ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ ೧೫೦ನೇ ವರ್ಷಾಚರಣೆಯ ನಿಮಿತ್ತ ಹಮ್ಮಿಕೊಂಡ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ. ಸಿ.ಎಂ.ತ್ಯಾಗರಾಜ ಾಗಮಿಸಿದ್ದರು.
ಗಾಂಧೀಜಿಯವರು ೧೯೨೦ರ ನಂತರದಲ್ಲಿ ಕನ್ನಡಕ ಹಾಕಿಕೊಂಡಿದ್ದನ್ನು ಛಾಯಾಚಿತ್ರಗಳಲ್ಲಿ ನೋಡಬಹುದು. ಗಾಂಧೀಜಿಯವರ ಕನ್ನಡಕ ಮೂರು ಬಗೆಯ ದೃಷ್ಟಿಗಳನ್ನು ತಿಳಿಸುತ್ತದೆ. ಸಮೀಪ ದೃಷ್ಟಿ, ದೂರ ದೃಷ್ಟಿ ಹಾಗೂ ಒಳ ದೃಷ್ಟಿಗಳನ್ನು ನೋಡಬಹುದು. ಗಾಂಧೀಜಿಯವರ ಕನ್ನಡಕವನ್ನು ’ಗಾಗಲ್’ ಎನ್ನುವ ಪರಿಭಾಷೆಯಲ್ಲಿ ಬಳಸುವುದೇಕೆಂದರೆ ಅವರು ತಮ್ಮ ಕನ್ನಡಕದ ಮೂಲಕ ಇತರರಿಗೆ ತಂಪನ್ನೆರದಿದ್ದಾರೆ.
ಹಾಗಾಗಿ ಅವರ ಕನ್ನಡಕ ಜನತೆಗೆ ಗಾಗಲ್ ಆಗಿ ಪರಿವರ್ತನೆಯಾಗಿದೆ ಎಂದರೆ ತಪ್ಪಿಲ್ಲ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಪರಿಶ್ರಮ-ಲೇಬರ ಎಕನಾಮಿಕ್ಸ್ ಬಗ್ಗೆ ಹೇಳಿದ ಗಾಂಧೀಜಿಯವರ ಸಮೀಪ ದೃಷ್ಟಿ, ಸರ್ವಧರ್ಮ, ಸ್ವದೇಶಿ ಕುರಿತ ದೂರದೃಷ್ಟಿ ಹಾಗೂ ಸಂಯಮದ ಕುರಿತಿರುವ ಒಳದೃಷ್ಟಿಯನ್ನು ನಾವು ಇವತ್ತಿಗೆ ಅಂದರೆ ೧೫೦ ವರ್ಷಗಳ ನಂತರವೂ ದುರ್ಬಿನ್ ಹಾಕಿ ನೋಡಲೇಬೇಕಾಗಿದೆ.
ಗಾಂಧೀಜಿಯವರು ಸ್ವರ್ಗಸ್ಥರಾದಾಗ ಮೌಂಟ್ ಬ್ಯಾಟನ್ ನೆಲದ ಮೇಲೆ ಕುಳಿತಿರುವ ಛಾಯಾಚಿತ್ರ ಹಾಗೂ ವಿಶ್ವಸಂಸ್ಥೆ ಎಲ್ಲ ಧ್ವಜಗಳನ್ನು ಕೆಳಗಿಳಿಸಿರುವುದರ ಸಂಕೇತ ಗಾಂಧೀಜಿಯವರು ಎಂಥಹ ಮಹಾನ್ ಆತ್ಮ ಎನ್ನುವುದನ್ನು ತಿಳಿಸುತ್ತದೆ. ವ್ಯವಸ್ಥೆಯನ್ನು ಸರಿಪಡಿಸುವುದರತ್ತ ಇದ್ದ ಗಾಂಧೀಜಿಯವರ ದೂರದೃಷ್ಟಿಯ ಜೊತೆಗೆ ಮೊದಲು ತಾನು ಬದಲಾಗಬೇಕು, ನಂತರ ಸುತ್ತಲ ಪರಿಸರವನ್ನು ಬದಲಾಯಿಸಬೇಕು ಎನ್ನುವುದರ ಜೊತೆಗೆ ಮಾನವೀಯತೆ, ನಂಬಿಕೆಗಳು ಮನುಷ್ಯನಲ್ಲಿ ಇರಬೇಕು ಎಂದರು.
