Latest

ಗೌರಿ-ಗಣೇಶ ಹಬ್ಬದ ಸಂಭ್ರಮ

ಈಶ್ವರ ಜಿ.ಸಂಪಗಾವಿ, ಕಕ್ಕೇರಿ 

ಭಾರತದಲ್ಲಿ ವೈಭವಯುತವಾಗಿ ಆಚರಿಸುವ ಹಬ್ಬ ಗಣೇಶ ಚತುರ್ಥಿ ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ಬೆಳ್ಳಿ ಅಥವಾ ಮಣ್ಣಿನ ಗಣೇಶ ಮೂರ್ತಿಯನ್ನು ಮೋದಕ,ಕಡಬು ಸಿಹಿತಿಂಡಿಯ ನೈವೇದ್ಯ ಹಿಡಿದು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಆದರೆ ಕೆಲ ವರ್ಷಗಳಿಂದ ಪಿ.ಓ.ಪಿ.ಯಿಂದ ತಯಾರಿಸುವ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿ ಉಂಟು ಮಾಡುವ ಕಾರಣಕ್ಕಾಗಿ ಸರಕಾರ ಅದನ್ನು ನಿಷೇಧಿಸಿರುವುದು ಸ್ವಾಗತಾರ್ಹ.

ಶಿವ ಪುರಾಣದಲ್ಲಿ ಉಲ್ಲೇಖಿಸಿದಂತೆ ಗಣೇಶನನ್ನು ತುಳಸಿದಳದಲ್ಲಿ ಪೂಜಿಸುವುದು ಮತ್ತು ಅಂದು ಚಂದ್ರದರ್ಶನ ನಿಷಿದ್ಧ. ಸೂರ್ಯನು ಬುದ್ಧಿ ತತ್ವಕ್ಕೆ ಹಾಗೂ ಚಂದ್ರನು ಮನಸ್ತತ್ವಕ್ಕೆ ಸಂಬಂಧಿತ. ಗಣೇಶನ ಆಳ್ವಿಕೆಗೆ ಒಳಪಟ್ಟ ಕೊನೆಯ ತತ್ವ ಮನಸ್ಸು. ಇದರ ಸಂಯಮದಿಂದ ಆಂತರ್ಯದ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶ ಮಹಿಮೆಯ ಅನುಭವ ವೇದ್ಯವಾಗುತ್ತದೆ.ಚತುರ್ಥಿಯ ರಾತ್ರಿ ಇಂಥ ಸಂಯಮದಲ್ಲಿದ್ದು ಗಣೇಶನ ಪೂಜಿಸಿ ಆನಂದ ಪಡೆಯಬಹುದು ಎಂದು ತಿಳಿಸಿದೆ.

ಗಣೇಶನ ಜನನ:

