Belagavi NewsBelgaum NewsKannada NewsKarnataka NewsLatest

*ಜೈ ಮಹಾರಾಷ್ಟ್ರ ಘೋಷಣೆ ಕೂಗಿದ ಮಾಜಿ ಶಾಸಕ*

ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆಯ ಮಾಜಿ ಶಾಸಕರಿಂದ “ಜೈ ಮಹಾರಾಷ್ಟ್ರ” ಘೋಷಣೆ:
ನಾಡವಿರೋಧಿ ಘೋಷಣೆ ವಿರುದ್ಧ ಕ್ರಮ ಜರುಗಿಸದ ತಹಸೀಲ್ದಾರ್ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

ಖಾನಾಪುರ: ಮಾಜಿ ಶಾಸಕ ದಿಗಂಬರ ಪಾಟೀಲ ತಮ್ಮ ಭಾಷಣದ ಕೊನೆಯಲ್ಲಿ “ಜೈ ಮಹಾರಾಷ್ಟ್ರ” ಎಂದು ಘೋಷಣೆ ಕೂಗುವ ಮೂಲಕ ಕನ್ನಡ ನಾಡುನುಡಿಯನ್ನು ಅವಮಾನಿಸಿದ ಘಟನೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಜರುಗಿದ ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಜರುಗಿದೆ.

Home add -Advt

ತಾಲ್ಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರ್ಕಾರಿ ಸಭೆಯಲ್ಲಿ ಕರ್ನಾಟಕ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಮಾಜಿ ಶಾಸಕರು ನಾಡವಿರೋಧಿ ಘೋಷಣೆ ಕೂಗಿದರೂ ಸಭೆಯಲ್ಲಿದ್ದ ತಹಸೀಲ್ದಾರ್ ದುಂಡಪ್ಪ ಕೋಮಾರ ಆಕ್ಷೇಪ ವ್ಯಕ್ತಪಡಿಸದೇ ಮೌನ ವಹಿಸುವ ಮೂಲಕ ಮಾಜಿ ಶಾಸಕರ ನಾಡವಿರೋಧಿ ಘೋಷಣೆಗೆ ಪರೋಕ್ಷ ಬೆಂಬಲ ನೀಡಿದರು.

ಕನ್ನಡ ನಾಡು ನುಡಿಯ ವಿಷಯದಲ್ಲಿ ಉದಾಸೀನ ವ್ಯಕ್ತಪಡಿಸಿದ ತಹಸೀಲ್ದಾರ್ ಅವರ ಈ ದೋರಣೆಯ ವಿರುದ್ಧ ತಾಲ್ಲೂಕಿನ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮಾಜಿ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರನ್ನು ಆಗ್ರಹಿಸಿವೆ.

ಮಾಜಿ ಶಾಸಕರು ಜೈ ಮಹಾರಾಷ್ಟ್ರ ಘೋಷಣೆಯನ್ನು ಕೂಗಿದ ಕೂಡಲೇ ಸಭೆಯಲ್ಲಿದ್ದ ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಗೂಳಣ್ಣವರ ಆಕ್ಷೇಪ ವ್ಯಕ್ತಪಡಿಸಿ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿರುವ ಸರ್ಕಾರದ ಸಭೆಯಲ್ಲಿ ಇಂತಹ ನಾಡವಿರೋಧಿ ಘೋಷಣೆ ಸೂಕ್ತವಲ್ಲ ಎಂದು ಆಕ್ಷೇಪಿಸಿದರು. ಆದರೆ ಸಭೆಯಲ್ಲಿದ್ದ ಶಾಸಕ ವಿಠ್ಠಲ ಹಲಗೇಕರ ಸೇರಿದಂತೆ ಇತರೆ ಅಧಿಕಾರಿಗಳು, ಮುಖಂಡರು ಮೌನ ವಹಿಸುವ ಮೂಲಕ ಮಾಜಿ ಶಾಸಕರ ನಾಡವಿರೋಧಿ ಘೋಷಣೆಗೆ ಪರೋಕ್ಷ ಬೆಂಬಲ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ಆ.15ರ ಸ್ವಾತಂತ್ರ ದಿನಾಚರಣೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸ್ವಚ್ಛತಾ ಆಭಿಯಾನವನ್ನು ಆಯೋಜಿಸಲಾಗುವುದು. ಈಗ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಳೆ ನೀರಿನ ಕೊಯ್ಲು ವಿಷಯ ಆಧರಿತ ಮಾದರಿಗಳನ್ನು ಸಿದ್ಧಪಡಿಸಿ ಆ.15ರ ಒಳಗೆ ಹಾಜರು ಪಡಿಸಬೇಕು. ಇದರಲ್ಲಿ ಉತ್ತಮ ಮಾದರಿ ಪ್ರಸ್ತುತ ಪಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಅದೇ ರೀತಿ ಸ್ವಾತಂತ್ರ ದಿನದಂದು ಕಳೆದೊಂದು ವರ್ಷದಲ್ಲಿ ನಿವೃತ್ತಿ ಹೊಂದಿದ ಭಾರತೀಯ ಸೈನಿಕರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಗುತ್ತದೆ” ಎಂದು ವಿವರಿಸಿದರು.

ಸಭೆಯಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು, ನಾಗರಿಕರು, ಸಿಬ್ಬಂದಿ ಇದ್ದರು.

ಖಾನಾಪುರದಲ್ಲಿ ಜರುಗಿದ ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಶಾಸಕ ವಿಠ್ಠಲ ಹಲಗೇಕರ ಮಾತನಾಡಿದರು. ಮಾಜಿ ಶಾಸಕ ದಿಗಂಬರ ಪಾಟೀಲ, ತಹಸೀಲ್ದಾರ್ ದುಂಡಪ್ಪ ಕೋಮಾರ ಇದ್ದರು.

Related Articles

Back to top button