮನಿಲ್ಲದ  ಮೊದಲ ದೀಪಾವಳಿಯ ಖುಷಿಯನ್ನು ಕಳೆದುಕೊಂಡವಿ. ಅಮ್ಮನ ನೆನಪು ಮಾತ್ರ ಚಿರಸ್ಥಾಯಿಯಾದುದು.

 

 ದೀಪಾವಳಿ :

ನಾವಿದ್ದಾಗಲೇ

ಪಟಾಕಿ ಹೊಡೆದರದು

ಮನೆಯಲ್ಲಿ ಸಂಭ್ರಮದ

ದೀಪಾವಳಿ..!

ನಾವು ಹೋದ್ಮೇಲೆ

ಪಟಾಕಿ ಹೊಡೆದರದು

ಮನೆಯಲ್ಲಿ ಸಂತಾಪದ

ಸೂತಕಾವಳಿ..!

-ಸುಹಾನಿ ಎಸ್

 

ಯುಗಾದಿ, ದಸರಾ, ದೀಪಾವಳಿ :

ಯಾವತ್ತು..,

ಬೆಂಬಿಡದೆ ಕಾಡುವ ಯಕ್ಷಪ್ರಶ್ನೆ..!

ಬಾಳೆಂದರೇನು..?

ಉತ್ತರವದು ಸರಿಯೋ..? ತಪ್ಪೋ..?

ಬಾಳೆಂದರೆ..?

ಒಮ್ಮೆ ಹುಟ್ಟು

ಒಮ್ಮೆ ಸಾವು

ನಡುವಿನ ಬಾಳಿನಲಿ

ಬರೀ ಗೋಳು

ಮತ್ತೆ ಮತ್ತೆ ಬರುವ

ಯುಗಾದಿ..! ದಸರಾ..! ದೀಪಾವಳಿ..!

ಬೇವು ಬೆಲ್ಲ ಹಂಚುತ್ತೇನೆ

ಬಾಳಿನ ಕಹಿ ದೂರಾಗಲೆಂದು..!

ಹೊಸ ಬಟ್ಟೆತೊಟ್ಟು

ಬನ್ನಿ ನೀಡಿ ಸಂಭ್ರಮಿಸುತ್ತೇನೆ

ಬಾಳು ಬಂಗಾರವಾದೀತೆಂದು..!

ಭರವಸೆಯಿಂದಲಿ ದೀಪಗಳಚ್ಚುತ್ತೇನೆ

ಅಂಧಕಾರವ ಕಳೆಯಲೆಂದು,

ಪಟಾಕಿಗಳನ್ನು ಸಿಡಿಸುತ್ತೇನೆ

ಮನ ಬೆಳಗಲೆಂದು..!

-ಡಾ ಯಲ್ಲಮ್ಮ ಕೆ 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button