ಹಿಂದೂ ಪುರಾಣಗಳ ಪ್ರಕಾರ  ಗಣೇಶ ಶಿವ-ಪಾರ್ವತಿಯರ ಮಗ. ಗಣೇಶನನ್ನು ಕನ್ನಡ, ಮರಾಠಿ, ತಮಿಳು ಭಾಷೆಯಲ್ಲಿ ವಿನಾಯಕ, ತಮಿಳಿನಲ್ಲಿ ವಿನಾಯಗರ್, ಪಿಳ್ಳೆಯಾರ್, ತೆಲುಗಿನಲ್ಲಿ ವಿನಾಯಕಡು ಎಂದು ಕರೆಯುತ್ತಾರೆ. ಅದಲ್ಲದೆ ಸಿದ್ಧಿವಿನಾಯಕ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಭ, ಮೂಷಕವಾಹನ ಮುಂತಾದ ಹೆಸರುಗಳಿಂದ ಗಣೇಶನನ್ನು ಕರೆಯುತ್ತಾರೆ. ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆ ಗಣಪತಿಯ ತಾಯಿ ಎಂತಲೂ ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವ ಎಂದು ತಿಳಿದು ಬರುತ್ತದೆ. ಈತ ಸ್ವರ್ಣಗೌರಿಯ ಮಾನಸ ಪುತ್ರ. ಗೌರಿ ತನ್ನ ಮೈಕೊಳೆಯಿಂದ ಆಕೃತಿ ತಯಾರಿಸಿ ಅದಕ್ಕೆ ಜೀವ ತುಂಬಿ ಬಾಗಿಲ ಬಳಿ ಮನೆ ಕಾಯಲು ನಿಲ್ಲಿಸಿ ಸ್ನಾನಕ್ಕೆ ಹೋಗಿರುತ್ತಾಳೆ. ಶಿವ ಮನೆಗೆ ಹಿಂದಿರುಗಿದಾಗ ಗಣಪ ಅವನನ್ನು ಒಳ ಬರದಂತೆ ತಡೆಯಲು ಶಿವ ಕುಪಿತನಾಗಿ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಬಳಿಕ ಬಂದ ಗೌರಿ ಮಗನ ಕಳೇಬರವನ್ನು ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸಲು ಶಿವ ತನ್ನೆಲ್ಲ ಗಣಂಗಳನ್ನು ಕರೆಸಿ, ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದವರ ತಲೆಯನ್ನು ಕತ್ತರಿಸಿ ತರಲು ಆಜ್ಞಾಪಿಸಿದ ಪ್ರಕಾರ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದ ಮರಿಯಾನೆಯ ಶಿರವನ್ನು ತಂದು ಗಣಪನ ಶರೀರಕ್ಕೆ ಅಂಟಿಸುವರು.ಅಂದಿನಿಂದ ಗಣಪ ಗಜಮುಖ,ಗಜಾನನ ಆಗಿ ಅಗ್ರಪೂಜೆಗೆ ಅರ್ಹನಾಗುತ್ತಾನೆ.ವಿಘ್ನವಿನಾಶಕ ವಿನಾಯಕ,ವಿಘ್ನೇಶ್ವರ ಆಗುತ್ತಾನೆ.

ಗಣೇಶನ ಹಬ್ಬ:

ಗಣೇಶ ಹಬ್ಬದ ಮೊದಲ ದಿನ ಸ್ವರ್ಣಗೌರಿ ಹಬ್ಬ.ಮರುದಿನ ಗಣೇಶನ ಹಬ್ಬ. ಭಕ್ತರ ಮನೆಯಲ್ಲಿ ಭಕ್ಷ್ಯ ಭೋಜನ ಸವಿದು ತಾಯಿಯೊಂದಿಗೆ ಹಿಂದಿರುಗುವನು ಎಂಬ ಗ್ರಹಿಕೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಜನ ಆಚರಿಸುವರು. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸುವರು.

ಗಣೇಶನ ಶಾರೀರಿಕ ವೈಶಿಷ್ಟ್ಯಗಳು:

ಗಣೇಶನ ಶರೀರದ ಪ್ರತಿ ಅಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯ ಹೊಂದಿವೆ.

ಆನೆಯ ತಲೆ: ನಂಬಿಕೆ, ಬುದ್ಧಿವಂತಿಕೆ, ವಿವೇಚನಾ ಶಕ್ತಿ.

ಒಂದೇ ದಂತ: ಎಲ್ಲ ದ್ವಂದ್ವಗಳ ಮೀರಿ ನಿಲ್ಲುವ ಸೂಚಕ.

ಅಗಲ ಕಿವಿಗಳು: ಯಾವಾಗ ದೇವರು ಅರಿವಿಗೆ ಬರುವನೋ ಆಗಲೇ ಎಲ್ಲಾ ಜ್ಞಾನವು ಅರಿವಾದಂತೆಯೇ ಎಂಬುದರ ದ್ಯೋತಕ.

