Karnataka NewsLatest

ಸಂಪುಟ ವಿಸ್ತರಣೆಗೆ ಶುಕ್ರವಾರವೇ ಶುಭಮುಹೂರ್ತ?; ಬೆಳಗಾವಿಯಿಂದ ಯಾರು In? ಯಾರು Out?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಂತಿದೆ. ಬಿಜೆಪಿಯ ಮಾಸ್ಟರ್ ಮೈಂಡ್,  ಕೇಂದ್ರ ಗೃಹ ಸಚಿವ ಅಮಿತ ಶಾ ರಾಜ್ಯ ಭೇಟಿ ನಂತರ ಮೇ 6ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನುವ ದಟ್ಟ ವದಂತಿ ಹರಡಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಅದೇ ರೀತಿಯ ಹೇಳಿಕೆ ನೀಡಿದ್ದಾರೆ. ಇನ್ನು 2 -3 ದಿನದಲ್ಲಿ ಸಚಿವಸಂಪುಟ ವಿಸ್ತರಣೆಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಆದರೆ, ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಚಿತವಾಗಿ ಏನನ್ನೂ ಹೇಳುತ್ತಿಲ್ಲ.

ರಾಜ್ಯದಲ್ಲಿ ಸಚಿವಸಂಪುಟ ವಿಸ್ತರಣೆ ಸುದ್ದಿ ಹರಡಿದಾಗಲೆಲ್ಲ ಸಹಜವಾಗಿ ರಾಜಕೀಯ ಚಟುವಟಿಕೆಗಳು ಬುಗಿಲೇಳುತ್ತವೆ. ಆಕಾಂಕ್ಷಿಗಳು ಬೆಂಗಳೂರು, ದೆಹಲಿಗೆ ತೆರಳಿ ಲಾಬಿ ಮಾಡಲು ಶುರು ಮಾಡುತ್ತಾರೆ.

2023ರಲ್ಲಿ ವಿಧಾನ ಸಭೆ ಚುನಾವಣೆ ಇರುವುದರಿಂದ ಬಿಜೆಪಿ ಈ ಬಾರಿ ಎಚ್ಚರಿಕೆ ಹೆಜ್ಜೆ ಇಡಲಿದೆ ಎನ್ನುವುದು ಎಲ್ಲರ ನಿರೀಕ್ಷೆ. ಇದರಲ್ಲಿ 2 ಆಯಾಮಗಳಿವೆ. ಒಂದು, ವಿವಾದಾತೀತರನ್ನು ಬಳಸಿಕೊಂಡು ಸ್ವಚ್ಛ ಸಂಪುಟ ರಚನೆ, ಇನ್ನೊಂದು, ಚಾಣಾಕ್ಷರನ್ನು ಸಂಪುಟದಿಂದ ಹೊರಗಿಟ್ಟು ಪಕ್ಷದ ಚಟುವಟಿಕೆಗೆ ಬಳಸಿಕೊಳ್ಳುವುದು.

ಈ ಹಿನ್ನೆಲೆಯಲ್ಲಿ, ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯೇ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಂಪುಟದಲ್ಲಿರುವ ಕೆಲವರನ್ನು ಪಕ್ಷ ಸಂಘಟನೆಗಾಗಿ, ಇನ್ನು ಕೆಲವರನ್ನು ಅಸಮರ್ಥತೆ ಮತ್ತು ವಿವಾದಗಳ ಕಾರಣಕ್ಕಾಗಿ ಹೊರಹಾಕುವುದು. ಇದೇ ವೇಳೆ, ಕೆಲವು ಯುವ ಉತ್ಸಾಹಿಗಳನ್ನು, ಕೆಲಸಗಾರರನ್ನು ಸಂಪುಟದೊಳಗೆ ಸೇರಿಸಿಕೊಳ್ಳುವುದು.

ಇತ್ತೀಚಿಗೆ ಹಲವಾರು ವಿವಾದಗಳು ರಾಜ್ಯ ಬಿಜೆಪಿಯನ್ನು ಸುತ್ತಿಕೊಳ್ಳುತ್ತಿರುವುದರಿಂದ ಪಕ್ಷವನ್ನು ಸ್ವಚ್ಛಗೊಳಿಸುವ ಮೂಲಕ ರಾಜ್ಯದ ಜನರು ಬಿಜೆಪಿ ಮೇಲಿಟ್ಟಿರುವ ನಿರೀಕ್ಷೆ ಹುಸಿಗೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಕ್ಷದ ಮೇಲಿದೆ. ಚುನಾವಣೆ ಪೂರ್ವದಲ್ಲಿ, ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರುವಂತೆ ಮಾಡಲು ಆಗಬೇಕಿರುವ ಸಂಘಟನೆ ಮತ್ತು ಜನರ ವಿಶ್ವಾಸಗಳಿಸಿಕೊಳ್ಳುವ ಕೆಲಸ ಸರಕಾರ ಮತ್ತು ಪಕ್ಷದಿಂದ ಆಗಬೇಕಿದೆ.

ಯಾರು ಇನ್? ಯಾರು ಔಟ್?

