Kannada NewsKarnataka NewsLatest

ಗಾಂಧೀಜಿಯವರ ೧೫೦ನೇ ಜನ್ಮದಿನಾಚರಣೆ: ಛಾಯಾಚಿತ್ರ ಪ್ರದರ್ಶನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿಯವರು ನಡೆದು ಬಂದ ದಾರಿ, ಜೀವನ ಮಾರ್ಗಗಳಿಂದ ಯುವ ಪೀಳಿಗೆಗಳು ಪ್ರಭಾವಿತರಾಗಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಕರೆ ನೀಡಿದರು.
ಗಾಂಧೀಜಿಯವರ ೧೫೦ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜೀವನ ಮತ್ತು ಸಾಧನೆ ಕುರಿತು ಎರಡು ದಿನಗಳ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ಎಸ್. ಬಿ.ಬೊಮ್ಮನಹಳ್ಳಿ ಅವರು ಮಂಗಳವಾರ(ಅ.೨೨) ಉದ್ಘಾಟಿಸಿ ಮಾತನಾಡಿದರು.
ನಂತರ ಛಾಯಾಚಿತ್ರವನ್ನು ವಿಕ್ಷಿಸಿದ ಅವರು, ಮಹಾತ್ಮಾ ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಿದ್ದು ಒಂದು ಒಳ್ಳೆಯ ವಿಚಾರ.  ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಅಪರೂಪದ ಚಿತ್ರಗಳನ್ನು ನೋಡಲು ಹಾಗೂ ಮಾಹಿತಿಯನ್ನು ಒದಗಿಸಲು ಛಾಯಾಚಿತ್ರ ಪ್ರದರ್ಶನ ಸಹಕಾರಿಯಾಗಿದೆ ಎಂದು ಹೇಳಿದರು.

ಗಾಂಧೀಜಿಯವರ ಅಪರೂಪದ ಛಾಯಾಚಿತ್ರಗಳು:

