Kannada NewsKarnataka NewsLatestPolitics

*33 ಪ್ಯಾಕೇಜ್ ಮೂಲಕ ಕಸ ವಿಲೇವಾರಿಗೆ ತೀರ್ಮಾನ: ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಸಂಕಲ್ಪ*

ಪ್ರಗತಿವಾಹಿನಿ ಸುದ್ದಿ:ಕಸದ ಮಾಫಿಯಾದವರು ನನ್ನ ಮೇಲೆ ಏನೇನು ಗೂಬೆ ಕೂರಿಸಬೇಕೋ ಅದೆಲ್ಲವನ್ನು ಮಾಡಿದರು. ನಾನು ಯಾವುದಕ್ಕೂ ಬಗ್ಗದೆ, ಹೆದರದೆ 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿಗೆ ತೀರ್ಮಾನಿಸಲಾಗಿದೆ. ಕಸದಿಂದ ರಸ ತೆಗೆಯಬೇಕು ಎಂದು ಹೊರಟಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಮಾಗಡಿ ಮುಖ್ಯ ರಸ್ತೆಯ ಕನ್ನಹಳ್ಳಿಯಲ್ಲಿ ಸಮಗ್ರ ಘನ ತ್ಯಾಜ್ಯ ವಿಂಗಡಣಾ ಘಟಕದ 1ನೇ ಹಂತಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 

“ಈ 33 ಪ್ಯಾಕೇಜ್ ಗೆ ನ್ಯಾಯಾಲಯ ಸಮ್ಮತಿ ನೀಡಿದೆ. ಸ್ವಲ್ಪ ‌ದಿನಗಳಲ್ಲೇ ಇವು ಕಾರ್ಯರೂಪಕ್ಕೆ ಬರಲಿದೆ. ಕಸದ ಮಾಫಿಯಾ ಎನ್ನುವ ಪದವನ್ನು ನಾನು ಪದೇ ಪದೆ ಏಕೆ ಬಳಸುತ್ತಿದ್ದೇನೆ ಎಂದರೆ. ಇವರು ಪ್ರತಿ ಹಂತದಲ್ಲಿ ನ್ಯಾಯಾಲಯಗಳಿಗೆ ತೆರಳಿ ತಡೆಯಾಜ್ಞೆ ತಂದು ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಇವರುಗಳು ಹೇಳಿದಂತೆ ಸರ್ಕಾರ ಕೇಳಬೇಕು ಎನ್ನುವ ಧೋರಣೆ ಹೊಂದಿದ್ದರು.‌ ಇದಕ್ಕೆಲ್ಲ ಕಡಿವಾಣ ಹಾಕಲಾಗಿದೆ” ಎಂದರು.

Home add -Advt

ಕಸದ ಸಮಸ್ಯೆ ಮುಕ್ತಿಗೆ ಸಂಕಲ್ಪ

“ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ ಹಾಡಲೇ ಬೇಕು ಎಂದು ನಾನು ಸಂಕಲ್ಪ ಮಾಡಿದ್ದೇನೆ. ಸ್ವಯಂಸೇವಾ ಸಂಸ್ಥೆ ಹಸಿರು ದಳದವರು ಸೇರಿ ಅತ್ಯಂತ ಕ್ಲಿಷ್ಟಕರ ಕೆಲಸ ಮಾಡುತ್ತಿದ್ದಾರೆ. ನಗರದ ಅನೇಕ ಕಡೆ ಜನರು ಎಲ್ಲೆಂದರಲ್ಲಿ ಕಸ ಎಸೆಯುವುದು, ಕಟ್ಟಡ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ.‌ ಇದರ ನಿಯಂತ್ರಣಕ್ಕೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಕಸ ಸುರಿಯುವ ವಾಹನಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ” ಎಂದರು.

“ನನ್ನ ಗುರಿ, ಉದ್ದೇಶ, ಆಲೋಚನೆ, ಬದ್ದತೆ ಸ್ಪಷ್ಟವಾಗಿದೆ. ಕಸದಿಂದ ಗ್ಯಾಸ್ ತಯಾರಿಕೆಗೆ ನಾಲ್ಕು ಸಂಸ್ಥೆಗಳನ್ನು ಮಾಡಬೇಕು ಎಂದು ಹೊರಟಿದ್ದೆ. ಜಾಗದ ಸಮಸ್ಯೆಯಿಂದ ಈಗ ಎರಡು ಸ್ಥಳಗಳಲ್ಲಿ ಅವಕಾಶ ನೀಡಿ ಟೆಂಡರ್ ಕೂಡ ನೀಡಲಾಗಿದೆ” ಎಂದರು.

“ಈ ಹಿಂದೆ 10- 12 ಕ್ಕೂ ಹೆಚ್ಚು ಸಂಸ್ಥೆಗಳು ಕಸದಿಂದ  ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ಬಂದು ವಿಫಲರಾಗಿದ್ದಾರೆ. 24 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನದಿಂದ ಯಶಸ್ವಿಯಾಗಬಹುದು ಎಂದು ಕೇಳಿದ್ದೇನೆ. ಜೊತೆಗೆ ದೆಹಲಿ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ಇದನ್ನು ನಾನು ಕಣ್ಣಾರೆ ನೋಡಿದ್ದೇನೆ” ಎಂದರು.

