*ಇನ್ಮುಂದೆ ವಿಧಾನಸೌಧದಲ್ಲಿ ಮಾಧ್ಯಮಗಳು ಒಂದೆ ಕಡೆ ನಿಂತು ವರದಿ ಮಾಡ್ಬೇಕು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರವು ಭದ್ರತೆಯ ನೆಪವೊಡ್ಡಿ ವಿಧಾನಸೌಧದಲ್ಲಿ ಮಾಧ್ಯಮಗಳ ಸಂಚಾರಕ್ಕೆ ಹೊಸ ನಿರ್ಬಂಧಗಳನ್ನು ಹೇರಿದೆ.
ವಿಧಾನಸೌಧ ಪಶ್ಚಿಮ ದ್ವಾರದ ಬಳಿ ನಿಗದಿಪಡಿಸಿದ ಸ್ಥಳ ಹೊರತುಪಡಿಸಿ ಇತರೆಡೆ ವರದಿಗಾರಿಕೆ ಮಾಡಲು ಮಾಧ್ಯಮಗಳಿಗೆ ನಿರ್ಬಂಧ ಹೇರಿ ರಾಜ್ಯ ವಾರ್ತಾ ಇಲಾಖೆ ಆದೇಶ ಹೊರಡಿಸಿದೆ.
ಗಣ್ಯರ ಭದ್ರತೆಗೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.
ಇದರನ್ವಯ, ಮಾಧ್ಯಮದವರು ನಿಗದಿತ ಸ್ಥಳಗಳಲ್ಲಿ ಮಾತ್ರ ಜನಪ್ರತಿನಿಧಿಗಳ ಪ್ರತಿಕ್ರಿಯೆ ಪಡೆಯಬೇಕು ಮತ್ತು ಕಾರಿಡಾರ್ಗಳಲ್ಲಿ ಕ್ಯಾಮೆರಾ ಬಳಕೆಗೆ ನಿಷೇಧ ಹೇರುವ ಹುನ್ನಾರ ನಡೆದಿದೆ ಎಂದು ವರದಿಯಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವಾರ್ತಾ ಇಲಾಖೆಗೆ ಪತ್ರ ಬರೆದಿದ್ದು, ಮಾಧ್ಯಮಗಳಿಗೆ ಕೆಲವು ಕಠಿಣ ಸೂಚನೆಗಳನ್ನು ನೀಡುವಂತೆ ತಿಳಿಸಿದೆ.
ಸದನದ ಒಳಗಿನ ಕಲಾಪಗಳನ್ನು ಚಿತ್ರೀಕರಿಸಲು ಖಾಸಗಿ ವಾಹಿನಿಗಳಿಗೆ ಈ ಹಿಂದಿನಿಂದಲೂ ನಿರ್ಬಂಧ ಮುಂದುವರಿಯುತ್ತಾ ಬಂದಿದೆ.
ಈ ನಿರ್ಬಂಧಗಳು ಪಾರದರ್ಶಕತೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ವಿರೋಧ ಪಕ್ಷಗಳು ಮತ್ತು ಮಾಧ್ಯಮ ಸಂಘಟನೆಗಳು ಟೀಕಿಸಿವೆ.



