*ಇಂದೋರನಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರ ಸಾವು: ಬೆಳಗಾವಿಗೆ ಮೃತದೇಹಗಳ ಆಗಮನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ದಿನಗಳ ಹಿಂದೆ ಬೆಳಗಾವಿಯ ಪ್ರವಾಸಿಗರು ಕುಂಭಮೇಳಕ್ಕೆ ಹೋಗುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೃತದೇಹಗಳು ಬೆಳಗಾವಿಗೆ ಆಗಮಿಸಿವೆ.
ಮಧ್ಯಪ್ರದೇಶದ ಇಂದೋರ್ ಬಳಿ ಟಿಟಿ-ಬೈಕ್-ಕ್ಯಾಂಟರ್ ಮಧ್ಯೆ ನಡೆದ ಸರಣಿ ಅಪಘಾತದಲ್ಲಿ ಬೆಳಗಾವಿಯ ಬಸವನಗಲ್ಲಿಯ ಟಿಟಿ ಚಾಲಕ ಸಾಗರ ಶಾಪುರಕರ ಪ್ರವಾಸಿಗರಾದ ಕ್ರಾಂತಿ ನಗರದ ನಿವಾಸಿ ನೀತಾ ಬಡಮಂಜಿ, ಶಿವಾಜಿನಗರದ ಸಂಗೀತಾ ಮೇತ್ರಿ, ವಡಗಾವಿಯ ಜ್ಯೋತಿ ಖಾಂಡೇಕರ ಮೃತರಾಗಿದ್ದು, ಮಧ್ಯಪ್ರದೇಶದಿಂದ ವಿಶೇಷ ಆ್ಯಂಬುಲೆನ್ಸ್ ಮೂಲಕ ನಾಲ್ವರ ಮೃತದೇಹಗಳು ಬೆಳಗಾವಿಗೆ ಆಗಮಿಸಿವೆ. ಮಧ್ಯಪ್ರದೇಶದ ಇಂದೋರ ನಿಂದ ಬೆಳಗಾವಿಗೆ ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ಅಲ್ಲಿನ ಸರ್ಕಾರವೆ ಕಳುಹಿಸಿದೆ.
ಇಂದು ಬೆಳಗ್ಗೆ ಬೆಳಗಾವಿ ತಾಲೂಕಿನ ಮುಕ್ತಿಮಠ ಬಳಿ ಮೃತದೇಹಗಳನ್ನು ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ಅವರು ಬರಮಾಡಿಕೊಂಡರು.
ಬಳಿಕ ವಡಗಾವಿಗೆ ಜ್ಯೋತಿ ಖಾಂಡೇಕರ, ಶಿವಾಜಿನಗರಕ್ಕೆ ಸಂಗೀತಾ ಮೇತ್ರಿ, ಕ್ರಾಂತಿ ನಗರಕ್ಕೆ ನೀತಾ ಬಡಮಂಜಿ ಹಾಗೂ ಬಸವನಗಲ್ಲಿಗೆ ಸಾಗರ ಶಾಪುರಕರ ಅವರ ಮೃತ ದೇಹಗಳನ್ನು ರವಾನಿಸಲಾಯಿತು. ಇಂದೆ ಪ್ರತ್ಯೇಕವಾಗಿ ನಾಲ್ವರ ಅಂತ್ಯಕ್ರಿಯೆ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