Latest

ದಿ.ಎಂ.ಟಿ.ವಿ.ಆಚಾರ್ಯರ ಕಲಾ ಶೈಲಿಯ ಏಕಮಾತ್ರ ಕೊಂಡಿ-ದೃಶ್ಯ ಕಲಾವಿದ ಜಿ.ಎಂ.ಹೆಗಡೆ ತಾರಗೋಡ

ಲೇಖನ: ದತ್ತಾತ್ರೇಯ ಎನ್. ಭಟ್ಟ.
ಚಿತ್ರಗಳು: ಕಲಾವಿದರವು.

ದಿ.ಎಂ.ಟಿ.ವಿ ಆಚಾರ್ಯ(ಮಂಡಯಂ ತಣ್ಣೂರು ವೆಂಕಟ ಆಚಾರ್ಯ)ಕರ್ನಾಟಕದ ಚಿತ್ರಕಲಾರಂಗದಲ್ಲಿ ಜನಜನಿತ ಹೆಸರು. ಅತಿಶಯಿಸಿದ ಮಾನವ ಅಂಗ ಸೌಷ್ಠವ, ರಮಣೀಯತೆ, ಆಕರ್ಷಕ ವರ್ಣ ಲೇಪನ , ಶ್ರೀ ಸಾಮಾನ್ಯರನ್ನು ಸೆಳೆಯಬಲ್ಲ ಕಲಾ ನೈಪುಣ್ಯಒಳಗೊಂಡ ಅವರ ಸಂಯೋಜನಾಕೃತಿಗಳು ನಾಡಿನ ದೃಶ್ಯ ಕಲಾ ವಲಯದಲ್ಲಿ ‘ಆಚಾರ್ಯರ ಶೈಲಿ’ಎಂದೇ ಗುರುತಿಸಲ್ಪಡುವ ಮೂಲಕ ಎಂ.ಟಿ.ವಿ.ಆಚಾರ್ಯರನ್ನು ಒಂದು ಬಗೆಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಿಸಿವೆ.

ಅವರ ಕಲಾಶೈಲಿ 1970-80ರ ದಶಕದ ಹೊತ್ತಿಗೆ ನಾಡಿನ ಹಲಕೆಲವು ಚಿತ್ರ ಕಲಾಭ್ಯಾಸಿಗಳನ್ನು ಸೆಳೆಯಿತು.ಕೆಲವರು ಅವರ ನೇರ ಒಡನಾಟಕ್ಕೆ ಬಂದು ಅವರ ಕೈಯಲ್ಲಿ ಕಲಾಭ್ಯಾಸ ನಡೆಸಿದರು. ಅಂತಹವರುಗಳ ಪೈಕಿ ಸಿರಸಿಯ ತಾರಗೋಡ ಎಂಬ ಗ್ರಾಮೀಣ ಭಾಗದಿಂದ ಬಂದು ಇದೀಗ ನಾಡಿನ ಹಿರಿಯ ದೃಶ್ಯ ಕಲಾವಿದರುಗಳ ಪಟ್ಟಿಯಲ್ಲಿ ಒಬ್ಬರಾಗಿ ಗಣಿಸಲ್ಪಡುತ್ತಿರುವ ಗಣಪತಿ ಮಹಾಬಲೇಶ್ವರ ಹೆಗಡೆ ತಾರಗೋಡ ಕೂಡ ಒಳಗೊಳ್ಳುತ್ತಾರೆ.

