ವಿಶ್ವಾಸ ಸೋಹೋನಿ
ಗಣಪತಿ ಎಂದರೆ ಗಣಗಳ -ಸಮೂಹಗಳ ಅಧಿಪತಿ, ವಿಶ್ವದ ಎಲ್ಲ ಮಾನವ ಸಮಾಜಕ್ಕೆ ಒಡೆಯ. ಸರ್ವಗುಣಧಾರಿ, ಸರ್ವವಿದ್ಯೆಗಳಲ್ಲಿ ಪಾರಂಗತನು, ಅವನಿಗೆ ದ್ವಮಾತುರ, ಗಣಾಧೀಶ, ಹೇರಂಭ, ಏಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ದು:ಖಹರ್ತ, ಸುಖಕರ್ತ, ಲಂಬೋದರ, ವಿನಾಯಕ, ಗಜಮುಖ, ಗಜಾನನ, ಮೂಷಕವಾಹನ, ಮೋದಕಪ್ರಿಯ ಮುಂತಾದ ಅನೇಕ ಹೆಸರುಗಳಿವೆ. ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ಮಂಗಳಮೂರ್ತಿ ಎಂದು; ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರನೆಂದು; ದು:ಖವನ್ನು ದೂರ ಮಾಡಿ ಸುಖವನ್ನು ಕೊಡುವುದರಿಂದ ದು:ಖಹರ-ಸುಖಕರನೆಂದು ಅವನ ಮಹಿಮೆ ಇದೆ.
ಗಣೇಶನ ಹಬ್ಬವು ಪ್ರತಿವರ್ಷ ಭಾದ್ರಪದ ಮಾಸದಲ್ಲಿ ಚೌತಿಯಂದು ಆಚರಿಸುತ್ತಾರೆ. ಸದ್ಗುಣಗಳ ಮೂರ್ತಿ, ಗುಣಗಳ ಗಣಿ ಮತ್ತು ದಿವ್ಯ ಬುದ್ಧಿದಾತ ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು ಪ್ರಾರಂಭದಲ್ಲಿ ಗಣೇಶನ ಪೂಜೆಯನ್ನು ಮಾಡುವ ವಾಡಿಕೆ ಇದೆ. ಗಣೇಶನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ ಬಣ್ಣವನ್ನು ಹಚ್ಚಿ, ಶೃಂಗಾರ ಮಾಡಿ ಪೂಜೆ ಮಾಡುವರು. ೧, ೩, ೫, ೭, ದಿನಗಳ ಕಾಲ ಮತ್ತು ಅನಂತ ಚತುರ್ದಶಿಯಂದು ಗಣಪನ ವಿರ್ಸಜನೆ ಮಾಡುವರು. ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ಗುಣಗಳನ್ನು ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದು. ಅದಕ್ಕೆ ಆತ್ಮeನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ಅಂದರೆ ಗಣ ಹಾಗೂ ಗುಣಗಳ ಅಧಿಪತಿ. ಇದರ ನಿಜವಾದ ಅರ್ಥ ’ಮಾನವನ ವಿನಾಶಿ ಶರೀರವು ಪಂಚತತ್ವಗಳಿಂದ ತಯಾರಾಗಿದೆ. ನಾವೆಲ್ಲರೂ ಆತ್ಮರಾಗಿದ್ದೇವೆ. ಆತ್ಮವನ್ನು ಜಾತಿ ಇಲ್ಲದ ಜ್ಯೋತಿ ಎಂದು ತಿಳಿದು, ದಿವ್ಯಗುಣಗಳಿಂದ ಶೃಂಗಾರ ಮಾಡಿಕೊಂಡಾಗ ನಾವೂ ಸಹ ಪೂಜೆಗೆ ಯೋಗ್ಯರಾಗುವೆವು. ಪಂಚವಿಕಾರಗಳ ತ್ಯಾಗದಿಂದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಆತ್ಮವು ಶರೀರ ಬಿಟ್ಟು ಹೋದ ಮೇಲೆ ದೇಹವು ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ನಮ್ಮ ಜೀವನವು ಗಣಪತಿಯಂತೆ ೪ ದಿನಗಳ ಬಾಳಾಗಿದೆ. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನ ಗುಣಗಳನ್ನು ಅಳವಡಿಸಿಕೊಂಡು ನಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳೋಣ.
ಲಂಬೋದರನೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ತಪ್ಪುಗಳನ್ನು ತನ್ನ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸುವವನು ಎಂದರ್ಥ. ಇಲಿಯ ಮೇಲೆ ಸವಾರಿಯು ಮನಸ್ಸು ಹಾಗೂ ಬುದ್ಧಿಯ ಮೇಲೆ ನಿಯಂತ್ರಣ ಹೊಂದಿರುವುದರ ಪ್ರತೀಕವಾಗಿದೆ. ಗಜಮುಖವು ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಗರಿಕೆ ಹಸಿರು ಪರಿಸರದ ಸಂಕೇತವಾಗಿದೆ. ಮೋದಕಪ್ರಿಯನೆಂದರೆ ಸ್ನೇಹ ಮತ್ತು ಮಧುರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡವನು ಎಂದರ್ಥ. ಬ್ರಹ್ಮಚಾರಿ ವಿನಾಯಕನಿಗೆ ಇಬ್ಬರು ಪತ್ನಿಯರು ಸಿದ್ಧಿ ಮತ್ತು ಬುದ್ಧಿ ಎಂದು ಹೇಳುತ್ತಾರೆ. ಇದರ ಅರ್ಥವಾಗಿದೆ – ಪ್ರವೃತ್ತಿ ಮಾರ್ಗದಲ್ಲಿದ್ದರೂ ನಾವು ಪವಿತ್ರತೆಯ ಬಲದಿಂದ ಸಿದ್ಧಿ ಮತ್ತು ಬುದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.
ಸಾಮರಸ್ಯ, ಏಕತೆ ಮತ್ತು ಸಂಘಟನೆಯ ಉದ್ದೇಶದಿಂದ ‘ಲೋಕಮಾನ್ಯ ತಿಲಕರು’ ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ವಾಸ್ತವವಾಗಿ ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು. ಆದರೆ ಗಣಪತಿಯ ಹಬ್ಬವು ಇಂದು ವಿಕರಾಳ ರೂಪವನ್ನು ತಾಳಿದೆ. ಅಶ್ಲೀಲ ಹಾಡುಗಳು ಎಲ್ಲಾ ಕಡೆಗಳಲ್ಲಿಯೂ ಕೇಳಿ ಬರುತ್ತಿದೆ. ಗಣಪನ ಸ್ಥಾಪನೆ-ವಿರ್ಸಜನೆಯ ಸಮಯದಲ್ಲಿ ಅನೇಕ ಪ್ರಕಾರದ ಗಲಾಟೆ, ಗುಂಪುಘರ್ಷಣೆ, ಹಿಂಸಾಚಾರ ಮತ್ತು ಕೋಮುಗಲಭೆಗಳು ನಡೆಯುತ್ತಿವೆ. ಇದಕ್ಕೆ ವಿಚಾರವಂತರು, ಬುದ್ಧಿಜೀವಿಗಳು, ಚಿಂತಕರು, ಎಲ್ಲರೂ ಸೇರಿದರೆ ಕಡಿವಾಣ ಹಾಕಬಹುದು.
ಹವಾಮಾನ ವೈಪರೀತ್ಯದಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಗಣೇಶ ಹಬ್ಬದ ಆಚರಣೆಯಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ತಯಾರಿಸಿ, ಅದಕ್ಕೆ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೇಕು. ಹಾಡು ಮತ್ತು ವಾದ್ಯಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸಿಡಿಮದ್ದುಗಳನ್ನು ಬಳಸಬಾರದು. ಇದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯವನ್ನು ತಡೆಯಬಹುದು.
