ದೇಶದ ಮೊದಲ ಮಹಿಳಾ ಸೇನಾ ಭರ್ತಿ ರ್ಯಾಲಿ ಆರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಮಿಲ್ಟ್ರಿಗೆ ಮಹಿಳೆಯರನ್ನು ಸೇರಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ನೇಮಖಾತಿ ರ್ಯಾಲಿ ಬೆಳಗಾವಿಯಲ್ಲಿ ಇಂದು ಆರಂಭವಾಗಿದೆ.
ಇಂದಿನಿಂದ 5ನೇ ತಾರೀಖಿನವರೆಗೆ ರ್ಯಾಲಿ ನಡೆಯಲಿದ್ದು, 3 ಸಾವಿರ ಮಹಿಳೆಯರು ಪಾಲ್ಗೊಂಡಿದ್ದಾರೆ. ನಗರದಲ್ಲಿರುವ ಮರಾಠ ಲಘು ಪದಾತಿದಳ(ಎಂ.ಎಲ್.ಐ.ಆರ್.ಸಿ) ಕೇಂದ್ರದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ರ್ಯಾಲಿ ನಡೆಯುತ್ತಿದೆ.
ದೇಶದಲ್ಲಿ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಮಿಲಿಟರಿ ಪೊಲೀಸ್ ಭರ್ತಿ ರ್ಯಾಲಿಯ ಉಸ್ತುವಾರಿಯನ್ನು ನೇಮಕಾತಿ ವಿಭಾಗದ ಉಪ ಮಹಾನಿರ್ದೇಶಕರಾದ ದಿಪೇಂದ್ರ ರಾವತ್ ಅವರು ನೋಡಿಕೊಳ್ಳುತ್ತಿದ್ದಾರೆ.
ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದ ಅಭ್ಯರ್ಥಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್, ನಿಕೊಬಾರ್ ದ್ವೀಪಗಳು, ಪಾಂಡಿಚೇರಿ ರಾಜ್ಯದ ಲಕ್ಷದೀಪ ಹಾಗೂ ಮಾಹೆ ಜಿಲ್ಲೆಯ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ್ದ ಸುಮಾರು ಹದಿನೈದು ಸಾವಿರ ಅಭ್ಯರ್ಥಿಗಳ ಪೈಕಿ ಮೆಟ್ರಿಕ್ಯುಲೇಷನ್ ಮೆರಿಟ್ ಆಧಾರದ ಮೇಲೆ ಮೂರು ಸಾವಿರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಹ್ವಾನಿಸಲಾಗಿದೆ.
ದೈಹಿಕ ಪರೀಕ್ಷೆ, ಓಟ, ಉದ್ದ ಜಿಗಿತ ಮತ್ತು ಎತ್ತರ ಜಿಗಿತಕ್ಕೆ ಮೈದಾನವನ್ನು ಸಜ್ಜುಗೊಳಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮಿಲಿಟರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ದಿಪೇಂದ್ರ ರಾವತ್ ತಿಳಿಸಿದರು.
ಮಹಿಳೆಯರಿಗೆ ಅಗತ್ಯವಾದ ಆಹಾರ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಮಿಲ್ಟ್ರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಾಗಾವಿಯಲ್ಲಿ ಭಾರಿ ಮಳೆಯಾಗುತ್ತಿರುವುದು ನೇಮಕಾತಿ ರ್ಯಾಲಿಗೆ ಅಡ್ಡಿಯಾಗಬಹುದು ಎನ್ನುವ ಆತಂಕ ಮೂಡಿದೆ.
ಇದನ್ನೂ ಓದಿ –
ದೇಶದ ಪ್ರಪ್ರಥಮ ಮಹಿಳಾ ಸೇನಾ ಭರ್ತಿ ರ‍್ಯಾಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