         ಈ ವಿಶೇಷ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿ ಅವರಿಗೆ ಚರಕವು ಜೀವನ ಚಕ್ರವಾಗಿತ್ತು. ಅವರು ತಮ್ಮ ಎಲ್ಲಾ ಬಿಡುವಿನ ವೇಳೆಯಲ್ಲಿ ಸ್ವತಃ ನೂಲು ತೆಗೆಯುತ್ತಾ ಮಾದರಿಯೊಂದನ್ನು ಪ್ರತಿಷ್ಠಾಪಿಸಿದರು. ಗ್ರಾಮೀಣ ವಸ್ತುಗಳಿಂದ ಕಟ್ಟಲ್ಪಟ್ಟ ಮಣ್ಣಿನ ಸರಳ ಸೇವಾಗ್ರಾಮ ಕುಟೀರದಲ್ಲಿ ವಾಸಿಸುತ್ತಾ ಅವರು ದೇಶದ ಭವಿಷ್ಯ ರೂಪಿಸುವತ್ತ ಗಮನ ಹರಿಸಿದರು ಎಂಬ ಮಾಹಿತಿಯನ್ನು ಛಾಯಾಚಿತ್ರಗಳ ಮೂಲಕ ಕಾಣಬಹುದು.
         ಜನವರಿ ೧೯೩೪ ರಲ್ಲಿ ಬಿಹಾರವು ಭಾರೀ ಭೂಂಕಪನದಿಂದ ತತ್ತರಿಸಿದಾಗ ಗಾಂಧೀಜಿಯವರು ಆ ಕ್ಷಣ ನೊಂದವರ ನಡುವೆ ನಿಂತು ಸೇವೆ ಮಾಡಿದರು, ಮದ್ರಾಸ್‌ನಲ್ಲಿ ದಲಿತರಿಗಾಗಿ ಕಾರ್ಯಕ್ರಮ, ಗಾಂಧೀಜಿಯವರ ಜೀವನದ ಐತಿಹಾಸಿಕ ನ್ಯಾಯ ವಿಚಾರಣೆ, ಬೆಳಗಾವಿ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾದ ಮಾಹಿತಿ, ಗಾಂಧೀಜಿಯವರ ದೃಷ್ಟಿಯಲ್ಲಿ ಯಾವ ಕೆಲಸವೂ ಕೀಳಲ್ಲ, ಕನಿಷ್ಠವೂ ಅಲ್ಲ ಎಂಬ ಸಂದೇಶದ ಹಾಗೂ ಕುಷ್ಠ ರೋಗಿಗಳ ಉಪಚಾರ, ಗಾಂಧೀಜಿಯವರ ಸಾರ್ವಜನಿಕ ಜೀವನದ ಆರಂಭದಿಂದಲೂ ಅವರು ತನ್ನ ದೇಶವಾಸಿಗಳಾದ ಬಡಜನತೆ ಸಾಮಾನ್ಯವಾಗಿ ಯಾವ ದರ್ಜೆಯಲ್ಲಿ ಸಂಚಾರ ಮಾಡುತ್ತಿದ್ದರೋ, ಎಷ್ಟು ವೆಚ್ಚ ಮಾಡಲು ಶಕ್ತರೋ ಅಂತಹ ರೈಲಿನ ಮೂರನೇ ದರ್ಜೆ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಂಡರು ಎಂಬ ಸಂದೇಶದ ಛಾಯಾಚಿತ್ರಗಳ ಪ್ರದರ್ಶನ ಆಕರ್ಷಕವಾಗಿವೆ.
         ನೆಹರು ಅವರೊಂದಿಗೆ ಗಾಂಧಿ, ಗುರುದೇವ ಟ್ಯಾಗೋರ ಮತ್ತು ದೀನಬಂದು ಸಿ.ಎಫ್.ಆಂಡ್ರ್ಯೂಸ್ ಅವರೂಂದಿಗೆ ಚರ್ಚೆ ನಡೆಸಿದ ಸಂದರ್ಭ, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫರ್ ಖಾನ್ ಅವರೊಂದಿಗಿನ, ಗಾಂಧೀಜಿ ಅವರ ನಿಯತಕಾಲಿಕೆಗಳು, ಗಾಂಧೀಜಿಯವರ ಕುಂಟುಬದ ಮತ್ತು ಅವರ ಶಿಕ್ಷಣದ ಮಾಹಿತಿಯ ಹಾಗೂ ಕಸ್ತೂರಿ ಬಾ ಮತ್ತು ಬಾಪು ಅವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಕಾಣಬಹುದು.
         ಗಾಂಧೀಜಿ ಅವರು ಕರ್ನಾಟಕದಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಗಾಂಧೀಜಿ ಅವರು ಯಾವಾಗಲೂ ಗಿಡಮರಗಳನ್ನು ಪ್ರೀತಿಸುವವರೂ ಮತ್ತು ಎಲ್ಲದರಲ್ಲೂ ಜೀವಾತ್ಮವನ್ನು ಕಂಡವರಾಗಿದ್ದರು. ಹಾಗೂ ಜಲಿಯನ್ ವಾಲಾಬಾಗ, ಗಾಂಧಿ ಟೋಪಿಯ ಮಹತ್ವ ಹಾಗೂ ಅವರು ಸ್ವಾತಂತ್ರ್ಯಕ್ಕಾಗಿ ಕೈಗೊಂಡ ಮಹತ್ವದ ಸಂಗತಿಗಳಾದ ಪೇಶಾವರದಲ್ಲಿ ಸಾರ್ವಜನಿಕ ಸಭೆ, ರಾಜಕೋಟದ ಉಪವಾಸ, ವಿಭಜನೆಯ ದಂಗೆಗಳು, ನೌಕಾಲಿಗೆ ಪ್ರಯಾಣ, ಶಾಂತಿಯ ತೀರ್ಥಯಾತ್ರೆಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.
         ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿಯವರ ಮೂರ್ತಿಗಳು, ಚರಕವನ್ನು ಹಾಗೂ ಗಾಂಧೀಜಿ ಅವರ ಜೀವನದ ಮೊದಲ ಹೆಜ್ಜೆಯಿಂದ ಅವರ ಕೊನೆಯ ಪಯಣದ ವರೆಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಜನರು ಕುತೂಹಲದಿಂದ ವೀಕ್ಷಿಸಿದರು.
         ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ಚಿಕ್ಕ ಮಕ್ಕಳು ಸಹ ಛಾಯಾಚಿತ್ರ ಪ್ರದರ್ಶನ ವಿಕ್ಷಿಸಿದರು. ಹಾಗೂ ನಾಳೆ ಕೂಡಾ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಬಹುದು.
         ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಗುರುನಾಥ ಕಡಬೂರ, ದ್ವೀತಿಯ ದರ್ಜೆ ಸಹಾಯಕರಾದ ಎಮ್.ಎಲ್.ಜಮಾದಾರ, ಪ್ರಥಮ ದರ್ಜೆ ಸಹಾಯಕರಾದ ಅನಂತ ಪಪ್ಪು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button