Kannada NewsKarnataka NewsLatest

ರೈತರಿಗೆ ಪಂಗನಾಮ ಆರೋಪ; ವ್ಯಕ್ತಿ ಪೊಲೀಸ್ ವಶಕ್ಕೆ

ರೈತರಿಗೆ ಪಂಗನಾಮ ಆರೋಪ; ವ್ಯಕ್ತಿ ಪೊಲೀಸ್ ವಶಕ್ಕೆ

ಕಿತ್ತೂರು ಪೊಲೀಸರು ವಿಚಾರಣೆ ನಡೆಸುತ್ತಿರುವ ಜಿತೇಂದ್ರ ಚವರದ್ ಆಧಾರ ಕಾರ್ಡ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 

 ಪ್ರತಿ ತಿಂಗಳು ಬಾಡಿಗೆ ಕೊಡುತ್ತೇನೆ ಎಂದು ಹೇಳಿ ರೈತರಿಂದ 3 ಜೆಸಿಬಿ ಮತ್ತು 4 ಟ್ರ್ಯಾಕ್ಟರ್ ಪಡೆದ ವ್ಯಕ್ತಿಯನ್ನು ಇದೀಗ ಕಿತ್ತೂರು ಠಾಣೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಜಿತೇಂದ್ರ ಸದಾನಂದ ಚವರದ್ ಎಂಬ ವ್ಯಕ್ತಿ ಎಂಕೆ ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ರೈತರ ಬಳಿ 4 ತಿಂಗಳ ಹಿಂದೆ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಗಳನ್ನು ಪಡೆದಿದ್ದ.
 ನಾನು ರೈಲ್ವೇ ಗುತ್ತಿಗೆದಾರನಾಗಿದ್ದು, 5 ರೈಲ್ವೇ ಬ್ರಿಡ್ಜ್  ಮಾಡಿಸುತ್ತಿದ್ದೇನೆ.  ನನಗೆ ಜೆಸಿಬಿ ಹಾಗೂ ಟ್ರಾಕ್ಟರ್ ಗಳು  ಬಾಡಿಗೆಗೆ ಬೇಕಾಗಿವೆ. ಪ್ರತಿ ತಿಂಗಳು ಜೆಸಿಬಿಗೆ 80,000 ರೂಪಾಯಿ ಹಾಗೂ ಟ್ರಾಕ್ಟರ್  ಗೆ 35,000 ಸಾವಿರ ರೂಪಾಯಿ  ಕೊಡುತ್ತೇನೆ ಎಂದು ಹೇಳಿದ್ದ.
ಈ ಸಂಬಂಧ ಬಾಂಡ್ ಪೇಪರ್ ಮೇಲೆ 3 ವರ್ಷದ ಒಪ್ಪಂದ ಪತ್ರವನ್ನು ಸಹ ಮಾಡಿಕೊಳ್ಳಲಾಗಿತ್ತು. ಆದರೆ ಒಂದು ತಿಂಗಳ ಬಾಡಿಗೆ ಕೊಟ್ಟವನು ಮತ್ತೆ ಬಾಡಿಗೆಯನ್ನೂ ಕೊಟ್ಟಿಲ್ಲ. ನಮ್ಮ ಫೋನ್ ಸಹ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ರೈತರ ದೂರು.
ರೈತರು ಈ ಸಂಬಂಧ 2 ತಿಂಗಳ ಹಿಂದೆ ಕಿತ್ತೂರು ಠಾಣೆ ಪೊಲೀಸರನ್ನು ಸಂಪರ್ಕಿಸಿದಾಗ ಈ ಪ್ರಕ್ರಿಯೆ ಬೆಳಗಾವಿಯಲ್ಲಿ ನಡೆದಿರುವುದರಿಂದ ಬೆಳಗಾವಿಯಲ್ಲೇ ದೂರು ನೀಡುವತೆ ಸಲಹೆ ನೀಡಿದ್ದರು. ಬೆಳಗಾವಿಯ ಮಾಳಮಾರುತಿ ಠಾಣೆಯನ್ನೂ ರೈತರು ಸಂಪರ್ಕಿಸಿದ್ದರು.
ಆದರೆ ಪ್ರಯೋಜನವಾಗದಿದ್ದಾಗ ರೈತರು ಸ್ವತಃ ಎಲ್ಲಕಡೆ ಹುಡುಕಿದಾಗ ಗಜೇಂದ್ರಗಡದಲ್ಲಿ ಒಂದು ಜೆಸಿಬಿ ಪತ್ತೆಯಾಗಿತ್ತು. ಆ ಜೆಸಿಬಿಯನ್ನು ರೈತರೇ ಗಜೇಂದ್ರಗಡ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದರು.
ನಿನ್ನೆ ರೈತರು ಮತ್ತೆ ಕಿತ್ತೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ರೈತರಿಂದ ಲಿಖಿತ ಹೇಳಿಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ನಿಜವಾಗಿಯೂ ರೈತರಿಗೆ ಮೋಸವಾಗಿದೆಯೇ? ಒಪ್ಪಂದ ಉಲ್ಲಂಘನೆಯಾಗಿದೆಯೇ? ತಪ್ಪು ಯಾರದ್ದು ಎನ್ನುವ ಅಂಶಗಳ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button