ವಕ್ರ ಸೊಂಡಿಲು: ಸತ್ಯ ಮಿತ್ಯಗಳ ವ್ಯತ್ಯಾಸ ಗುರುತಿಸುವಲ್ಲಿ ಬುದ್ಧಿಶಕ್ತಿಯ ಸಾಮರ್ಥ್ಯ ಸೂಚಕ.

ಹಣೆಯ ಮೇಲಿನ ತ್ರಿಶೂಲವು ಭೂತ,ವರ್ತಮಾನ, ಭವಿಷತ್ತಗಳ ಮೇಲೆ ಪ್ರಭುತ್ವ ಸಾಧಿಸುವ ಸೂಚಕ.

ದೊಡ್ಡ ಹೊಟ್ಟೆ: ಸಂಖ್ಯ ಲೋಕಗಳನ್ನು ತನ್ನಲ್ಲಿ ಅಡಗಿಸಿಕೊಂಡವ ಮತ್ತು ಪ್ರಕೃತಿಯ ಔದಾರ್ಯ ಮತ್ತು ಸ್ಥೌರ್ಯಗಳ ಸಂಕೇತ ಅಷ್ಟೆ ಅಲ್ಲದೆ ಜಗದ ದುಃಖ-ಕ್ಲೇಷಗಳನ್ನು ನುಂಗಿ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ.

ದಪ್ಪ ಕಾಲುಗಳು: ಒಂದು ನೆಲದ ಮೇಲೆ ಇನ್ನೊಂದು ಎತ್ತಿರುವುದು ಇಹ-ಪರಗಳಲ್ಲಿ ಬಾಳುವುದರ ಸಾಮಥ್ರ್ಯವನ್ನು ಎತ್ತಿ ತೋರಿಸುತ್ತದೆ.

ಇಲಿ: ಗಣೇಶನ ವಾಹನ ಇಲಿಯನ್ನು ಪ್ರತಿಭೆಯ ಸಂಕೇತ,ವಿವೇಕ ಪ್ರತಿಭೆ ಹಾಗೂ ಬುದ್ಧಿವಂತಿಕೆಯ ಪ್ರತಿನಿಧಿ ಎನ್ನಲಾಗಿದೆ.

ಗಣೇಶನನ್ನು ಓಂಕಾರ ಎಂದು ದೇಹ ಸ್ವರೂಪ ದೇವನಾಗರಿ ಲಿಪಿಯ ಅಕ್ಷರದಂತಿದೆ.ಈ ಕಾರಣದಿಂದ ಗಣೇಶನನ್ನು ವಿಶ್ವದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ.

 

ಹಬ್ಬದ ವೈಶಿಷ್ಟತೆಗಳು:

ನಮ್ಮ ದೇಶದಲ್ಲಿ ಗಣೇಶನ ಪೂಜೆಯು ಅನಂತ ಕಾಲದಿಂದ ನಡೆದು ಬಂದಿದೆ. ರೈತರು ಗಜಮುಖನನ್ನು ಪೂಜಿಸಿದರೆ ತಮ್ಮ ಬೆಳೆಗಳಿಗೆ ಆನೆಗಳ ಕಾಟ ಕಡಿಮೆ ಆಗುವುದು ಮತ್ತು ಗಣಪನ ವಾಹನ ಇಲಿಯನ್ನು ಪೂಜಿಸಿದರೆ ಇಲಿಗಳಿಂದ ಬೆಳೆ ನಾಸ ಕಡಿಮೆ ಆಗುವುದು ಎಂಬ ಭಾವದಿಂದ ಗಣೇಶನನ್ನು ಭಯಭಕ್ತಿಯಿಂದ ಪೂಜಿಸಿ ಇಬ್ಬರನ್ನೂ ಸಮಾಧಾನ ಪಡಿಸುವುದು ಹಬ್ಬದ ವೈಶಿಷ್ಟ್ಯ.ಹೊಲಗಳಲ್ಲಿ ಗಣಪನಂತೆ ಡೊಳ್ಳು ಹೊಟ್ಟೆಯ ಬೆದರುಬೊಂಬೆ ಮಾಡಿ ನಿಲ್ಲಿಸಿ ಪ್ರಾಣಿ-ಪಕ್ಷಿಗಳಿಂದ ಬೆಳೆಯನ್ನು ರಕ್ಷಿಸುವ ಪ್ರಯತ್ನ ಮಾಡುವರು.