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ|
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ||
ವಕ್ರದಂತ ಹಾಗೂ ಮಹಾಕಾಯವನ್ನು ಹೊಂದಿರುವ, ಕೋಟಿಸೂರ್ಯರಿಗೆ ಸಮಾನವಾದ ಪ್ರಭೆ ಹೊಂದಿರುವ ಹೇ ಗಣೇಶ, ನನ್ನ ಪ್ರತಿ ಕಾರ್ಯವು ಸದಾ ನಿರ್ವಿಘ್ನವಾಗಿರಲಿ.
ವಿಶ್ವವಾಪಿಯಾಗಿರುವ ಗಣಪತಿಯ ಮಂದಿರಗಳು
ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ, ಗೋವ, ಗುಜರಾತ್, ಮಹಾರಾಷ್ಟ, ಒರಿಸ್ಸಾ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮುಂತಾದ ಎಲ್ಲ ರಾಜ್ಯಗಳಲ್ಲಿ ಗಣೇಶನ ಸಾವಿರಾರು ದೇವಾಲಯಗಳು ಇವೆ. ಅದರಲ್ಲೂ ಈ ಕೆಳಗಿನ ಪ್ರಾಚೀನ ದೇಗುಲಗಳು ಭವ್ಯವಾಗಿವೆ. ಮಹಾರಾಷ್ಟ್ರದ ಸ್ವಯಂಭು ಗಣಪತಿ(ಗಣಪತಿಪುಳೆ), ಸಿದ್ಧಿವಿನಾಯಕ(ಮುಂಬೈ), ದಗಡುಶೇಠ್ ಗಣಪತಿ ಮತ್ತು ಮಂಡಯಿ ಗಣಪತಿ (ಪೂನ); ರಾಜಸ್ಥಾನದ ರಂಥಮಭೋರೆ ಗಣೇಶಜಿ; ತಮಿಳುನಾಡಿನ ಕರಪಾಗಾ ವಿನಾಯಕ ಮತ್ತು ರಾಕ್‌ಫೋರ್ಟ್‌ನ ಉಚ್ಚಿಪಿಲ್ಲಯಾರ; ಪಾಂಡಿಚೆರಿಯ ಮನಕುಲ ವಿನಾಯಗಾರ; ಕೇರಳದ(ಕಾಸರಗೋಡು) ಮಧುರ ಮಹಾಗಣಪತಿ; ಕರ್ನಾಟಕ(ಹಂಪಿ)ದ ಸಾಸುವೆಕಾಳು ಕಡಲೆಕಾಳು ಗಣೇಶ; ಗಣೇಶಟೋಕ್, ಗ್ಯಾಂಕ್ಟಾಕ್ ಸಿಕ್ಕಿಂ; ಮೋತಿ ಡೊಂಗರಿ ಗಣೇಶ, ಡೊಂಗರಿ ಹಿಲ್ಸ್; ಕೊಟದ ಕಾಲೆ ಗಣೇಶಜಿ ಮುಖ್ಯವಾದವುಗಳಾಗಿವೆ. ಇದಲ್ಲದೇ ಪೂನ ಜಿಲ್ಲೆಯ ಸ್ವಯಂಭುವಾದ ಅಷ್ಟವಿನಾಯಕಗಳ ಮಹಿಮೆಯು ಅಪಾರವಾಗಿದೆ. ಅವುಗಳೆಂದರೆ ಮೋರೆಗಾವ್‌ನ ಮೋರೇಶ್ವರ; ಸಿದ್ಧಿಟೇಕ್‌ದ ಸಿದ್ದಿವಿನಾಯಕ; ಪಾಲಿಯ ಬಲ್ಲಾಳೇಶ್ವರ; ಖೊಪೋಲಿಯ ವರದ ವಿನಾಯಕ; ಥೇವುರ್‌ನ ಚಿಂತಾಮಣಿ; ಲೇನ್ಯಾದ್ರಿಯ ಗಿರಿಜಾತಮಜ; ಒಝರದ ವಿಘ್ನಹಾರ; ರಂಜನಗಾವ್‌ನ ಮಹಾಗಣಪತಿಗಳು ಪ್ರಸಿದ್ಧವಾಗಿವೆ.
