Kannada NewsKarnataka News

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3896 ಗಣೇಶ ಮೂರ್ತಿಗಳು

ಗಣೇಶೋತ್ಸವ, ಮೊಹರಂ- ಬಿಗಿ ಬಂದೋಬಸ್ತ್: ಐಜಿಪಿ ರಾಘವೇಂದ್ರ ಸುಹಾಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಪ್ರವಾಹದಿಂದಾಗಿ ಬಹಳಷ್ಟು ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ಈ ವರ್ಷ ಗಣೇಶೋತ್ಸವ ಹಾಗೂ ಮೋಹರಂ ಹಬ್ಬಗಳನ್ನು ಸರಳವಾಗಿ ಆಚರಿಸಬೇಕು ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ಅವರು ಮನವಿ ಮಾಡಿದರು.
ನಗರದ ಜಿಲ್ಲಾ ಪೋಲಿಸ್ ಸಭಾ ಭವನದಲ್ಲಿ ಗುರುವಾರ (ಆ.೨೯) ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವ ಸೆ.೨ ರಿಂದ ಹಾಗೂ ಮೊಹರಂ ಸೆ ೧೦ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ವಲಯದ ವ್ಯಾಪ್ತಿಯಲ್ಲಿ ಬರುವ ಐದು ಜಿಲ್ಲೆಗಳಲ್ಲಿ ಸುಮಾರು ೧೨೦೦೦ ಪೋಲಿಸ್ ಸಿಬ್ಬಂದಿಗಳನ್ನು ಬಂದೋಬಸ್ತಗಾಗಿ ನಿಯೋಜಿಸಲಾಗಿದೆ.
ರ್ಯಾಪಿಡ್ ಆಕ್ಷನ್ ಪೋರ್ಸ್, ಕೆ.ಎಸ್.ಆರ್.ಪಿ, ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಈಗಾಗಲೇ ಒಟ್ಟಾರೆ ೧೦೯೮೦ ಗಣೇಶ ಮೂರ್ತಿಗಳು ಸ್ಥಾಪಿಸಲು ಸಾರ್ವಜನಿಕರು ಬೇಡಿಕೆಯಂತೆ ಎಲ್ಲರಿಗೂ ಪರವಾನಿಗೆ ನೀಡಲಾಗಿದೆ. ಗಣೇಶ ಮಂಟಪಗಳು ಇರುವ ಕಡೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತೆಯನ್ನು ಕಾಪಾಡಲು ತಿಳಿಸಲಾಗಿದೆ ಎಂದು ಹೇಳಿದರು.
ಹಬ್ಬದಲ್ಲಿ ವಿದ್ಯುತನ್ನು ಕಡಿತಗೊಳಿಸದೆ, ಬೇಕಾಗುವಷ್ಟು ಓಲ್ಟೇಜ್ ನಲ್ಲಿ ವಿದ್ಯುತನ್ನು ಪೂರೈಸಬೇಕೆಂದು ಹೆಸ್ಕಾಂ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಹೇಳಿದರು.
ಎಲ್ಲಾ ಗಣೇಶ ಮಂಡಳಿಯ ಮುಖಂಡರ ಸಂಪರ್ಕದಲ್ಲಿ ಇದ್ದುಕೊಂಡು ಅವರ ಕುಂದುಕೊರತೆಗಳನ್ನು ನಿವಾರಿಸಲು ಸಹಾಯ ಮಾಡುತ್ತೇವೆ ಎಂದರು.
ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ಗಣೇಶ ಉತ್ಸವ ಆಚರಣೆಯನ್ನು ಮಾಡಲು ಅಗತ್ಯವಿರುವ ಸಾಮಗ್ರಿಗಳು ಹಾಗೂ ಅವರಿಗೆ ಬೇಕಾಗಿರುವ ಸಹಾಯವನ್ನು ಮಾಡಲಾಗುವುದು ಎಂದು ಹೇಳಿದರು.
ಇತರರಿಗೆ ತೊಂದರೆಯಾಗದಂತೆ ಹಬ್ಬಗಳನ್ನು ಆಚರಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಗಣೇಶ ಪ್ರತಿಷ್ಠಾಪನೆಯ ವಿವರ:

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೩೮೯೬ ಗಣೇಶ ಮೂರ್ತಿಗಳು, ಬಿಜಾಪೂರ- ೨೦೭೫, ಬಾಗಲಕೋಟ- ೨೫೦೦, ಧಾರವಾಡ- ೧೨೪೫ ಗದಗ-೧೩೫೫ ಒಟ್ಟಾರೆ ೧೦೯೮೦ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ವಿಸರ್ಜನೆ ಸಂದರ್ಭದಲ್ಲಿ ಮಾರ್ಗಕ್ಕೆ ಅನುಗುಣವಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಮಾಡಿಕೊಳ್ಳಲಾಗಿದೆ.
ಮೂರ್ತಿಯನ್ನು ವಿಸರ್ಜನೆ ಮಾಡುವ ಸ್ಥಳದಲ್ಲಿ ಪೋಲೀಸ್ ಸಿಬ್ಬಂದಿಗಳು ಸಹಕರಿಸುವರು. ಯಾವುದೇ ತರಹದ ದುರ್ಘಟನೆಗಳು ಜರುಗದಂತೆ ನೋಡಿಕೊಳ್ಳಲಾಗುವುದು.
ಪೊಲೀಸ್ ಇಲಾಖೆಯೊಂದಿಗೆ ಗಣೇಶ ಉತ್ಸವ ಮಂಡಳ ಸಮಿತಿಯ ಮುಖಂಡರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಲಕ್ಷ್ಮಣ ಅರಸಿದ್ಧಿ ಅವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button