ಮಾಜಿ ಶಾಸಕ ಸಂಜಯ ಪಾಟೀಲರಿಂದ ನೆರೆ ಸಂತ್ರಸ್ತರ ಭೇಟಿ, ಹಾನಿ ಪ್ರದೇಶ ಪರಿಶೀಲನೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ತಾಲೂಕಿನ ಬಾಗೇವಾಡಿ, ಮುತನಾಳ ಹಾಗೂ ಅರಳಿಕಟ್ಟಿ ಗ್ರಾಮಗಳಿಗೆ ಮಾಜಿ ಶಾಸಕರಾದ ಸಂಜಯ ಪಾಟೀಲ ಭೇಟಿ ನೀಡಿದರು. ಕಳೆದ ಹನ್ನೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿ, ಜನರ ಸಮಸ್ಯೆಗಳನ್ನು ಸ್ವತಃ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ನೊಂದವರಿಗೆ ತುರ್ತಾಗಿ ಪರಿಹಾರ ಕಾರ್ಯಗಳನ್ನು ಕೈಕೊಳ್ಳಲು ಸೂಚಿಸಿದರು.
ಅವರಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಾಥ್ ನೀಡಿದರು.
ಈ ನೆರೆಹಾವಳಿಯಿಂದ ಮನೆ ಕುಸಿತ, ಗೋಡೆ ಕುಸಿತ, ಆಸ್ತಿಪಾಸ್ತಿ ಹಾನಿ ಆದವರಿಗೆ ಸರ್ಕಾರದಿಂದ ನೆರವು ಕೊಡಿಸಲು ಅಗತ್ಯ ಕ್ರಮಕೈಗೊಳ್ಳಲು ಶ್ರಮಿಸುವುದಾಗಿ ಭರವಸೆ ನೀಡಿದರು. ಹಾನಿಗೊಳಗಾದ ಮನೆಗಳಿಗೆ, ಸೂರು ಕಳೆದುಕೊಂಡವರಿಗೆ ಹೊಸದಾಗಿ ಕಟ್ಟಡವನ್ನು ನಿರ್ಮಿಸಲು ಕೂಡಲೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಶ್ರಮಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಗಂಜಿ ಕೇಂದ್ರಗಳಿಗೆ ಭೇಟಿಕೊಟ್ಟು ನಿರಾಶ್ರಿತರಿಗೆ ಬಿಸ್ಕತ್ ವಿತರಿಸಿ ಸಾಂತ್ವನ ಹೇಳಿದರು.ಈ ಸಮಯದಲ್ಲಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಲಾವತಿ ಧರೆಣ್ಣವರ, ಎ.ಪಿ.ಎಮ್.ಸಿ ಸದಸ್ಯರಾದ ರೇಣುಕಾ ಪಾಟೀಲ, ಬಸಲಿಂಗಯ್ಯಾ ಮಠಪತಿ, ಫಡಿಗೌಡಾ ಪಾಟೀಲ, ಆನಂದ ಪೋಲೆಶಿ, ನಾಗೇಶ ಇಟಗಿ, ಮಾರುತಿ ಉಪ್ಪಾರ, ಶಂಕರ ರೊಟ್ಟಿ, ಯಲ್ಲಪ್ಪಾ ಧರೆಣ್ಣವರ, ಮಂಜುನಾಥ ಧರೆಣ್ಣವರ, ಶಂಕರ ಸೋನಪ್ಪನವರ, ವಿಶಾಲ ಮಠಪತಿ, ಈರ್ಪಾನ್ ಮುಲ್ಲಾ, ವಿಜಯ ಮಠಪತಿ, ಬಸು ಅರಳಿಕಟ್ಟಿ, ಬಸನು ಸಪ್ಪಡ್ಲಿ, ಶಂಕರಗೌಡಾ ದೊಡಗೌಡರ ಹಾಗೂ ಗ್ರಾಮಸ್ತರು ಪಾಲ್ಗೊಂಡಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