
ಪ್ರಗತಿವಾಹಿನಿ ಸುದ್ದಿ: ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಲಾಂಗ್ ತೋರಿಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ವಿಲ್ಸನ್ ಗಾರ್ಡನ್ ನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ರು, ಘಟನೆ ಸಂಬಂಧ ಶರವಣ್ ಸೋನು, ವಿಕ್ರಮ್ ಎಂಬ ಮೂವರನ್ನು ಬಂಧಿಸಲಾಗಿದೆ.
ಶಾಂತಿನಗರದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಅಡ್ಡಗಟ್ಟಿದ್ದ ಈ ಮೂವರೂ ಮೊಬೈಲ್ ಹಾಗೂ ಹಣ ದೋಚಿದ್ದರು. ಈ ಕೃತ್ಯದ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಶಾಂತಿನಗರದ ಚರ್ಚ್ ರಸ್ತೆಯಲ್ಲಿ ನಡೆದಿದ್ದ ಘಟನೆ ನಗರದಲ್ಲಿ ಅಪರಾಧ ಕೃತ್ಯ ಹೆಚ್ಚಳವಾಗುತ್ತಿರುವ ಬಗ್ಗೆ ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶರವಣ್, ಸೋನು, ವಿಕ್ರಮ ಮೂವರೂ ಲಕ್ಕಸಂದ್ರ ಮೂಲದ ನಿವಾಸಿಗಳಾದ್ದು ಕೆಲಸಕ್ಕೆ ಬಾರದ ಪುಡಿ ರೌಡಿ ಹಾಗೂ ಚಿಲ್ಲರೆ ಕಳ್ಳರಾಗಿದ್ದರೆಂದು ತಿಳಿದುಬಂದಿದೆ. ಮೂವರನ್ನೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


