Latest

*ಗಂಗಾವತರಣ ಲೋಕಾರ್ಪಣೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಪರಿಶುದ್ಧ ಕನ್ನಡಕ್ಕೆ ಯಕ್ಷಗಾನ ನೋಡಬೇಕು. ಯಕ್ಷಗಾನದ ಪ್ರದೇಶದಲ್ಲಿ ಹೆಚ್ಚು ಶುದ್ಧ ಕನ್ನಡ ಕಾಣುತ್ತದೆ ಎಂದು ನಾಡಿನ ಹೆಸರಾಂತ ನಟ, ಚಿತ್ರತಾರೆ ಮುಖ್ಯಮಂತ್ರಿ ಚಂದ್ರು ಹೇಳಿದರು.

ಅವರು ತಾಲೂಕಿನ ಬೆಟ್ಟಕೊಪ್ಪದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ನಮ್ಮನೆ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ಯಕ್ಷಗಾನದ ಕಾರಣಕ್ಕೆ ಕನ್ನಡ ಶುದ್ಧವಾಗಿ ಉಳಿದಿದೆ ಎಂದು ಬಣ್ಣಿಸಿದ ಅವರು, ನಮ್ಮನೆ ಹಬ್ಬ ಎಂದರೆ ಬಂದವರ ಎಲ್ಲರ‌ಮನೆ ಹಬ್ಬ. . ಇಲ್ಲಿ ನಮ್ಮನೆ ಎಂಬುದು ನಮ್ಮನೆಯೇ ಆಗಿದೆ. ನಮ್ಮನೆಯು ಪ್ರೀತಿ, ಬಾಂಧವ್ಯ, ವಿಶ್ವಾಸದ ಪ್ರತೀಕವಾಗಿದೆ ಎಂದರು.

ರಂಗಕರ್ಮಿ ಡಾ.‌ಬಿ.ವಿ. ರಾಜಾರಾಂ ಮಾತನಾಡಿ, ಯಕ್ಷಗಾನ ಈ ನಾಡಿನ ಬಹುದೊಡ್ಡ ಕಲೆಯಾಗಿದೆ. ಕಲಾಕ್ಷೇತ್ರ ಸದಾ ಸಮೃದ್ಧಿಯಿಂದಿರಬೇಕು ಎಂದು ಹೇಳಿದರು.

ಯಕ್ಷ ದಿನದರ್ಶಿಕೆ ಬಿಡುಗಡೆಗೊಳಿಸಿದ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕಲೆಯ‌ ಮೂಲಕ ಇಂಥದೊಂದು ವಾತಾವರಣ ಕಟ್ಟುವ ಕೆಲಸವನ್ನು ನಾಡಿನ ಹೆಸರಾಂತ ಸಾಧಕರೂ‌ ನೋಡಬೇಕು ಎಂಬ ಆಶಯ ನಮ್ಮದು‌ ಎಂದರು.

Home add -Advt

ವಿದ್ಯಾವಾಚಸ್ಪತಿ‌ ಉಮಾಕಾಂತ ಭಟ್ಟ ಕೆರೆಕೈ ಮಾತನಾಡಿ, ಹಬ್ಬ ಸಂಭ್ರಮಕ್ಕೆ, ಮನೆಯ ಸೌಲಭ್ಯಕ್ಕೆ. ಈ ನಮ್ಮನೆ ಹಬ್ಬ ತನ್ನ ಅಂಗಳಕ್ಕೆ ಸಮಾಜದ ಎಲ್ಲಾ ರಂಗದ ಸಾಧಕರನ್ನು ತನ್ನೆಡೆ ಬರಸೆಳೆದುಕೊಂಡಿದೆ. ಇತ್ತಿಚಿನ ದಿನದಲ್ಲಿ ನೆಲ ಮತ್ತು ಜಲದ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ನೆಲ-ಜಲದ ವಿಷಯದಲ್ಲಿ ವಿವಾದದ ಹೊರತಾಗಿ ವಿವೇಕ ಮೂಡಬೇಕು ಎಂದರು.

