
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಹಾಸ್ಟೆಲ್‌ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕುಕನೂರ್ ಪೊಲೀಸರು ಗರ್ಭಧಾರಣೆಗೆ ಕಾರಣನಾದ ಶಂಕಿತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದು, ಬಾಲಕಿಯ ಪೋಷಕರು ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ವಸತಿ ಗೃಹದಲ್ಲೇ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ತಾಯಿ- ಶಿಶುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಗರ್ಭ ಧರಿಸಿದ್ದು ವಾರ್ಡನ್ ಮತ್ತು ಹಾಸ್ಟೆಲ್‌ನ ಇತರ ಸಿಬ್ಬಂದಿ ಗಮನಕ್ಕೆ ಇಷ್ಟು ಸಮಯಗಳಿಂದ ಏಕೆ ಬಂದಿಲ್ಲ ಎಂದು ಆಕೆಯ ಪೋಷಕರು ಮತ್ತು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಹಾಸ್ಟೆಲ್ ಅಧಿಕಾರಿಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿದಿದ್ದರೂ ಅದರ ಬಗ್ಗೆ ಮೌನವಾಗಿದ್ದರು ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಾಗ, ಜಿಲ್ಲಾಧಿಕಾರಿ ಸುರೇಶ್ ಇಟ್ನಾಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಆಸ್ಪತ್ರೆಗೆ ಧಾವಿಸಿ ಬಾಲಕಿಯ ಆರೋಗ್ಯದ ಬಗ್ಗೆ ವಿಚಾರಿಸಿದರು. ಕುಕನೂರ್ ಪೊಲೀಸರು ತ್ವರಿತ ವಿಚಾರಣೆ ನಡೆಸಿ, ಬಾಲಕಿಯ ಗರ್ಭಧಾರಣೆಗೆ ಕಾರಣನೆಂದು ಶಂಕಿಸಲಾದ ಯುವಕನನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ವಸತಿ ನಿಲಯದ ವಾರ್ಡನ್ ನನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


