Kannada NewsKarnataka NewsLatestPolitics

*ಸ್ಟಿಂಗ್ ವಿವಾದದ ಬಳಿಕ ಮೊದಲ ಭೇಟಿ*: *ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ!*

ಪ್ರಗತಿವಾಹಿನಿ ಸುದ್ದಿ: ಸ್ಟಿಂಗ್ ಆಪರೇಷನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಚರ್ಚೆಯಲ್ಲಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಡಿಕೆಶಿ, ಮೈಸೂರಿನ ಕುವೆಂಪುನಗರದಲ್ಲಿರುವ ಸಿದ್ದರಾಮಯ್ಯ ಅವರ ನೂತನ ನಿವಾಸದಲ್ಲಿ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಮಂಡ್ಯದಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಡಿ.ಕೆ. ಶಿವಕುಮಾರ್ ಮೈಸೂರಿಗೆ ಆಗಮಿಸಿದರು. ಅಲ್ಲಿಂದ ನೇರವಾಗಿ ಕುವೆಂಪುನಗರದಲ್ಲಿರುವ ಸಿದ್ದರಾಮಯ್ಯ ಅವರ ಹೊಸ ಮನೆಗೆ ತೆರಳಿ ಭೇಟಿಯಾದರು. ಇಬ್ಬರು ನಾಯಕರ ನಡುವೆ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ.

ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ನಡುವೆ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿ, ವಿಡಿಯೋ ಪ್ರಸಾರಕ್ಕೆ ತಡೆಯಾಜ್ಞೆ ಪಡೆದಿದ್ದಾರೆ. ಪ್ರಕರಣದ ಬೆಳವಣಿಗೆಗಳ ನಡುವೆ ನಡೆದಿರುವ ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಸ್ಟಿಂಗ್ ಪ್ರಕರಣದ ಬಳಿಕ ಇಬ್ಬರು ನಾಯಕರ ನಡುವೆ ನಡೆದಿರುವ ಮೊದಲ ಭೇಟಿ ಇದಾಗಿರುವುದರಿಂದ, ಮಾತುಕತೆಯಲ್ಲಿ ಯಾವ ವಿಚಾರಗಳು ಚರ್ಚೆಯಾಗಿವೆ ಎಂಬ ಕುತೂಹಲವೂ ಮೂಡಿದೆ. ಆದರೆ, ಭೇಟಿಯ ವೇಳೆ ಚರ್ಚೆಯಾದ ವಿಷಯಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button