ಅರಣ್ಯ ಇಲಾಖೆ ತಂಡದ ದಾಳಿ; ಅಕ್ರಮ ಸಾಗವಾನಿ ಕಟ್ಟಿಗೆ, ಕಾಡುಹಂದಿ ಮಾಂಸ ವಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಗರಗಾಳಿ ಅರಣ್ಯ ಉಪವಿಭಾಗದ ಕುಂಬಾರ್ಡಾದಲ್ಲಿ ಮೂರು ಮನೆಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ತಂಡ ಅಕ್ರಮ ಸಾಗವಾನಿ ಕಟ್ಟಿಗೆ ಹಾಗೂ ಕಾಡುಹಂದಿಯ ಮಾಂಸ ವಶಪಡಿಸಿಕೊಂಡಿದೆ.
ಕುಂಬಾರ್ಡಾ ಕೃಷ್ಣಾ ನಗರ (ಗೌಳಿವಾಡಾ)ದಲ್ಲಿ ಗಂಗಾರಾಮ ದಾವು ಬೋಡಕೆ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ 7.088 ಘನ ಅಡಿಯ 6 ಸಾಗವಾನಿ ಕಟ್ಟಿಗೆಗಳು ಹಾಗೂ ಸುಮಾರು 500 ಗ್ರಾಂನಷ್ಟು ಬೇಯಿಸಿದ ಕಾಡುಹಂದಿ ಮಾಂಸ ವಶಪಡಿಸಿಕೊಂಡಿದ್ದಾರೆ.
ದೋಂಡು ಗಾವಡೆ ಎಂಬುವವರ ಮನೆಯ ಮೇಲೆ ದಾಳಿ ನಡೆಸಿ 3.463 ಘನ ಅಡಿಯ 10 ಸಾಗವಾನಿ ತುಂಡುಗಳನ್ನು ವಶಪಡಿಸಿಕೊಂಡಿದೆ. ಜ್ಞಾನೇಶ್ವರ ಬಮ್ಮು ವರಕ ಎಂಬುವವರ ಮೇಲೆ ದಾಳಿ ನಡೆಸಿ 71 ಸೋಫಾ ಪಟ್ಟಿಗಳನ್ನು ವಶಪಡಿಸಿಕೊಂಡಿದೆ. ಮೂವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬೆಳಗಾವಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ನಿರ್ದೇಶನದೊಂದಿಗೆ ಬೆಳಗಾವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಕೆ. ಕಲ್ಲೋಳಿಕರ, ನಾಗರಾಳಿ ಉಪವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ. ಕುಸನಾಳ ಮಾರ್ಗದರ್ಶನ, ನಾಗರಗಾಳಿ ವಲಯ ಅರಣ್ಯಾಧಿಕಾರಿ ರತ್ನಾಕರ ಓಬಣ್ಣವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಎಂ.ಎಸ್. ಲಚ್ಯಾಣ, ಕೆ.ಎಂ. ತನಂಗಿ, ಎಂ.ಬಿ. ಮೆಟಗುಡ್ಡ, ಗಸ್ತು ಅರಣ್ಯ ಪಾಲಕರಾದ ಫಕೀರಪ್ಪ ಬಾಂಗಿ, ಪ್ರಧಾನಿ ಸಿಂಗೆ, ಪುಂಡಲೀಕ ಲಾಡ್, ಅರಣ್ಯ ವೀಕ್ಷಕ ಲಕ್ಷ್ಮಣ ದೇವರಕೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