ಕಬ್ಬಿನ ಬೆಳೆಗೆ ಬೆಲೆ ನಿಗದಿ ಮಾಡಿ: ಉಗ್ರ ಸ್ವರೂಪದತ್ತ ಸಾಗಿದ ರೈತರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬೆಳೆಗೆ ಬೆಲೆ ನಿಗದಿ ಮಾಡದಿರುವದು ಖಂಡಿಸಿ ಹಾಗೂ ಯೋಗ್ಯ ಬೆಲೆ ನೀಡುವಂತೆ ಒತ್ತಾಯಿಸಿ ರೈತರು ರಸ್ತೆ ತಡೆದು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪದತ್ತ ಸಾಗುತ್ತಿದ್ದು, ಎಲ್ಲೆಂದರಲ್ಲಿ ರಸ್ತೆ ತಡೆದು ರೈತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಯೋಗ್ಯ ಬೆಲೆ ನೀಡುತ್ತಿಲ್ಲ ಹಾಗೂ ಈ ವರೆಗೆ ಕಬ್ಬು ಬೆಲೆ ನಿಗದಿ ಮಾಡದಿರುವದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಹಾಗೂ ಕೋಚರಿ ಗ್ರಾಮದ ಬಳಿ ರಸ್ತೆಗೀಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಚಿಕ್ಕೋಡಿ- ಬಾಗಲಕೋಟೆ ಮುಖ್ಯ ರಸ್ತೆ ಬಂದ್ ಮಾಡಿ ನಡೆಸಲಾಗುತ್ತಿದ್ದ ಪ್ರತಿಭಟನೆ ಈಗ ಅಥಣಿ – ಗೋಕಾಕ್ ರಸ್ತೆ ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ.
ಹಾರೂಗೇರಿ ಹಾಗೂ ಹಾರೂಗೇರಿ ಕ್ರಾಸ್ ನಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಿದ ನಂತರ ಕಾರ್ಖಾನೆ ಪ್ರಾರಂಭಿಸಬೇಕೆಂದು ರೈತರ ಆಗ್ರಹವಾಗಿದೆ.
ರೈತರ ಪ್ರತಿಭಟನೆಯಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇತ್ತ ಜಿಲ್ಲಾಡಳಿತ ಕೂಡಲೇ ರೈತರ ಸಮಸ್ಯೆ ಬಗೆಹರಿಸುವಂತೆ ಎಲ್ಲೆಡೆ ಆಗ್ರಹ ವ್ಯಕ್ತವಾಗುತ್ತಿದೆ.