ಬರ್ಮಾ,ಮಲೇಷಿಯಾ, ಇಂಡೋನೇಷಿಯಾ, ಚೀನಾ, ಸುಮಾತ್ರಾ, ಜಾವಾ, ಜಪಾನ ಮುಂತಾದ ದೇಶಗಳಲ್ಲಿ ಗಣೇಶ ಮೂರ್ತಿಯನ್ನು ಪೂಜಿಸುವರು.

ವಿಜ್ಞಾನಿಗಳ ಸೃಷ್ಟಿವಿಕಾಸಕ್ಕೂ ನಮ್ಮ ಪುರಾಣಗಳ ದಶಾವತಾರ ಕಥೆಗಳಿಗೂ ಹೋಲಿಕೆ ಇದೆ.

ಹತ್ತು ದಿನಗಳ ನಿರಂತರ ಪೂಜೆಯ ಬಳಿಕ ಅನಂತ ಚತುರ್ಥಿಯ ದಿನ ಗಣೇಶನ ವಿಸರ್ಜನೆ ಮಾಡುವರು. ದೇಶದ ವಿವಿಧ ಕಡೆ ಬೇರೆ ಬೇರೆ ರೀತಿಯಿಂದ ಹಬ್ಬ ಆಚರಣೆ ಮಾಡುವರು. ದಕ್ಷಿಣ ಭಾಗದಲ್ಲಿ ಮನೆ-ಮನೆಗಳಲ್ಲಿ ಗಣೇಶ ಮೂರ್ತಿ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಮುಂದುವರಿದಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ಸಂಘಟಿತರಾಗಿ ಹೋರಾಟದಲ್ಲಿ ತೊಡಗಿಸಲು ಸಾರ್ವಜನಿಕ ಗಣೇಶ ಪೂಜೆಯನ್ನು ಪ್ರಾರಂಭಿಸಿದ ಕೀರ್ತಿ ಲೋಕಮಾನ್ಯ ತಿಲಕರಿಗೆ ಸಲ್ಲುತ್ತದೆ. ಮುಂಬಯಿಯಲ್ಲಿ ಇಂದಿಗೂ ಅತಿ ಸಂಭ್ರಮ ಸಡಗರದಿಂದ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಕುಂದಾಪೂರ, ಶಿರೂರು, ಮಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನಗಳನ್ನು ಹಮ್ಮಿಕೊಂಡು ಅತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುವರು.

ಎಲ್ಲ ದೇವಾಲಯಗಳಲ್ಲೂ  ಶಿವನ ಪರಿವಾರ ವರ್ಗದಲ್ಲಿ ಗಣಪತಿ ಮೂರ್ತಿ ಇದ್ದೇ ಇರುತ್ತದೆ. ಗಣೇಶನನ್ನು ವಿದ್ಯಾದೇವತೆ ಎಂದು ಪರಿಗಣಿಸಲಾಗಿದೆ. ಗಣೇಶನ ಹೆಸರಿನೊಂದಿಗೆ ಶ್ರೀ ಅಕ್ಷರ ಸೇರಿಸಿ ಸಂಬೋಧಿಸಲಾಗುತ್ತದೆ. ಬುದ್ಧಿವಂತಿಕೆ, ಜ್ಞಾನ, ಹೊಸ ಆರಂಭಗಳ ದೇವತೆ, ವಿಘ್ನ ವಿನಾಶಕ ಗಣಪನನ್ನು ಭಕ್ತಿಪೂರ್ವಕವಾಗಿ ಪೂಜಿಸಿ ಜನ ಧನ್ಯರಾಗುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button