ತಾರಗೋಡಿನ ಮಹಾಬಲೇಶ್ವರ ಹೆಗಡೆ-ದೇವಕಿ ಹೆಗಡೆ ದಂಪತಿ ಪುತ್ರರಾದ ಇವರು ಇದೀಗ 75ರ ವಸಂತದಲ್ಲಿ ಕ್ರಮಿಸುತ್ತಿದ್ದರೂ ,ಕೌಟುಂಬಿಕ ಜಂಜಡಗಳು ಕೀಟಲೆ ಕೊಡುತ್ತಿದ್ದರೂ ಚಿತ್ರಕಲೆ(ಅವಕಾಶ ಒದಗಿ ಬಂದರೆ ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮಾಧ್ಯಮಗಳಲ್ಲಿ ಶಿಲ್ಪಕಲೆ)ಸೃಜನೆಯಲ್ಲಿ, ಚಿತ್ರ ಕಲಾ ಚಟುವಟಿಕೆಗಳಲ್ಲಿ ಉತ್ಸಾಹಭರಿತರಾಗಿ ತೊಡಗಿಕೊಂಡಿರುವುದು ವಿಶೇಷ. ಮೊನ್ನೆ ಮೊನ್ನೆಯಷ್ಟೇ ಗದಗದ ವಿಜಯಕಲಾ ಮಂದಿರದ ಕಲಾಪ್ರದರ್ಶನದಲ್ಲಿ ತಮ್ಮ ಕೆಲವು ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ್ದ ಶ್ರೀಯುತರು ಇದೀಗ ದಾವಣಗೆರೆಯಲ್ಲಿ ದಾವಣಗೆರೆ ಚಿತ್ರ ಕಲಾ ಪರಿಷತ್ ಆಯೋಜಿಸಿರುವ 2ನೇ ದಾವಣಗೆರೆ ಚಿತ್ರ ಸಂತೆಯಲ್ಲಿ ತಮ್ಮ ಕಲಾಕೃತಿಗಳೊಂದಿಗೆ ಭಾಗಿಯಾಗಿದ್ದಾರೆ.

ಇವರು ಕ್ಯಾನವಾಸ್, ಹ್ಯಾಂಡ್ ಮೇಡ್ ಹಾಳೆಗಳ ಮೇಲೆ ಅನೇಕ ಚಿತ್ರಗಳನ್ನು ರಚಿಸಿದವರು. ಕ್ಯಾನವಾಸ್ ಮಾಧ್ಯಮದ ಮೇಲೆ ಆಕ್ರೆಲಿಕ್ಅಥವಾ ತೈಲವರ್ಣಗಳ ಮೂಲಕ ಚಿತ್ರ ರಚಿಸುವುದರಲ್ಲಿ ಇವರಿಗೆ ವಿಶೇಷ ಅಭಿರುಚಿ. ವಿಶ್ವಾಮಿತ್ರ-ಮೇನಕೆ,ಕೃಷ್ಣ-ರಾಧೆ,ವಿದುರಾತಿಥ್ಯ, ವಾಲಿ-ಸುಗ್ರೀವ ಕಾಳಗ ,ಯಕ್ಷಗಾನ ವೇಷಗಳು, ಇವೇ ಮೊದಲಾದ ವಿಷಯಗಳನ್ನು ಆಧರಿಸಿ ಕಲಾಕೃತಿಗಳನ್ನು ರಚಿಸಿದ್ದಾರೆ. ಅಪರೂಪಕ್ಕೆ ಆಗಾಗ ಕುತೂಹಲಕ್ಕೆ ‘ಮಾಡರ್ನ್’ಶೈಲಿಗೂ ಕೈ ಹಾಕುವುದುಂಟು.
ಇವರ ಚಿತ್ರಗಳಲ್ಲೆಲ್ಲಾ ಗುರು ಎಂ .ಟಿ.ವಿ ಆಚಾರ್ಯರ ಕಲಾಧೋರಣೆಯನ್ನೇ ಇವರೂ ಸಹ ಸಮರ್ಥಿಸಿದ್ದು, ಅವರ ಕಲಾ ಶೈಲಿಯನ್ನು ಅಳವಡಿಸಿ ಪ್ರದರ್ಶನ ಮಾಡುವ ಮೂಲಕ ತಮ್ಮ ಆದರ್ಶ ಕಲಾಗುರುಮಾರ್ಗವನ್ನು ಉಳಿಸಲು, ಕಲಾಸಕ್ತರಿಗೆ ಪರಿಚಯಿಸಲು ಪಣತೊಟ್ಟವರಂತೆ ಭಾಸವಾಗುತ್ತಾರೆ.

