ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಾಹಿತ್ಯದ ಓದು ಮಾತಿಗೊಂದು ಬೆಲೆ ತಂದು ಕೊಡುತ್ತದೆ. ಸಾಹಿತ್ಯದ ಓದು ಅದ್ಭುತ ಜ್ಞಾನವನ್ನು ತಂದು ಕೊಡುತ್ತದೆ. ಜೀವನದಲ್ಲಿ ಅದ್ಭುತವಾದದ್ದನ್ನು ಏನನ್ನಾದರೂ ಸಾಧಿಸಬೇಕೆಂದರೆ ಮಾತೃಭಾಷೆಯನ್ನು ಹಾಗೂ ಸಾಹಿತ್ಯವನ್ನು ಪ್ರೀತಿಸಿ. ಪುಸ್ತಕದ ಓದು ಮಸ್ತಕದ ಮಣಿ ಎಂದು ಖ್ಯಾತ ನಗೆಮಾತುಗಾರ ಗಂಗಾವತಿ ಪ್ರಾಣೇಶ ಇಂದಿಲ್ಲಿ ಹೇಳಿದರು.
ಟಿಳಕವಾಡಿ ಕರ್ನಾಟಕ ಲಾ ಸೊಸೈಟಿಯ ಅಮೃತ ಮಹೋತ್ಸವದ ಸವಿನೆಪಿಗಾಗಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಬಳಗದವರು ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಹಾಸ್ಯಸಂಜೆ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ‍್ಯಕ್ರಮ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಗಂಗಾವತಿ ಪ್ರಾಣೇಶ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ನಿಸರ್ಗದ ವಿರುದ್ಧ ಹೋದಾಗ ಅದು ನಮ್ಮ ಮೇಲೆ ಸೇಡನ್ನ ತೀರಿಸಿಕೊಳ್ಳುತ್ತದೆ. ನಮಗೆ ಪಾಠವನ್ನು ಕಲಿಸುತ್ತದೆ. ನಾವೆಲ್ಲ ಭಾರತೀಯ ಪರಂಪರೆಯನ್ನ ಬಿಟ್ಟು ಆಂಗ್ಲ ಪದ್ದತಿಯನ್ನು ಅನುಸರಿಸುತ್ತಿದ್ವಿ. ಕೈ ಕುಲಕುವುದು, ಅಪ್ಪಿಕೊಳ್ಳುವುದು, ಮುತ್ತನ್ನು ಕೊಡುವುದನ್ನು ಮಾಡುತ್ತಿದ್ದೆವು. ಈಗ ಕೋರೋನಾ ಬಂದು ಅವೆಲ್ಲವನ್ನು ಬಿಡುವಂತೆ ಮಾಡಿದೆ. ಪ್ರಕೃತಿಯೇ ಮುಂದಾಗಿ ಬಂದಿದೆ. ಭಾರತೀಯ ಪರಂಪರೆಯನ್ನ ರೂಢಿಯುಲ್ಲಿ ತಂದು ಕೈ ಮುಗಿಯುವಂತೆ ಮಾಡಿದೆ. ಕರೋನ ನಮ್ಮ ದೇಶದಿಂದ ಅಷ್ಟೇ ಅಲ್ಲ ಜಗತ್ತಿನಿಂದಲೇ ಹೋಗಲಿ ಎಂಬ ಆಶಯವನ್ನು ವ್ಯಕ್ತ ಪಡಿಸಿದ ಅವರು ತಮ್ಮದೇ ಆದ ಮಾತಿನ ಶೈಲಿಯಿಂದ ಸುಮಾರು ಮುಕ್ಕಾಲು ಗಂಟೆ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ನರಸಿಂಹ ಜೊಶೀಯವರು ಮಾತನಾಡುತ್ತ, ಭಾಷೆಯಲ್ಲಿ, ಮಾತಿನಲ್ಲಿ ವ್ಯತ್ಯಾಸಗಳು ಉಂಟಾದಾಗ ಹಾಸ್ಯಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದ ಅವರು, ಹಲವಾರು ಸಂದರ್ಭದಲ್ಲಿ ನಡೆದ ಭಾಷಾ ವಿನೋದಗಳನ್ನು ಹಂಚಿಕೊಳ್ಳುವುದರೊಂದಿಗೆ ಬೇರೆ ಪ್ರತಿಷ್ಠಿತ ರಾಜಕಾರಣಿಗಳ ಮಿಮಿಕ್ರಿ ಮಾಡಿ ತೋರಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪತ್ರಕರ್ತ ರವಿ ಬೆಳಗೆರೆ, ಮಲ್ಲಿಕಾರ್ಜುನ ಖರ್ಗೆಯವರ ಮಿಮಿಕ್ರಿ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವು. ಚಪ್ಪಾಳೆ ಸುರಿಮಳೆಯಿಂದ ತಮ್ಮ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದರು. ಅಲ್ಲದೇ ಯಡಿಯುರಪ್ಪ ಸಿದ್ಧರಾಮಯ್ಯ, ಸತೀಶ ಜಾರ್ಕಿಹೊಳಿ, ರಮೇಶ ಜಾರಕಿಹೊಳಿ, ದೇವೇಗೌಡ್ರು ಮೊದಲಾದವರ ಮಿಮಿಕ್ರಿ ಮಾಡಿ ತೋರಿಸಿ ರಂಜಿಸಿದರು.
