*ಹಾಸನಾಂಬೆ ದೇವಸ್ಥಾನದ ಭದ್ರತೆಯಲ್ಲಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತ್ತು*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬೆ ದರ್ಶನೋತ್ಸವ ಭದ್ರತೆಯಲ್ಲಿ ಲೋಪ ಎಸೆಗಿರುವ ಆರೋಪದ ಮೇಲೆ ನಾಲ್ಕು ಜನ ಪೊಲೀಸ್ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.
ಅ.9 ರಿಂದ ಶುರುವಾಗಿರುವ ಹಾಸನಾಂಬೆಯನ್ನು ನೋಡಲು ಜನ ಕಿಕ್ಕಿರಿದು ಬರುತ್ತಿದ್ದಾರೆ. ಕ್ಷೇತ್ರದ ಆಡಳಿತ ಮಂಡಳಿ ಗೋಲ್ಮಾಲ್ ಆರೋಪವನ್ನೂ ಎದುರಿಸಿತ್ತು. ತಾಯಿಯ ದರ್ಶನದ ಮೊದಲ ದಿನವೇ ಮಳೆ ಅವಾಂತರ ಸೃಷ್ಟಿಸಿತ್ತು. ಈ ನಡುವೆ ಮತ್ತೊಮ್ಮೆ ಕರ್ತವ್ಯ ಲೋಪದ ಆರೋಪ ಕೇಳಿ ಬರುತ್ತಿದೆ. ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ದೇವಿಯ ದರ್ಶನದ ಮೊದಲ ದಿನವೂ ಕರ್ತವ್ಯ, ಐಡಿ ಕಾರ್ಡ್ ದುರುಪಯೋಗ ಮಾಡಿಕೊಂಡಿದ್ದ ಹಿನ್ನೆಲೆ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಬೇಜವಾಬ್ದಾರಿತನ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು.
ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಗೋಲ್ಡ್ ಪಾಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರ ಉಸ್ತುವಾರಿಗಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಆದರೆ ಈಗ ಇದೇ ಸಿಬ್ಬಂದಿಗಳಿಂದ ಕರ್ತವ್ಯ ಲೋಪವಾಗಿದ್ದು, ನಾಲ್ವರು ಅಮಾನತುಗೊಂಡಿದ್ದಾರೆ. ಗೋಲ್ಡ್ ಕಾರ್ಡ್ ಕೌಂಟರ್ನಲ್ಲಿ ಕುಳಿತಿದ್ದ ಸಿಬ್ಬಂದಿ ಭಕ್ತರ ಕಾರ್ಡ್ ಸ್ಕ್ಯಾನ್ ಮಾಡದೆಯೇ ಒಳಗೆ ಬಿಟ್ಟಿದ್ದಾರೆ.
ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಿರುವುದರಿಂದ ಗೋವಿಂದರಾಜ್ ಹಾಗೂ ಯೋಗಾನಂದ್ ಹಾಗೂ ವಿಎಗಳಾದ ಸಂತೋಷ್ ಅಂಬಿಗರ, ಶಿರಾಜ್ ಮಹಿಮಾ ಪಟೇಲ್ ಇವರನ್ನು ಅಮಾನತುಗೊಳಿಸಲಾಗಿದೆ.
ಸ್ಪಷ್ಟ ನಿರ್ದೇಶನಗಳಿದ್ದರೂ, ಅನಧಿಕೃತ ಪ್ರವೇಶಕ್ಕೆ ಅವಕಾಶ ನೀಡಿರುವುದು ಗಂಭೀರ ಉಲ್ಲಂಘನೆಯಾಗಿದೆ. ಸರ್ಕಾರಿ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಅಪರಾಧ. ಇಂತಹ ವರ್ತನೆ ಸರ್ಕಾರಿ ನೌಕರರಿಗೆ ಯೋಗ್ಯವಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.