ಆದಾಗ್ಯೂ ಇವರ ಕೃತಿಗಳಲ್ಲಿ ಅಲ್ಲಲ್ಲಿ ಮಲೆನಾಡಿನ ಪರಿಸರದ ಶ್ರಿಮಂತಿಕೆ ಮೈದಳೆಯುವಲ್ಲಿ,ಬಣ್ಣಗಳನ್ನು ಸಂಲಗ್ನಗೊಳಿಸುವಲ್ಲಿ ತಮ್ಮ ವ್ಯಕ್ತಿಗತ ಛಾಪನ್ನು ಪಡಿಮೂಡಿಸಿರುವುದು ಕಂಡುಬರುತ್ತದೆ.

ಗದಗದ ಟಿ.ಪಿ.ಅಕ್ಕಿ ಯವರ ಕಲಾಶಾಲೆಯಲ್ಲಿ ಚಿತ್ರ ಕಲಾ ಡಿಪ್ಲೋಮಾ ಕಲಿತು,ನಂತರದ ಸಾಗರದಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರ ಕಲಾ ಮೇಷ್ಟ್ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಕಲಾರಚನೆಯಲ್ಲೇ ಹೆಚ್ಚು ಹೆಚ್ಚು ತಮ್ಮನ್ನು ತೊಡಗಿಸಿಕೊಂಡಿರುವ ಜಿ.ಎಂ.ಹೆಗಡೆಯವರು ಅಷ್ಟುಇಷ್ಟು ಹೋಮಿಯೋಪತಿ ಚಿಕಿತ್ಸೆ ಕೂಡ ಬಲ್ಲವರು. ಪುಟ್ಟ ಲೇಖನಗಳನ್ನು ಕೂಡ (ಅಪರೂಪಕ್ಕೆ)ಬರೆಯುವ ಹವ್ಯಾಸ ಉಳ್ಳವರು.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಸುತ್ತೂರು ಮಠದ ಪುರಸ್ಕಾರ, ಲಂಕೇಶ್ ಪ್ರಶಸ್ತಿ, ಡಾ.ರಾಜಕುಮಾರ್ ಪ್ರಶಸ್ತಿ ,ಹಲವಾರು ಸ್ಥಳೀಯ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಗಣಪತಿ ಮಹಾಬಲೇಶ್ವರ ಹೆಗಡೆಯವರನ್ನು ಸಿರಸಿಯ ಭಾಗದ ಕಲಾರಾಧಕ ವಲಯ,ಉತ್ತರ ಕನ್ನಡದ ಕಲಾಸಕ್ತ ಬಳಗ ಹೆಮ್ಮೆ-ಅಭಿಮಾನಗಳಿಂದ ಗುರುತಿಸಿ “ಕರ್ನಾಟಕ ರಾಜ್ಯೋತ್ಸವ”ದಂತಹ ಪ್ರತಿಷ್ಠಿತ ಪುರಸ್ಕಾರ ದೊರೆಯುವಂತೆ ಹಾರೈಸಬೇಕಾದ ಜರೂರು ಬಹಳ ಇದೆ.ಏಕೆಂದರೆ ಪ್ರತಿಭೆ ಅವಕಾಶ ವಂಚಿತ ಆಗದಂತೆ ಎಚ್ಚರಿಕೆ ವಹಿಸಬೇಕಾದುದು ಅವರ ತವರು ಜಿಲ್ಲೆಯ ಕಲಾವಿದ ವಲಯದ ಮತ್ತು ಕಲಾಸಕ್ತ ವಲಯದ ಜವಾಬ್ದಾರಿ ತಾನೇ?

ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣಿ

https://pragati.taskdun.com/traffic-route-change-in-belgaum-city/

ಇವೇ ನೋಡಿ ‘ಕರ್ನಾಟಕದ 7 ಅದ್ಭುತಗಳು’: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

https://pragati.taskdun.com/7-wonders-of-karnataka-cm-basavaraja-bommais-announcement/

*ಸುಮಗಲಂ ಪಂಚಮಹಾಭೂತ ಲೋಕೋತ್ಸವ; ಭಕ್ತರಿಗೆ ಮಹಾಪ್ರಸಾದ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ*

https://pragati.taskdun.com/kollapurakanerisumangalam-panchamahabhuta-lokotsava/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button