*ಜೈಲಿನ ಭದ್ರತೆಗೆ ಸವಾಲು*: *ಗೋಡೆ ಹಾರಿ ನಾಲ್ವರು ಕೈದಿಗಳು ಪರಾರಿ, ರಾಜ್ಯಾದ್ಯಂತ ಪೊಲೀಸರಿಂದ ಶೋಧ*

ಪ್ರಗತಿವಾಹಿನಿ ಸುದ್ದಿ: ಜೈಲಿನೊಳಗಿದ್ದ ನಾಲ್ವರು ವಿಚಾರಣಾಧೀನ ಕೈದಿಗಳು ಭದ್ರತಾ ವ್ಯವಸ್ಥೆಯನ್ನೇ ಸವಾಲು ಹಾಕಿ ಪರಾರಿಯಾಗಿದ್ದಾರೆ. ಬೆಳಗಿನ ಜಾವ ಯಾರಿಗೂ ತಿಳಿಯದಂತೆ ಜೈಲಿನ ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಕೈದಿಗಳು ತಪ್ಪಿಸಿಕೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಛತ್ತೀಸ್ಗಢದ ಮಹಾಸಮುಂದ್ ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಪರಾರಿಯಾದವರನ್ನು ಪಂಚುರಾಮ್ ನಿಶಾದ್, ರಾಜೇಂದ್ರ ರಾಜ್ ಚೌಧರಿ, ಧರ್ಮವೀರ್ ಯೋಗಿ ಮತ್ತು ಲೀಲಾಧರ್ ಪಾಲ್ ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಮಾದಕ ವಸ್ತು ಸಂಬಂಧಿತ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದರೆ, ಮತ್ತೊಬ್ಬ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ.
ನಾಲ್ವರನ್ನು ಜೈಲಿನ ಐದನೇ ಬ್ಯಾರಕ್ನಲ್ಲಿ ಇರಿಸಲಾಗಿತ್ತು. ಸೋಮವಾರ (ನ.16) ಬೆಳಗಿನ ಜಾವ 3ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಜೈಲು ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದ್ದು, ವಿವಿಧ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಪರಾರಿಯಾದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಜೈಲಿನ ಭದ್ರತಾ ವ್ಯವಸ್ಥೆಯನ್ನು ದಾಟಿ ಕೈದಿಗಳು ಕಾಂಪೌಂಡ್ವರೆಗೆ ಹೇಗೆ ತಲುಪಿದರು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜೈಲಿನ ಒಳಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.
ಇದೇ ಜೈಲಿನಲ್ಲಿ ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. 2021ರ ಮೇ ತಿಂಗಳಲ್ಲಿ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಐವರು ಕೈದಿಗಳು ಇದೇ ಮಾದರಿಯಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ನಾಲ್ವರು ಕೈದಿಗಳು ಪರಾರಿಯಾಗಿರುವುದು ಜೈಲು ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

