Kannada NewsKarnataka News

ಗಾಂಧಿಯನ್ನು ಕೊಲ್ಲಬಹುದು ಆದರೆ ಅವರ ವಿಚಾರಗಳನ್ನಲ್ಲ – ಪ್ರೊ. ಡಿಸೋಜಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ ೧೫೦ನೇ ವರ್ಷಾಚರಣೆಯ ನಿಮಿತ್ತ ಹಮ್ಮಿಕೊಂಡ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ. ಅಶೋಕ ಡಿಸೋಜಾ ಆಗಮಿಸಿದ್ದರು.

ಮನುಷ್ಯನ ಸಂವೇದನಾಶೀಲತೆಗೆ ಸಾಹಿತ್ಯದ ಅಭ್ಯಾಸದೊಂದಿಗೆ ಗಾಂಧಿ ಅಂತಹ ಮಹಾತ್ಮರ ಜೀವನ ಹಾಗೂ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಅವರ ವಿಚಾರಗಳನ್ನು ಇವತ್ತಿನ ಸಂದರ್ಭದಲ್ಲಿ ಪ್ರಸಾರ ಮಾಡುವ ತುರ್ತು ಇದೆ. ಪೋಸ್ಟ್‌ಗ್ಲೋಬಲೈಜೇಷನ್ ಏರಾದಲ್ಲಿ ಗಾಂಧಿಯನ್ನು ಹೇಗೆ ನೋಡಬೇಕೆಂಬುದು ನಮ್ಮ ಮುಂದಿರುವ ಸವಾಲು.

ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗಲೇ ಗ್ಲೋಬಲೈಜೇಷನ್‌ನ ಭ್ರೂಣ ಕುಡಿಯೊಡೆದಿತ್ತು. ಇವತ್ತಿನ ಮುಕ್ತ ಮಾರುಕಟ್ಟೆ ಗಾಂಧಿ ಜೀವಂತವಿದ್ದಾಗಲೇ ಭ್ರೂಣವಾಗಿತ್ತು ಎಂದ ಮೇಲೆ ಗಾಂಧಿಯ ವಿಚಾರಗಳು ನೂರೈವತ್ತು ವರ್ಷಗಳ ನಂತರವೂ ಪ್ರಸ್ತುತವಾಗಿದೆ.

ಗಾಂಧಿಯ ಜೊತೆಗೆ ಇವತ್ತಿನ ಸಂದರ್ಭದಲ್ಲಿ ಸಂವಾದ ಮಾಡುವ ಅವಶ್ಯಕತೆ ಇದೆ. ಗಾಂಧಿ ವ್ಯಕ್ತಿಯಾಗಿ ನಮ್ಮ ನಡುವೆ ಇಲ್ಲದಿರಬಹುದು ಆದರೆ ವಿಚಾರವಾಗಿ ಇವತ್ತಿಗೂ ಜೀವಂತವಾಗಿದ್ದಾರೆ. ಇವತ್ತು ಪ್ರಜಾಸತ್ತಾತ್ಮಕ ಆದರ್ಶಗಳನ್ನು ರೂಢಿಸಿಕೊಳ್ಳಬೇಕಾದಂತಹ ಜರೂರು ಯುವ ಜನತೆಯ ಮುಂದಿದೆ.

ಸ್ವಾತಂತ್ರ್ಯ ಹೋರಾಟ, ಸರ್ವೋದಯ, ಆಧುನಿಕ ನಾಗರಿಕತೆ, ಉಳಿಗಮಾನ್ಯ ವ್ಯವಸ್ಥೆ, ಬಂಡವಾಳಶಾಹಿ ವ್ಯವಸ್ಥೆ, ವಸಾಹತುಶಾಹಿ, ಪುರೋಹಿತಶಾಹಿ, ಕೋಮುವಾದ, ಭೂದಾನ ಚಳುವಳಿ, ಜ್ಯಾತೀಯತೆ, ವ್ಯಕ್ತಿ ಸ್ವಾತಂತ್ರ್ಯ, ಆಧ್ಯಾತ್ಮ ಮುಂತಾದ ಪರಿಕಲ್ಪನೆಗಳ ನಡುವೆ ಗಾಂಧೀಜಿಯವರು ಮಹಾತ್ಮರಾಗಿದ್ದು. ನವ ಉದಾರವಾದ ಹಾಗೂ ಸತ್ಯೋತ್ತರ ಪರಿಕಲ್ಪನೆಗಳು ಗಾಂಧೀಜಿಯವರ ಕನ್ನಡಕದಿಂದ ನೋಡುವ ದೃಷ್ಟಿಕೋನವನ್ನು ಇವತ್ತಿನ ಭಾರತ ಬೆಳೆಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನಾಡಿದರು.

ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್. ಎಂ. ಗಂಗಾಧರಯ್ಯ, ಗಾಂಧಿ ವ್ಯಕ್ತಿಯಲ್ಲ, ಅದ್ಭುತ ಶಕ್ತಿ ಎನ್ನುವುದರ ಜೊತೆಗೆ ಸಾಹಿತಿಯ ಮೇಲೆ ಅವರ ಸಮಕಾಲೀನ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಪರಿಸ್ಥಿತಿಯ ಪ್ರಭಾವಗಳು ಉಂಟಾಗುತ್ತದೆ. ಆದರೆ ಗಾಂಧಿ ನಮ್ಮ ನಡುವೆ ಇಲ್ಲದಿದ್ದರೂ ಅವರ ವಿಚಾರಗಳು ಸಾರ್ವಕಾಲಿಕವಾದದ್ದು.

ಸಂಯೋಜಕಿ ಡಾ. ಶೋಭಾ ನಾಯಕ ಇವರು ಸಾಮಾಜಿಕ ಚಳುವಳಿಕಾರರ ಪ್ರತಿ ಕಾಲಘಟ್ಟದಲ್ಲೂ ತಮ್ಮ ಛಾಪನ್ನು ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಗಾಂಧೀಜಿಯವರು ಕೇವಲ ಹೋರಾಟಗಾರರಾಗದೇ ಒಬ್ಬ ತತ್ವಜ್ಞಾನಿಯಾಗಿ ನಮ್ಮ ನಡುವೆ ನಿಲ್ಲುವುದರಿಂದ ಅವರನ್ನು ಎಲ್ಲಾ ಕಾಲಘಟ್ಟದಲ್ಲಿಯೂ ನೆನೆಯುವಂತಹ ಅದ್ಭುತ ಶಕ್ತಿ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಸಿ. ಎಂ. ತ್ಯಾಗರಾಜ, ಪೂಜಾ ಹಲ್ಯಾಳ, ಡಾ. ಗಜಾನನ ನಾಯ್ಕ, ಡಾ. ಮಹೇಶ ಗಾಜಪ್ಪನವರ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ ಹಾಗೂ ಫಕೀರಪ್ಪ ಸೊಗಲದ ಅವರು ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮವನ್ನು ಲಕ್ಷ್ಮೀ ಪಾಟೀಲ ಅವರು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button