ಮೋದಕ ಪ್ರಿಯ ಗಣೇಶನ ದೇಗುಲಗಳು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕಂಡು ಬರುತ್ತವೆ. ಅಫ್ಘಾನಿಸ್ಥಾನದಲ್ಲಿ ಗಾರ್‌ಡೇಜ್; ಕಾಂಬೋಡಿಯಾದಲ್ಲಿ ಕಾಂಡಲ; ಇಂಡೋನೇಶಿಯಾದ ಬಾಲಿಯಲ್ಲಿ ಉಬದ; ಮಲೇಶಿಯಾದಲ್ಲಿ ಪಾಸರ್, ಜಲನ ಇಪೋಹ, ಕೊಟಲು ಮಲಾಯಿ, ಕೌಲಕುಬು ಬಾರು, ಜಲನ ಪುಡು, ಲಾಮ, ಸೆರಾಂಬನ್, ಮೆಲಕ ಬೆಹರಂಗ್ ಉಲು, ಪೆರಾಕ್, ಇಪೋಹ ಕ್ಲಾಂಗ್, ಕೌಂತಾನ್, ಪುಲಾಯ ಪಿನಾಂಗ, ಸಂದಕನ್, ಸಿತಿವನ್; ನೇಪಾಳದಲ್ಲಿ ಭಕ್ತಪುರ, ಬುಂಗಾಮಾತಿ, ಚೋಬಾರ, ಕಾಠ್ಮಂಡು, ಗೋರಖಾ, ಜನಕೋಪುರ, ಫುಲಹಾರ; ಸಿಂಗಾಪುರದಲ್ಲಿ ಸಿಲೋನ್ ರಸ್ತೆ, ಕಿಯಂಗ್ಸಿಯಕ್ ರಸ್ತೆ; ಶ್ರೀಲಂಕಾದಲ್ಲಿ ಚುಲಿಪುರಮ್, ಇನುವಿಲ್, ಮಾಣಿಪಯ್, ಮುರಿಕಾಂದಿ, ನಲ್ಲುರ, ನೀರವೇಲಿ, ಅಲವೆದ್ದಿ, ಬಟ್ಟಿಕಾಲೊ, ಕೊಲಂಬೊ, ಬಾಮಬಲಪಿಟಿಯ, ಕಾಂಡಿ, ಥೆನ್ನಾಕ್ಕುಂಬರ; ವಿಯೆಟ್ನಾಂ; ಸೌಥ್ ಆಫ್ರಿಕಾದಲ್ಲಿ ಡರ್ಬನ್, ಲೇಡಿಸ್ಮಿತ್, ಮಿ ಎಡ್ಜೆಕೊಂಬೆ; ಡಚ್‌ಲ್ಯಾಂಡ್‌ನಲ್ಲಿ ಹಾಲ್ಟಿನ್ಗೇನ್ ಹಮ್ಮ, ಹೆಲಿಬೊನ್; ಆಸ್ಟ್ರೇಲಿಯಾದಲ್ಲಿ ಬ್ರಿಸ್ಬೇನ್, ಎಮ್‌ಕ್ಲಿನ್, ಅಡಿಲೇಡ್, ಡಾರ‍್ವಿನ್, ಹೊಂ ಬುಶ್ ವೆಸ್ಟ್, ಮೆಲ್ಬರ್ನ್; ಕೆನಡಾದಲ್ಲಿ ಬ್ರಾಂಟನ್, ಎಡ್ಮನ್‌ಟನ್, ರಿಚ್ಮಂಡ್‌ಹಿಲ್ಸ್, ಸ್ಕಾರ್‌ಬೊರೊಹ್, ಟೊರಂಟೊ; ಯು.ಎಸ್.ಎ ನಲ್ಲಿ ಅನ್‌ಚೊರೆಜ್, ಫ್ಲಶಿಂಗ್ ನ್ಯಾಶ್‌ವಿಲ್ಲೆ, ನ್ಯೂಯಾರ್ಕ್, ಸಿಟ್ಟೆಲ್; ಫ್ರಾನ್ಸ್‌ನಲ್ಲಿ ಪ್ಯಾರಿಸ್, ರಿಲ್ಲಿಕ್ಸ-ಲಾ-ಪಾಪೆ(ಲಿಯಾನ್); ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಬಾಸೆಲ್ ಚುರ್, ಜಿನೇವಾ, ಝುಗ್; ಸ್ವೀಡನ್‌ನಲ್ಲಿ ಸ್ಟಾಕ್‌ಹೋಮ್; ಗ್ರೇಟ್ ಬ್ರಿಟನ್‌ನಲ್ಲಿ ಲಂಡನ್ ಮುಂತಾದ ಕಡೆಗಳಲ್ಲಿ ಗಣಪತಿಯ ಮಂದಿರಗಳಿವೆ.
ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸುವುದರಲ್ಲಿ ಮಹಾರಾಷ್ಟ್ರದ ಪೂನ, ಮುಂಬೈ ಹಾಗೂ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮುಂಚೂಣಿಯಲ್ಲಿವೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಸಾವಿರಾರು ಮೂರ್ತಿಗಳನ್ನು ಅಲಂಕಾರ ಮಾಡಿ ೧೦ ದಿನಗಳ ಕಾಲ ವಿಜೃಂಭಣೆಯಿಂದ ಪೂಜಿಸಿ ವಿಸರ್ಜನೆ ಮಾಡಲಾಗುತ್ತದೆ. ಆದರೆ ಈ ಸಾರಿ ಸಾರ್ವಜನಿಕ ಉತ್ಸವಕ್ಕೆ ಕಡಿವಾಣ ಹಾಕಲಾಗಿದೆ. ಕೊರೋನ ಪಡೆಂಭೂತದ ಕಾರಣ ಸರ್ಕಾರ ಹಾಕಿಕೊಟ್ಟ ಹಲವು ನಿಯಮಗಳನ್ನು ಪಾಲಿಸಬೇಕಾಗಿದೆ.
ಗಣೇಶನ ಆರಾಧನೆಗಾಗಿ ಶಕ್ತಿಶಾಲಿ ಮಂತ್ರಗಳು.
೧. ಓಂ ಶ್ರೀ ಗಣೇಶಾಯ ನಮ:
೨. ಓಂ ಗಂ ಗಣಪತಯೇ ನಮ:
೩. ಓಂ ವಕ್ರತುಂಡಾಯ ನಮ:
೪. ಓಂ ಕ್ಷಿಪ್ರ ಪ್ರಸಾದಾಯ ನಮ:
೫. ಓಂ ಶ್ರೀಮ್ ಹ್ರಿಮ್ ಕ್ಲಿಂ ಗ್ಲೌಮ್ ಗಂ ಗಣಪತಯೇ ವಾರಾ ವರದಾಯ ಸರ್ವ ಜನ್ಮನೇ ವಾಶಾಮನಾಯ ಸ್ವಾಹ:
೬. ಓಂ ಸುಮುಖಾಯ ನಮ:
೭. ಓಂ ಏಕದಂತಾಯ ನಮ:
೮. ಓಂ ಕಪಿಲಾಯ ನಮ:
೯. ಓಂ ಗಜಕರ್ಣೇಕಾಯ ನಮ:
೧೦. ಒಂ ಲಂಬೋದರಾಯ ನಮ:
೧೧. ಓಂ ವಿಕಟಾಯ ನಮ:
೧೨. ಓಂ ವಿಘ್ನ ನಾಶನಾಯ ನಮ:
೧೩. ಓಂ ವಿನಾಶಕಾಯ ನಮ:
೧೪. ಓಂ ಧುಮ್ರಕೇತುವೆ ನಮ:
೧೫. ಓಂ ಗಣಾಧ್ಯಕ್ಷಾಯ ನಮ:
೧೬. ಓಂ ಬಾಲಚಂದ್ರಾಯ ನಮ:
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