ನಂಬಿಕೆಗಳೇ ಮುಂದೆ ಯೋಜನೆಗಳಾಗುತ್ತವೆ. ಆದರೆ ಇವತ್ತಿನ ಜಾಗತೀಕರಣದ ಯುಗದಲ್ಲಿ ಗೂಗಲ್ ಹೇಗೆ ಸಾರ್ವಭೌಮತ್ವನ್ನು ಹೊಂದಿದೆ. ತಾಂತ್ರಿಕ ಏಕಸಾಮ್ಯವನ್ನು ಹೊಂದುವ ಪ್ರಯತ್ನದಲ್ಲಿದೆ. ಗೂಗಲ್ ಸಮಯವನ್ನು ಗೆದ್ದಿರಬಹುದು ಆದರೆ ಜಗತ್ತನ್ನು ಗೆಲ್ಲುವುದು ವಿಫಲ. ಶಾಂತಿ, ಸಮಾಧಾನ, ಪ್ರೀತಿ, ನಂಬಿಕೆ, ವಿಶ್ವಾಸಗಳು ಗೂಗಲ್‌ನಂತಹವು ಕೊಡಲು ಸಾಧ್ಯವಿಲ್ಲ. ಅವುಗಳನ್ನು ಪಡೆಯಲು ನಮಗೆ ಗಾಂಧಿಜಿಯವರ ವಿಚಾರ ಧಾರೆಗಳು ಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮನುಷ್ಯನ ಸಂವೇದನಾಶೀಲತೆಗೆ ಮನೋನಿಗ್ರಹ ಬಹಳ ಪ್ರಮುಖವಾದದ್ದು. ಮನೋನಿಗ್ರಹ ಮಾಡಿಕೊಳ್ಳದ ಮನುಷ್ಯನಿಂದ ಬಹುದೊಡ್ಡ ಅಚಾತುರ್ಯಗಳು ನಡೆದು ಹೋಗುತ್ತವೆ. ಅಂತಹವುಗಳಲ್ಲಿ ಒಂದು ಗಾಂಧೀಜಿಯವರ ಹತ್ಯೆ ಎನ್ನುವುದನ್ನು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯನವರು ಹೇಳಿದರು.
ಜ್ಞಾನ ಮತ್ತು ಕರ್ಮಯೋಗಗಳ ಕುರಿತು ಗಾಂಧಿಜಿಯವರು ತಿಳಿ ಹೇಳಿದ್ದನ್ನು ಪಠ್ಯಗಳಲ್ಲಿ ತಂದು ವಿದ್ಯಾರ್ಥಿಗಳಿಗೆ ತಿಳಿಸುವ ಅವಶ್ಯಕತೆ ಇವತ್ತಿನ ದಿನಗಳ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳ ತುರ್ತು ಎಂದರು.
ಸಂಯೋಜಕರಾದ ಡಾ. ಶೋಭಾ ನಾಯಕ ಇವರು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಗಾಂಧೀಜಿಯವರ ವಿಚಾರ ಧಾರೆಗಳ ಚಿಂತನ-ಮಂಥನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದಕ್ಕೆ ಕಾರಣ ಗಾಂಧೀಜಿಯವರು ತತ್ವಜ್ಞಾನಿಯಾಗಿ ನಮ್ಮ ನಡುವೆ ನಿಲ್ಲುವುದರಿಂದ. ಹಾಗಾಗಿ ವಿಶ್ವವಿದ್ಯಾಲಯಗಳಲ್ಲಿ ಮತ್ತೆ ಮತ್ತೆ ಗಾಂಧೀಜಿಯವರು ಚರ್ಚಿತವಾಗುವುದು ಸಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ನಾಗರತ್ನ ಪರಾಂಡೆ, ಡಾ. ಗಜಾನನ ನಾಯ್ಕ, ಡಾ. ಮಹೇಶ ಗಾಜಪ್ಪನವರ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಂಜುನಾಥ ಮುನವಳ್ಳಿ ಅವರು ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