ನಗೆಮಾತುಗಾರ ಬಸವರಾಜ ಮಹಾಮನಿಯವರು ಮಾತನಾಡುತ್ತ ಪ್ರಸ್ತುತ ವಿಷಯಗಳಿಗೆ ಹಾಸ್ಯದ ಲೇಪನ ಹಚ್ಚಿ ಮಾತನಾಡುವುದೇ ನಗೆಮಾತುಗಾರನ ಕಲೆ. ಪ್ರದೇಶ ಬದಲಾದಂತೆ ಭಾಷೆ ಬದಲಾಗುತ್ತ ಹೋಗುತ್ತದೆ. ಭಾಷೆಯನ್ನು ನೋಡದೇ ಭಾಷೆಯ ಹಿಂದಿರುವ ಭಾವನ್ನು ನಾವು ನೋಡಬೇಕು. ಬದಕು ಎಲ್ಲವನ್ನು ಕಲಿಸಿಕೊಡುತ್ತದೆ. ಕನಸ್ಸನ್ನೂ ಸಹ ನಮ್ಮ ಇತಿಮಿತಿಯಲ್ಲೇ ಕಾಣಬೇಕೆಂಬ ಸಂದೇಶದ ನುಡಿಗಳನ್ನು ಹೇಳುವುದರೊಂದಿಗೆ ನವಿರಾದ ಹಾಸ್ಯದಿಂದ ಎಲ್ಲರನ್ನು ನಗಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಲಾ ಸೊಸಾಯಿಟಿಯ ಅಧ್ಯಕ್ಷರು, ನ್ಯಾಯವಾದಿಗಳಾದ ಅನಂತ ಮಂಡಗಿಯವರು ಮಾತನಾಡುತ್ತ ಡಾಕ್ಟರರು, ಇಂಜನಿಯರರು, ವಕೀಲರು ಹೀಗೆ ಎಲ್ಲ ವೃತ್ತಿಗಳಲ್ಲಿಯೂ ವಿನೋದ ಪ್ರಸಂಗಗಳು ಜರುಗುತ್ತಲೇ ಇರುತ್ತವೆ. ಇವನ್ನು ಹಾಸ್ಯಭಾಷಣಕಾರರು ಗಮನಿಸಬೇಕು. ತಮ್ಮ ಭಾಷಣಗಳಲ್ಲಿ ಬಳಿಸಿಕೊಳ್ಳಬೇಕು ಎಂದು ಹೇಳಿ ತಮ್ಮ ವೃತ್ತಿಯಲ್ಲಿ ನಡೆದ ಒಂದು ಪ್ರಸಂಗವನ್ನು ಹಂಚಿಕೊಳ್ಳುತ್ತ ಬೆಳಗಾವಿಯ ನ್ಯಾಯಾಲದಲ್ಲೊಮ್ಮೆ ವಕೀಲರೊಬ್ಬರು ವಾದವನ್ನು ಮಂಡಿಸುತ್ತಿರುವಾಗ ಹೊರಗೊಂದು ಕತ್ತೆ ಜೋರಾಗಿ ಒದರಲು ಪ್ರಾರಂಭಿಸಿತು. ವಕೀಲರಿಗೆ ವಾದ ಮಂಡಿಸಲು ತೊಂದರೆಯಾಗಲಾರಂಭಿಸಿತು. ನ್ಯಾಯಾಲಯದ ಸಿಪಾಯಿ ಕತ್ತೆಯನ್ನೋಡಿಸಿ ಬಂದ. ಆಗ ನ್ಯಾಯಾಧೀಶರು ಕತ್ತಿ ಒದರೋದು ಬಂದಾತು ನೀವು ಸುರು ಮಾಡ್ರಿ! ಎಂದು ಹೇಳಿ ನಗೆಯಲೆ ಎಬ್ಬಿಸಿದರು.
ಕರ್ನಾಟಕ ಉಚ್ಚನ್ಯಾಯಾಲಯ, ಧಾರವಾಡದ ನ್ಯಾಯಮೂರ್ತಿಗಳಾದ ಬಿ. ಎಮ್. ಶ್ಯಾಮಪ್ರಸಾದ, ಕರ್ನಾಟಕ ಲಾ ಸೊಸಾಯಿಟಿಯ ಕಾರ್ಯಾಧ್ಯಕ್ಷರಾದ ಪ್ರದೀಪ ಸಾವಕಾರ, ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅನಂತ ತಗಾರೆ ಅತಿಥಿಗಳಾಗಿ ಆಗಮಿಸಿದ್ದರು.
ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಎಚ್.ಎಚ್. ವೀರಾಪೂರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಸ್ನೇಹಾ ಜೋಶಿ ಪರಿಚಯಿಸಿದರು. ಪ್ರೊ. ಮಂಜುನಾಥ ಕುಂಬಾರಗೊಪ್ಪ ನಿರೂಪಿಸಿದರು. ಡಾ. ಎಚ್. ಬಿ. ವೆಂಕಟೇಶಪ್ಪ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