ಸಚಿವಸಂಪುಟ ವಿಸ್ತರಣೆ ಸುದ್ದಿಯ ಹಿನ್ನೆಲೆಯಲ್ಲಿ ಈಗಾಗಲೆ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಸಂಪುಟದಲ್ಲಿ ಉಳಿದುಕೊಳ್ಳಲು ಕೆಲವರು, ಸಂಪುಟದೊಳಗೆ ಸೇರಿಕೊಳ್ಳಲು ಕೆಲವರು ಪ್ರಯತ್ನ ನಡೆಸಿದ್ದಾರೆ.

ಅನೇಕ ಹಿರಿಯ ಸಚಿವರನ್ನು ಈ ಬಾರಿ ಹೊರಗಿಟ್ಟು ಹೊಸಮುಖಗಳಿಗೆ ಆದ್ಯತೆ ನೀಡಲಾಗುತ್ತದೆ. ತನ್ಮೂಲಕ ಪಕ್ಷಕ್ಕೆ ಹೊಸ ಇಮೇಜ್ ನೀಡಲಾಗುತ್ತದೆ ಎನ್ನುವ ಸುದ್ದಿ ಇದೆ. ಹಾಗಾಗಿ ಹಿರಿಯ ಸಚಿವರುಗಳಿಗೆ ಆತಂಕ ಶುರುವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶಶಿಕಲಾ ಜೊಲ್ಲೆ ಮತ್ತು ಉಮೇಶ ಕತ್ತಿ ಹಾಲಿ ಸಚಿವರು. ಈ ಮೊದಲು ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ ಸಹ ಸಂಪುಟದಲ್ಲಿದ್ದರು. ರಮೇಶ ಜಾರಕಿಹೊಳಿ ಸಿಡಿ ಹಗರಣದಿಂದಾಗಿ ಹೊರಬಿದ್ದರೆ, ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಲಕ್ಷ್ಮಣ  ಸವದಿ ಮತ್ತು ಶ್ರೀಮಂತ ಪಾಟೀಲ ಅವರನ್ನು ಕೈಬಿಡಲಾಯಿತು.

ಶಶಿಕಲಾ ಜೊಲ್ಲೆ ಉತ್ತಮ ಕೆಲಸ ಮಾಡುತ್ತಿರುವುದರಿಂದ ಮತ್ತು ಸಂಘಪರಿವಾರದಲ್ಲಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಕೂಡ ಉತ್ತಮ ಸಂಬಂಧ ಹೊಂದಿರುವುದರಿಂದ ಅವರನ್ನು ಕೈಬಿಡುವ ಸಾಧ್ಯತೆ ಇಲ್ಲ.

ಈಗ ಜಿಲ್ಲೆಯಿಂದ ಅಭಯ ಪಾಟೀಲ ಅವರನ್ನು ಸೇರಿಸಿಕೊಳ್ಳಬಹುದೆನ್ನುವ ಸುದ್ದಿ ಇದೆ. ಪಕ್ಷ ನಿಷ್ಠೆ ಮತ್ತು ಅಭಿವೃದ್ಧಿ ಕೆಲಸಗಳಿಂದ ಅವರು ಪಕ್ಷದಲ್ಲಿ ವಿಶ್ವಾಸಗಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಹತ್ತಿರವಾಗಿದ್ದಾರೆ.

ಕುಡಚಿ ಶಾಸಕ ಪಿ.ರಾಜೀವ, ಸವದತ್ತಿ ಶಾಸಕ ಆನಂದ ಮಾಮನಿ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಸಹ ಸಂಪುಟ ಸೇರಿಲು ಪ್ರಯತ್ನ ನಡೆಸಿದ್ದಾರೆೆ. ರಮೇಶ ಜಾರಕಿಹೊಳಿ ಪ್ರಕರಣ ಇನ್ನೂ ಮುಗಿಯದಿರುವುದರಿಂದ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಅವರ ಬದಲು ಬಾಲಚಂದ್ರ ಜಾರಕಿಹೊಳಿ ಅವರನ್ನು ಪರಿಗಣಿಸಬಹುದು ಎನ್ನುವ ಸುದ್ದಿ ಇದ್ದರೂ, ಬಾಲಚಂದ್ರ ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟು ಸಂಪುಟ ಸೇರಲು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ.

ಬೆಳಗಾವಿ ಜಿಲ್ಲೆಯ ಮಟ್ಟಿಗೆ ಈ ಬಾರಿಯ ಸಚಿವಸಂಪುಟ ವಿಸ್ತರಣೆ ಹಲವು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಜಾರಕಿಹೊಳಿ ಸಹೋದರರ ವಿಷಯದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಲಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯ ದೃಷ್ಟಿಯಿಂದಲೂ ನಿರ್ಣಾಯಕವಾಗಲಿದೆ. 2023ರ ವಿಧಾನಸಭೆ ಚುನಾವಣೆಯ ದಿಕ್ಕು ಖಚಿತವಾಗಲಿದೆ.

ಸಂಪುಟ ವಿಸ್ತರಣೆ ಹಾಗೂ ಡಿಸಿಎಂ ಹುದ್ದೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button