*ಕ್ಷೇತ್ರದ ಅಭಿವೃದ್ಧಿಗೆ ಮೊದಲ ಪ್ರಾಶಸ್ತ್ಯ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ, ಜನರಿಗೆ ಆಡಳಿತಾತ್ಮಕ ಸೇವೆಗಳು ಸುಲಭವಾಗಿ, ಪಾರದರ್ಶಕವಾಗಿ ದೊರೆಯಲಿ ಎಂಬ ಆಶಯದೊಂದಿಗೆ ಹಂದಿಗನೂರು, ವಸ ವಂಟಮೂರಿ ಗ್ರಾಮದಲ್ಲಿ ಗ್ರಾಪಂ ಕಚೇರಿಯಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಈ ಕಟ್ಟಡಗಳು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ವೇಗ ನೀಡಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಹಂದಿಗನೂರು, ಹೊಸ ವಂಟಮೂರಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿದ ನೂತನ ಗ್ರಾಮ ಪಂಚಾಯತ್ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಿಮ್ಮೆಲ್ಲರ ಸಹಕಾರದಿಂದ ಈ ಕಟ್ಟಡಗಳು ನಿರ್ಮಾಣವಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿ, ಕ್ಷೇತ್ರದ ಅಭಿವೃದ್ಧಿಗೆ, ಶಿಕ್ಷಣಕ್ಕೆ, ಶಾಲಾ ಮಕ್ಕಳ ಅನುಕೂಲಕ್ಕೆ ಸಹಾಯ-ಸಹಕಾರ ನೀಡಿ, ಗ್ರಾಪಂ ಸದಸ್ಯರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಮತದಾರರು ಮತ್ತೆ ನಿಮ್ಮನ್ನು ಗೆಲ್ಲಿಸುತ್ತಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಗಳು ಆರ್ಥಿಕವಾಗಿ ಸಬಲತೆ ಹೊಂದುವುದರ ಜೊತೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗ್ರಾಮೀಣ ರಸ್ತೆ, ಚರಂಡಿ ಮತ್ತಿತರ ಮೂಲಸೌಲಭ್ಯಗಳನ್ನು ಜನತೆಗೆ ಕಲ್ಪಿಸಬೇಕು. ನಾವು ವಿರೋಧಿಗಳ ಟೀಕೆಗಳಿಗೆ ಕಿವಿಗೂಡದೆ ಒಳ್ಳೆಯ ಕೆಲಸವನ್ನು ಮಾಡೋಣ. ಕೆಲಸಗಾರರು ಎಷ್ಟೇ ಕೆಲಸ ಮಾಡಿದ್ದರೂ ಅದರ ಬಗ್ಗೆ ಟೀಕಿಸುವವರು ಇದ್ದೆ ಇರುತ್ತಾರೆ. ಇದರಿಂದ ಕೆಲಸಗಾರನಿಗೆ ಇನ್ನಷ್ಟೂ ಹುಮ್ಮಸು-ಶಕ್ತಿ ಬರಲಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸ್ಪೂರ್ತಿಯಾಗಲಿದೆ. ಜನ ಸೇವೆ ಮಾಡುವುದರಲ್ಲಿ ನಾವು ಮಗ್ನರಾಗೋಣ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ್ , ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣಾ ಗುಳ್ಳಿ , ಹಂದಿಗನೂರು ಗ್ರಾಪಂ ಅಧ್ಯಕ್ಷ ಉಜ್ವಲ್ ಸುತ್ತಾರ, ಉಪಾಧ್ಯಕ್ಷ ದಯಾನಂದ, ಸುರೇಶ ಜಾಧವ್ , ನಾಗೇಶ , ಹೊಸ ವಂಟಮೂರಿ ಗ್ರಾಪಂ ಅಧ್ಯಕ್ಷ ಸಿದ್ದಪ್ ಹೊಳಿಕಾರ, ಜಿಪಂ ಸದಸ್ಯರಾದ ಸಿದ್ದು ಸುಣಗಾರ್ , ಸಚಿವರು ಆಪ್ತ ಸಹಾಯಕರಾದ ಜಂಗ್ಲಿ ಸಾಬ್ ನಾಯಕ್ , ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಈರಪ್ಪ ಪಾಟೀಲ್, ಗ್ರಾ ಪಂ ಸದಸ್ಯ ಹನುಮಂತ ಮುದ್ಗನ್ನವರ, ಮಾರುತಿ ಮಸ್ತಿ, ಮುಸ್ಲಿಂ ಸಮುದಾಯದ ಅಧ್ಯಕ್ಷರಾದ ಆರಿಫ್ ಮುಲ್ಲಾ , ಶಿಕ್ಷಕರು ಊರಿನ ಹಿರಿಯರು ಗ್ರಾಮಸ್ಥರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.



