Belagavi NewsBelgaum NewsKannada NewsKarnataka NewsLatest

ಜಲಪಾತಗಳ ವೀಕ್ಷಣೆಗೆ ಅರಣ್ಯ ಇಲಾಖೆಯಿಂದ ನಿಷೇಧ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಅರಣ್ಯ ಪ್ರದೇಶಗಳ ವಿವಿಧೆಡೆ ಇರುವ ಜಲಪಾತಗಳ ವೀಕ್ಷಣೆಗೆ
ತೆರಳುತ್ತಿರುವ ಸಾರ್ವಜನಿಕರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಸನ್ನಿವೇಶಗಳು
ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಂರಕ್ಷಿತ ಅರಣ್ಯದೊಳಗೆ
ಸಾರ್ವಜನಿಕರಿಗೆ ಪ್ರವೇಶ ಮತ್ತು ಜಲಪಾತಗಳ ವೀಕ್ಷಣೆಗೆ ಭಾನುವಾರದಿಂದ (ಜು.16)
ನಿರ್ಬಂಧ ಹೇರಿದೆ.
ಈ ಹಿಂದೆ ಅರಣ್ಯ ಪ್ರವೇಶಕ್ಕೆ ನಿಷೇಧದ ನಿಯಮ ಅರಣ್ಯ ಇಲಾಖೆಯಿಂದ ಜಾರಿಯಿದ್ದರೂ
ಮಳೆಗಾಲದ ಕೆಲದಿನಗಳ ಅವಧಿಯಲ್ಲಿ ಮಾತ್ರ ನೋಡಲು ಸಿಗುವ ನಿಸರ್ಗ ಸೌಂದರ್ಯವನ್ನು ತಮ್ಮ
ಕಣ್ತುಂಬಿಕೊಳ್ಳಲು ಪರಿಸರ ಪ್ರಿಯರಿಗೆ ಮತ್ತು ಚಾರಣಿಗರಿಗಾಗಿ ಅವಕಾಶ ನೀಡುವ ಸಲುವಾಗಿ
ಸಡಿಲಿಸಿತ್ತು. ಆದರೆ ಇಲಾಖೆಯ ಈ ಸಡಿಲಿಕೆಯನ್ನು ದುರ್ಬಳಕೆ ಮಾಡಿಕೊಂಡಿರುವ ಯುವ
ಪೀಳಿಗೆ ಇತ್ತೀಚಿನ ದಿನಗಳಲ್ಲಿ ಜಲಪಾತ ವೀಕ್ಷಣೆಯ ನೆಪದಲ್ಲಿ ಅನೈತಿಕ
ಚಟುವಟಿಕೆಗಳನ್ನು ನಡೆಸಿತ್ತು. ಅನೇಕ ಸಂದರ್ಭಗಳಲ್ಲಿ ತಮ್ಮ ಪ್ರಾಣಕ್ಕೆ ಸಂಚಕಾರ
ತಂದುಕೊಳ್ಳುವ ಸನ್ನಿವೇಶಗಳನ್ನು ತಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ
ಜಲಪಾತ ವೀಕ್ಷಣೆಗಾಗಿ ನಿಷೇಧದ ಕ್ರಮಕ್ಕೆ ಮುಂದಾಗಿದೆ.
ಶನಿವಾರ -ಭಾನುವಾರ ಮತ್ತು ರಜಾ ದಿನಗಳಂದು ಜಲಪಾತಗಳ ವೀಕ್ಷಣೆಗೆ ಚಾರಣಿಗರು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇದರಿಂದಾಗಿ ಅರಣ್ಯ ಪ್ರದೇಶದ ಶಾಂತತೆ ಮತ್ತು
ಪವಿತ್ರತೆಗೆ ಧಕ್ಕೆ ಉಂಟಾಗುತ್ತಿದೆ. ಕೆಲವರು ಜಾಲಿ ರೈಡ್, ರೀಲಿಂಗ್, ಸೆಲ್ಫಿ
ಮತ್ತಿತರ ದುಸ್ಸಾಹಸಗಳಿಗೆ ಕೈ ಹಾಕಿ ತೊಂದರೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ
ಅರಣ್ಯ ಇಲಾಖೆಯ ಮೇಲಧಿಕಾರಿಗಳ ಆದೇಶದಂತೆ ತಾಲ್ಲೂಕಿನ ಅರಣ್ಯ ಪ್ರದೇಶಗಳಿಗೆ ತೆರಳುವ
ಎಲ್ಲ ಮಾರ್ಗಗಳಲ್ಲಿ ನಾಕಾಬಂದಿ ಏರ್ಪಡಿಸಲಾಗಿದೆ. ಸೂಕ್ತ ಸಿಬ್ಬಂದಿ ನಿಯೋಜಿಸಲಾಗಿದೆ
ಮತ್ತು ಜಲಪಾತಕ್ಕೆ ತೆರಳುವ ಮುಖ್ಯ ರಸ್ತೆಗಳ ಪಕ್ಕದಲ್ಲಿ ನಿಷೇಧದ ಕುರಿತು ಮಾಹಿತಿ
ನೀಡುವ ಫಲಕಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಮಾನ-ಪ್ರಾಣ ರಕ್ಷಣೆ ಮತ್ತು ಅರಣ್ಯ
ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಇಲಾಖೆಯ
ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ವಲಯ ಅರಣ್ಯ ಅಧಿಕಾರಿ
ಕವಿತಾ ಈರನಟ್ಟಿ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಖಾನಾಪುರ ತಾಲ್ಲೂಕಿನ ಚೋರ್ಲಾ ಗ್ರಾಮದ ಬಳಿಯ
ಅರಣ್ಯದಲ್ಲಿರುವ ಜಲಪಾತ ವೀಕ್ಷಣೆಗೆಂದು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ
ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅರಣ್ಯದಲ್ಲಿ ಚಾರಣ ಮತ್ತು
ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರುವಂತೆ ಪೊಲೀಸ್ ಇಲಾಖೆ ಅರಣ್ಯ ಇಲಾಖೆಯ
ಅಧಿಕಾರಿಗಳನ್ನು ಆಗ್ರಹಿಸಿತ್ತು. ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆಯವರು
ಭಾನುವಾರದಿಂದ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಿದ್ದಾರೆ. ನಿರ್ಬಂಧದ ಮಧ್ಯೆಯೂ ಜಲಪಾತ
ವೀಕ್ಷಣೆಗೆ ತೆರಳುವವರ ವಿರುದ್ಧ ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ಕ್ರಮ
ಕೈಗೊಳ್ಳಲಿವೆ ಎಂದು ಸಿಪಿಐ ಮಂಜುನಾಥ ನಾಯ್ಕ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button