“ಕಸದಿಂದ ಗ್ಯಾಸ್ ಉತ್ಪಾದನೆಗೆ ಇಳಿದಿರುವ ಅಭಿಷೇಕ್ ಅವರ ಸಂಸ್ಥೆ ಪ್ರಾಥಮಿಕವಾಗಿ 100 ಕೋಟಿ ರೂಪಾಯಿ ಬಂಡವಾಳ ಹೂಡಲಿದೆ. ಒಟ್ಟು 300 ಕೋಟಿ ಹೂಡಿಕೆ ಮಾಡಲಿದ್ದಾರೆ. ಇವರಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿ ಇನ್ನೂ ಒಂದಷ್ಟು ಕಡೆ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಯಶಸ್ಸು ಸಿಗಬೇಕಾದರೆ ಶ್ರಮ ಅಗತ್ಯ. ಶ್ರಮವಿಲ್ಲದೆ ಏನೂ ಸಿಗುವುದಿಲ್ಲ. ಇದು ಸ್ವಲ್ಪ ಸ್ಪರ್ಧಾತ್ಮಕ ಕೆಲಸ ಏಕೆಂದರೆ ಇದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮಗೆ ಶುಭವಾಗಲಿ, ನಾನು ಹಾಗೂ ನಮ್ಮ ಅಧಿಕಾರಿಗಳು ಈ ಸಂಸ್ಥೆಯ ಜೊತೆಯಲ್ಲಿರುತ್ತೇವೆ” ಎಂದರು.

“ವಿದ್ಯುತ್ ಉತ್ಪಾದನೆಗೆ ಒಂದಷ್ಟು ಸಂಸ್ಥೆಗಳಿಗೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆದು ಅವಕಾಶ ನೀಡಲಾಗಿತ್ತು. ಆದರೆ ಅವರು ವಿದ್ಯುತ್ ಉತ್ಪಾದನೆಯಲ್ಲಿ ವಿಫಲರಾಗಿದ್ದಾರೆ. ಈಗ ಒಂದೆರಡು ಸಂಸ್ಥೆಗೆ ಹೊರತು ಪಡಿಸಿ ಮಿಕ್ಕವರನ್ನು ರದ್ದು ಮಾಡಲಾಗಿದೆ” ಎಂದು ತಿಳಿಸಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಬೆಂಗಳೂರಿನಲ್ಲಿ ಕಸದ ಸಮಸ್ಯೆ ನಿವಾರಿಸಲು ಇಂತಹ ಸಂಸ್ಥೆಯವರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಹಸಿರು ದಳ ತಂಡ ವೃತ್ತಿಪರವಾಗಿ ಕೆಲಸ ಮಾಡುತ್ತಿದ್ದು, ಕಸದಿಂದ ರಸ ತೆಗೆಯುವ ಸವಾಲಿನ ಕಾರ್ಯಕ್ಕೆ ಮುಂದಾಗಿದ್ದಾರೆ” ಎಂದು ಶ್ಲಾಘಿಸಿದರು.

ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಕಸ ಎಸೆಯುವುದನ್ನು ವಿಡಿಯೋ ಮಾಡಿ ಕೊಟ್ಟರೆ ಬಹುಮಾನ ನೀಡುವ ಬಗ್ಗೆ ಕೇಳಿದಾಗ, “ನಾವು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಕಸದ ಲಾರಿಗಳು ದೂರ ಹೋಗಬೇಕಾಗುತ್ತದೆ ಎಂದು ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ. ರಸ್ತೆ ಬದಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ಕ್ಯಾಮೆರಾ ಅಳವಡಿಸಿ ದಂಡ ಹಾಕುತ್ತಿದ್ದೇವೆ. ಕಸ ಎಸೆಯುವ ವಾಹಗಳಿಗೆ ಟ್ರಾಫಿಕ್ ಇಲಾಖೆಯಿಂದ ದಂಡ ಹಾಕಲಾಗುತ್ತಿದೆ. ಬೆಂಗಳೂರು ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಜನರ ಸಹಕಾರವೂ ಅಗತ್ಯ. ಜನರು ಎಲ್ಲೆಂದರಲ್ಲಿ ಕಸ ಎಸೆಯಬಾರದು. ಮುಂದೆ ಜಿಬಿಎ ವತಿಯಿಂದ 8- 10 ಜನರ ಪೌರಕರ್ಮಿಕರ ತಂಡ ಮಾಡಲಾಗುತ್ತದೆ. ಈ ತಂಡ ನಗರ ಪ್ರದಕ್ಷಿಣೆ ಮಾಡಿ ಎಲ್ಲೆಲ್ಲಿ ಕಸ ಇದೆಯೋ ಅದನ್ನು ವಿಲೇವಾರಿ ಮಾಡಲಿದೆ” ಎಂದು ಮನವಿ ಮಾಡಿದರು.

ಎ ಖಾತಾ ಪರಿವರ್ತನೆಗೆ ಕಡಿಮೆ ಅರ್ಜಿ ಸಲ್ಲಿಕೆಯಾಗಿರುವುದರಿಂದ 100 ದಿನಗಳ ಗಡವು ವಿಸ್ತರಣೆಯಾಗಲಿದೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ಮುಂದೆ ಮಾತನಾಡುತ್ತೇನೆ” ಎಂದು ತಿಳಿಸಿದರು.

Related Articles

Back to top button