ಬೆಳಗಾವಿ ಅರಣ್ಯ ಇಲಾಖೆ 3 ಅಧ್ವಾನ: ತನಿಖೆ, ಶಿಸ್ತು ಕ್ರಮಕ್ಕೆ ಸಚಿವರ ಆದೇಶ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಳಗಾವಿ ಅರಣ್ಯ ಇಲಾಖೆಯ 3 ಅಧ್ವಾನಗಳು ಕುರಿತು ತನಿಖೆ ನಡೆಸಿ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ 7 ದಿನಗಳಲ್ಲಿ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಸುಂದರೀಕರಣಕ್ಕಾಗಿ ಅರಣ್ಯ ಇಲಾಖೆಯೇ ಮರಗಳ ಮಾರಣ ಹೋಮ ನಡೆಸಿದೆ. ಕಚೇರಿಗೆ ಭೇಟಿ ನೀಡಿದ್ದ ಸಚಿವರು ಮೊದಲಾದ ಗಣ್ಯರಿಂದ ಆವರಣದಲ್ಲಿ ನೆಡಿಸಲಾಗಿದ್ದ ಗಿಡಗಳನ್ನೂ ಕತ್ತರಿಸಲಾಗಿದೆ ಎನ್ನುವ ಗಂಭೀರ ಆರೋಪವಿದೆ.
ಜೊತೆಗೆ, ಬೆಳಗಾವಿ ವಿಭಾಗದ ಭೂತರಾಮನಹಟ್ಟಿ ಕಿತ್ತೂರು ರಾಣಿಚೆನ್ನಮ್ಮ ಕಿರು ಮೃಗಾಲಯದಲ್ಲಿ ದಿ.27.09.2024ರಂದು ಬೋನಿನಲ್ಲಿದ್ದ ಸಿಂಹವೊಂದು ತನ್ನ ಆವರಣದಿಂದ ತಪ್ಪಿಸಿಕೊಂಡು ಮೃಗಾಲಯದ ಸಂದರ್ಶಕರ ಪ್ರದೇಶಕ್ಕೆ ಬಂದಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೂ ಇದು ಸಿಬ್ಬಂದಿಯ ತೀವ್ರ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪವಾಗಿರುತ್ತದೆ ಎಂದು ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಅಕ್ಟೋಬರ್ 2ರಂದು ಬೆಳಗಾವಿ ವಿಭಾಗದ ವಲಯ ಕಚೇರಿಯಲ್ಲಿ ಕೆಲವು ಸಿಬ್ಬಂದಿ ಸಮವಸ್ತ್ರವನ್ನೂ ಧರಿಸದೆ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮ ದಿನವನ್ನು ಆಚರಿಸಿ ಅಶಿಸ್ತು ಪ್ರದರ್ಶಿಸುತ್ತಾರೆ ಎಂದು ವಿವಿಧ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿ, ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಸಿಸಿಎಫ್ ದರ್ಜೆ ಅಧಿಕಾರಿಯಿಂದ ತನಿಖೆ ನಡೆಸಿ ಶಿಸ್ತುಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಈ ಮೂಲಕ ಸೂಚಿಸಿದೆ ಎಂದು ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