ಯಕ್ಷಗಾನದ ಸಂಶೋಧಕ ಜಿ.ಎಲ್‌.ಹೆಗಡೆ, ಯಕ್ಷಗಾನದ ಗೌರವವನ್ನು ಕಾಪಾಡುವ ಕೆಲಸ ಯಕ್ಷ ಕಲಾವಿದರಿಂದಾಗಬೇಕು. ಯಕ್ಷಗಾನದ ಹಿರಿಮೆಯನ್ನು ಕಾಪಾಡುವಲ್ಲಿ ತಾಯಂದಿರ ಪಾತ್ರ ಹಿರಿದಿದೆ ಎಂದರು.

ನಮ್ಮನೆ ಸಾಧಕ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಆಯುರ್ವೇದ ವೈದ್ಯ ವೆಂಕಟ್ರಮಣ ಹೆಗಡೆ, ಆರೋಗ್ಯಕ್ಕೆ ನಮ್ಮೆಲ್ಲರ ಗಮನ ಹೆಚ್ಚಬೇಕು. ಜೀವನ ಶೈಲಿಯ ಕಾರಣಕ್ಕೆ ಖಾಯಿಲೆಗಳು ಹೆಚ್ಚುತ್ತಿವೆ. ಭಾರತೀಯರಲ್ಲಿ ಮಧುಮೇಹಿ, ಬಿಪಿ, ಶುಗರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವಿಷಯದಲ್ಲಿ ಭಾರತೀಯರು ಪರಿಪಕ್ವತೆ ಪಡೆಯಬೇಕಿದೆ ಎಂದರು.

ಇನ್ನೋರ್ವ ಸಮ್ಮಾನಿತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೋಲೀಸ್ ಅಧಿಕಾರಿ ಸುಧೀರ್ ಹೆಗಡೆ ಮಾತನಾಡಿ, ದೊರೆತ ಪ್ರಶಸ್ತಿಗಿಂತ ನನ್ನೂರಿನ ಜನ ಗುರುತಿಸುವುದೇ ಹೆಚ್ಚು ಸಂತೋಷ ನೀಡುತ್ತದೆ ಎಂದರು.

ಅಧ್ಯಕ್ಷತೆವಹಿಸಿದ್ದ ಟ್ರಸ್ಟ್ ಅಧ್ಯಕ್ಷೆ, ಪ್ರಸಿದ್ಧ ಲೇಖಕಿ ಭುವನೇಶ್ವರಿ ಹೆಗಡೆ, ಗ್ರಾಮೀಣ ಭಾಗದಲ್ಲಿ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಜೀವಂತವಾಗಿಡುವ ಪುಟ್ಟ ಪ್ರಯತ್ನ ಇದು ಎಂದರು.

ನಮ್ಮನೆ ಕಿಶೋರ ಪುರಸ್ಕಾರವನ್ನು ಗೋಕರ್ಣದ ವಿಘ್ನೇಶ್ ಕೂರ್ಸೆಗೆ ಪ್ರದಾನ ಮಾಡಲಾಯಿತು. ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಡಾ.ಕಾವೆಂಶ್ರೀ, ಕಾರ್ಯದರ್ಶಿ ವಿಶ್ವನಾಥ ನಾಲವಾಡ ಅವರುಬತುಳಸಿ ಹೆಗಡೆಯನ್ನು ಸನ್ಮಾನಿಸಿದರು. ಕಳೆದ ವರ್ಷ ನಮ್ಮನೆ ಹಬ್ಬದಲ್ಲಿ ಘೋಷಿಸಿದಂತೆ ಹತ್ತು ಮನೆಗೆ ಉಚಿತ ವಿದ್ಯುತ್ ನೀಡಿದ ಸೆಲ್ಕೋ ಇಂಡಿಯಾ ಪರವಾಗಿ ಮಂಜುನಾಥ ಭಾಗವತ್, ಸುಬ್ರಾಯ ಹೆಗಡೆ ಅವರನ್ನು ಅಭಿನಂದಿಸಲಾಯಿತು. ರಾಜ್ಯದ ಅತ್ಯುತ್ತಮ‌ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗ್ವತ್ ಅವರನ್ನೂ ಅಭಿನಂದಿಸಲಾಯಿತು.

ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಪುಂಡಲೀಕ‌ ಕೆ.ವಿ., ಗಾಯತ್ರೀ ರಾಘವೇಂದ್ರ, ತುಳಸಿ ಹೆಗಡೆ ಸಮ್ಮಾ‌ನ ಪತ್ರ ವಾಚಿಸಿದರು. ನಾರಾಯಣ ಭಾಗ್ವತ್ ನಿರ್ವಹಿಸಿದರು. ಉಪಾಧ್ಯಕ್ಷ ರಮೇಶ ಹೆಗಡೆ ಹಳೆಕಾನಗೋಡ ವಂದಿಸಿದರು.

ಗಂಗಾವತರಣ ಲೋಕಾರ್ಪಣೆ:
ವಿಶ್ವಶಾಂತಿ ಸರಣಿಯ ಎಂಟನೇ ಕಲಾ‌ಕುಸುಮ‌ ಗಂಗಾವತರಣದ ಲೋಕಾರ್ಪಣೆ ನಡೆಯಿತು. ಪ್ರೋ. ಎಂ.ಎ.ಹೆಗಡೆ ವಿರಚಿತ, ವಿ.ಉಮಾಕಾಂತ ಭಟ್ಟ‌ ನಿರ್ದೇಶನದ ಗಂಗಾವತರಣ ರೂಪಕ ಲೋಕಾರ್ಪಣೆಗೊಂಡಿತು. ರೂಪಕದ ಮುಮ್ಮೇಳದಲ್ಲಿ‌ ತುಳಸಿ ಹೆಗಡೆ ೪೫ ನಿಮಿಷಗಳ ಕಾಲ ಆಕರ್ಷಕವಾಗಿ ಪ್ರದರ್ಶನ ನೀಡಿ ಜನ ಮನ ರಂಜಿಸಿದರು. ಹಿಮ್ಮೇಳದಲ್ಲಿ ಭಾಗವತರಾದ ಕೊಳಗಿ ಕೇಶವ ಹೆಗಡೆ, ಮದ್ದಲೆಯಲ್ಲಿ‌ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾದನದಲ್ಲಿ ವೆಂಕಟೇಶ ಭೊಗ್ರಿಮಕ್ಕಿ ಸಹಕಾರ ನೀಡಿದರು.

ಇದಕ್ಕೂ‌ ಮೊದಲು ಪ್ರಸಿದ್ಧ ಗಾಯಕಿ ವಸುಧಾ ಶರ್ಮಾ ಹಾಗೂ ಕಲಾ ತಂಡದಿಂದ ಗಾ‌ನ ಸುಧಾ ಕಾರ್ಯಕ್ರಮ ನಡೆಯಿತು. ಎಚ್.ಎನ್.ನರಸಿಂಹಮೂರ್ತಿ ಮೃದಂಗದಲ್ಲಿ, ಮಹೇಶ ಹೊಸಗದ್ದೆ ತಬಲಾದಲ್ಲಿ, ಸಮರ್ಥ ತಂಗಾರಮನೆ ಕೊಳಲಿನಲ್ಲಿ, ರಂಜನಿ ಸಾಗರ, ಶ್ರೀಧರ ಶಾನಭಾಗ್ ಹಾರ್ಮೋನಿಯಂನಲ್ಲಿ ಸಹಕಾರ‌ ನೀಡಿದರು. ಸುರಿವ ಅಕಾಲಿಕ ಮಳೆಯ‌ ನಡುವೆಯೂ ಬ್ಯಾಡಗಿ, ಯಲ್ಲಾಪುರ, ಸಾಗರ, ಶಿವಮೊಗ್ಗ, ರಿಪ್ಪನಪೇಟೆ, ಗಜೇಂದ್ರಗಡ, ಕುಂದಾಪುರ, ಕುಮಟಾ ಸೇರಿದಂತೆ ವಿವಿಧಡೆಯ ಕಲಾಸಕ್ತರು ಪಾಲ್ಗೊಂಡಿದ್ದರು. ನಮ್ಮನೆ ಹಬ್ಬ ಸಾಂಸ್ಕೃತಿಕ ಉತ್ಸವಾಗಿ ನಡೆಯಿತು.

*ಶಾಸಕ ಅಭಯ್ ಪಾಟೀಲ್ ಗೆ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಹುದ್ದೆ?*

https://pragati.taskdun.com/vidhanasabhadeputy-speakerabhay-patil/

*ನಮ್ಮ ಕ್ಲಿನಿಕ್ ಮೇಲ್ದರ್ಜೆಗೇರಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ : ಸಿಎಂ ಬೊಮ್ಮಾಯಿ*

https://pragati.taskdun.com/namma-cliniccm-basavaraj-bommaihubli/

Related Articles

Back to top button