ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಡಿಎಪಿ, ಹಾಗೂ ಯುರಿಯಾ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಅಥಣಿ ತಾಲೂಕಿನ ತೆಲಸಂಗ ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ರೈತ ಸಮಸ್ಯೆಗಳ ಆಲಿಸಿದ ಅವರು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಬೇಕು. ಉತಾರಗಳಿಗೆ ಆಧಾರ್ ಜೋಡಣೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದರು.
ಇದೇ ವೇಳೆ ರೈತರು, ದ್ರಾಕ್ಷಿ ಬೆಳೆಯಿಂದಾಗುತ್ತಿರುವ ಸಮಸ್ಯೆಗಳನ್ನು ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಮುಖ್ಯ ಕಾರ್ನಿವರ್ಾಹಕ ಅಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಈ ಬಾರಿ ನೀರನ ಅಭಾವ ತಪ್ಪಲಿದೆ. ಜೆಜೆಎಂ ಯೋಜನೆಯಡಿ 24*7 ಕುಡಿಯುವ ನೀರಿನ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಆರಂಭಿಸಿ ನೀರಿನ ಅಭಾವ ತಪ್ಪಲಿದೆ ಎಂದು ತಿಳಿಸಿದರು.
ದ್ರಾಕ್ಷಿ ಬೆಳೆ ಸಂರಕ್ಷಣೆಗಾಗಿ ಕೋಲ್ಡ್ ಸ್ಟೋರೆಜ್: ವಿಜಯಪುರ ಜಿಲ್ಲೆಯ ತೊರವಿ ಬಳಿ ದ್ರಾಕ್ಷಿ ಸಂರಕ್ಷಣೆಗಾಗಿ ಸರ್ಕಾರದಿಂದ 15 ಸಾವಿರ ಮೆಟ್ರಿಕ್ ಟನ್ ಕೋಲ್ಡ್ ಸ್ಟೋರೆಜ್ ಆರಂಭಿಸಲಾಗುತ್ತಿದೆ. 2 ನೇ ಹಂತದ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ದ್ರಾಕ್ಷಿ ಬೆಳಗಾರರು ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು.
ವೀರ ಮಹಿಳೆ ಒನಕೆ ಓಬವ್ವ ಜಯಂತೋತ್ಸವ ಆಚರಣೆ: ಬಳಿಕ ತೆಲಸಂಗ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ವೀರ ಮಹಿಳೆ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಅಂಗನವಾಡಿ ಕೇಂದ್ರ, ರಸ್ತೆ, ಜೆಜೆಎಂ ಕಾಮಗಾರಿ, ಗ್ರಾಮ ಪಂಚಾಯತ ಕಟ್ಟಡಗಳ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯತ ಅಧ್ಯಕ್ಷರೊಂದಿಗೆ ಸಭೆ ನಡೆಸಿ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಶಾಲಾ, ಅಂಗನವಾಡಿ ಕೇಂದ್ರಗಳಿಗೆ ಬೆಂಚ್, ಕುರ್ಚಿ ಅಗತ್ಯ ಸೌಕರ್ಯ ಕಲ್ಪಸಬೇಕು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದರು. ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಯಶಸ್ಸು ಕಾಣುವುದರ ಜೊತೆಗೆ ಉನ್ನತ ಹುದ್ದೆಗೆ ಏರಬೇಕು ಎಂದ ಸಿಇಒ ರಾಹುಲ್ ಶಿಂಧೆ ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಆರೋಗ್ಯ ತಪಾಸಣೆ: ಐಗಳ ಗ್ರಾಮದಲ್ಲಿ ಆಯೋಜಿಸಲಾದ ಆರೋಗ್ಯ ಶಿಬಿರದಲ್ಲಿ ಭಾಗಿಯಾದ ಸಿಇಒ ಅವರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಗಮನ ಸೆಳೆದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಕಾರ್ಯನಿರ್ವಾಹಕ ಅಭಿಯಂತರರು ವೀರಣ್ಣ ವಾಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ರವೀಂದ್ರ ಮುರಗಾಲಿ, ಸಹಾಯಕ ನಿರ್ದೇಶಕರು(ಗ್ರಾ.ಉ) ಮೆಹೆಬೂಬ ಕೋತ್ವಾಲ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಹಳ್ಳೂರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಂಗಣ್ಣ ಬಿರಾದಾರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಕಾಗೆ, ಶಿಶು ಅಭಿವೃದ್ಧಿ ಅಧಿಕಾರಿ ರೇಣುಕಾ ಹೊಸಮನಿ, ಪಿಡಿಒ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು. ಸದಸ್ಯರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