Kannada NewsKarnataka NewsLatest

ಪ್ರವಾಹ ಇನ್ನಷ್ಟು ಗಂಭೀರ: ಹುಣಶ್ಯಾಳದಲ್ಲಿ 200 ಜನ ಜಲಾವೃತ; ಮಳೆ ಸ್ವಲ್ಪ ಇಳಿಮುಖ

ಪ್ರವಾಹ ಇನ್ನಷ್ಟು ಗಂಭೀರ: ಹುಣಶ್ಯಾಳದಲ್ಲಿ 200 ಜನ ಜಲಾವೃತ

ಮೃತರ ಕುಟುಂಬಗಳಿಗೆ 5 ಲಕ್ಷ ರೂ.; 4 ತಂಡದಲ್ಲಿ ಸಮೀಕ್ಷೆ -ಸಿಎಂ ಹೇಳಿಕೆ

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಇಂದು ಬೆಳಗ್ಗೆಯಿಂದ ಬೆಳಗಾವಿಯಲ್ಲಿ ಸ್ವಲ್ಪಮಟ್ಟಿಗೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಪ್ರವಾಹ ಪರಿಸ್ಥಿತಿ ಮಾತ್ರ ರಾತ್ರಿಯಿಂದೀಚೆಗೆ ಇನ್ನಷ್ಟು ಗಂಭೀರವಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದು, ಇಂದು ನಗರವಲ್ಲದೆ, ಹುಕ್ಕೇರಿ, ಚಿಕ್ಕೋಡಿ ಪ್ರದೇಶಕ್ಕೂ ಭೇಟಿ ನೀಡಲಿದ್ದಾರೆ.

ಗೋಕಾಕ ತಾಲೂಕಿನ ಪ್ರವಾಹ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಹುಣಶ್ಯಾಳ ಪಿವೈಯಲ್ಲಿ 200ಕ್ಕೂ ಹೆಚ್ಚು ಜನ ಜಲಬಂಧಿಯಾಗಿದ್ದಾರೆ.

ಸವದತ್ತಿ ತಾಲೂಕಿನ ಇನಾಮಹೊಂಗಲದಲ್ಲೂ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಸ್ಥಳೀಯರು ತಾವೇ ಬೋಟ್ ತಯಾರಿಸಿ ಜನರನ್ನು ಸ್ಥಳಾಂತರಿಸುತ್ತಿದ್ದಾರೆ.

 

ಪ್ರವಾಹದಿಂದ ಜಿಲ್ಲೆಯಲ್ಲಿ 6 ಜನರು ಸಾವನ್ನಪ್ಪಿದ್ದು, ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಸಿಎಂ ಆದೇಶಿಸಿದ್ದಾರೆ. ಸಮರ್ಪಕ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವನರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಶೋಭಾ ಕರಂದ್ಲಾಚೆ, ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್ ಮತ್ತು ಸುರೇಶ ಅಂಗಡಿ ನೇತೃತ್ವದ 4 ತಂಡಗಳನ್ನು ಮಾಡಿ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ಸೂಚಿಸಲಾಗಿದೆ. ಅವರ ವರದಿಯಂತೆ ಪರಿಹಾರ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಹಲವಾರು ಬಡಾವಣೆಗಳು, ಕಾಂಪ್ಲೆಕ್ಸ್ ಗಳು, ಅಪಾರ್ಟ್ ಮೆಂಟ್ ಗಳು, ಮನೆಗಳು ಜಲಾವೃತವಾಗಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಒಂದೊಂದು ಕಾಲನಿಗಳ ಜನರ ಸ್ಥಿತಿ ಅಸಹನೀಯವಾಗಿದೆ.

ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರನ್ನು ಈವರೆಗೆ ಸ್ಥಳಾಂತರಿಸಲಾಗಿದೆ. ನಗರದಲ್ಲಿ 6 ಹಾಗೂ ಜಿಲ್ಲೆಯ ಹಲವೆಡೆ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ.

ಜಿಲ್ಲೆಯ ಬಹುತೇಕ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳು ಪರಿಹಾರ ಹಾಗೂ ಸಂತ್ರಸ್ತರ ನೆರವಿನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹೊಟೆಲ್ ಗಳು, ಖಾಸಗಿ ಸಂಸ್ಥೆಗಳು ಸಹ ಸಂತ್ರಸ್ತರ ನೆರವಿಗೆ ಬಂದಿವೆ. ಉದಯಭುವನ ಹೊಟೆಲ್ ವತಿಯಿಂದ ಭಾಗ್ಯನಗರದ ಸಿಟಿ ಹಾಲ್ ನಲ್ಲಿ ಸಂತ್ರಸ್ತರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ.

ಶಾಸಕ ಅಭಯ ಪಾಟೀಲ ಮತ್ತು ತಂಡ ಹಾಲು, ಬಿಸ್ಕತ್ ಮತ್ತಿತರ ಸಾಮಗ್ರಿ ವಿತರಣೆಗೆ ವ್ಯವಸ್ಥೆ ಮಾಡಿದೆ. ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಅನಿಲ ಬೆನಕೆ, ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಆನಂದ ಮಾಮನಿ, ಮಹಾಂತೇಶ ಕವಟಗಿಮಠ, ಅಂಜಲಿ ನಿಂಬಾಳಕರ್, ಗಣೇಶ ಹುಕ್ಕೇರಿ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ ಮೊದಲಾದವರು , ಜಿಲ್ಲೆಯ ಮಾಜಿ ಶಾಸಕರು, ಮಾಜಿ ಸಚಿವರು ಸಂತ್ರಸ್ತರ ನೆರವಿಗೆ ದಿನವಿಡೀ ಕೆಲಸ ಮಾಡುತ್ತಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button