*ಸಂಬಳ ವಾಪಸ್ ಕೊಡಿ* *ಕನ್ನಡ ಪೂಜಾರಿಗೆ ನೋಟಿಸ್* *ಎಲ್ಲೆಡೆ ಆಕ್ರೋಶ* *ನೋಟಿಸ್ ಹಿಂಪಡೆಯಲು ಸಚಿವ ರಾಮಲಿಂಗಾ ರೆಡ್ಡಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕನ್ನಡ ಪೂಜಾರಿ ಎಂದೇ ಹೆಸರಾದ ಚಿಕ್ಕಮಗಳೂರಿನ ಹಿರೇಮಗಳೂರು ಕೋದಂಡರಾಮಸ್ವಾಮಿ ದೇಗುಲದ ಪ್ರಧಾನ ಅರ್ಚಕ, ಚಿಂತಕ ಹಿರೇಮಗಳೂರು ಕಣ್ಣನ್ ಅವರ ವೇತನ ವಾಪಸ್ ನೀಡುವಂತೆ ನೋಟಿಸ್ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ಸೇರಿದಂತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯದೆಲ್ಲೆಡೆ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡಿದೆ. ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕನ್ನಡದಲ್ಲೇ ಮಂತ್ರ ಪಠಣ ಮಾಡಿ ಅರ್ಚನೆ ಮಾಡುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ಹಿರೇಮಗಳೂರು ಕಣ್ಣನ್ ಅವರಿಗೆ ಜಿಲ್ಲಾಡಳಿತ ವೇತನ ವಾಪಸ್ ಕೇಳಿ ನೋಟಿಸ್ ಜಾರಿ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಲು ಆರಂಭವಾಗಿತ್ತು. ವಿಷಯ ಗಮನಕ್ಕೆ ಬಂದಕೂಡಲೇ ರಾಮಲಿಂಗಾರೆಡ್ಡಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸ್ಥಳೀಯ ತಹಶೀಲ್ದಾರ್ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ ಎಂದರು.
*ವೇತನ ವಾಪಸ್ ಕೇಳಲು ಕಾರಣವೇನು?*
ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಹಿರೇಮಗಳೂರಿನ ಕೋದಂಡರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತಿತ್ತು. ಆದರೆ, ಇದೀಗ ದೇವಾಲಯದ ಆದಾಯ ಕಡಿಮೆ ಇದೆ ಎಂಬ ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ. ಅನ್ನು ವಾಪಸ್ ನೀಡುವಂತೆ ಸೂಚಿಸಲಾಗಿತ್ತು. 4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿತ್ತು.ಜೊತೆಗೆ, ಡಿಸೆಂಬರ್ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್ 2ರಂದು ತಹಸೀಲ್ದಾರ್ ಸುಮಂತ್ ನೋಟಿಸ್ ನೀಡಿದ್ದರು.
*ಬಡ ಅರ್ಚಕರ ವೇತನ ವಾಪಸ್ ಕೇಳುವುದು ಎಷ್ಟು ಸರಿ?*
*ಹಿರೇಮಗಳೂರು ಕಣ್ಣನ್ ತೀವ್ರ ಬೇಸರ*
ಕಳೆದ 44 ವರ್ಷಗಳಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲವೆಂದು ಸಂಬಳ ತಡೆಹಿಡಿದು, ಅರ್ಚಕರಿಗೆ ನೀಡಿದ ವೇತನ ವಾಪಸ್ ಕೇಳುವುದು ಸರಿಯಲ್ಲ. ದೇವಾಲಯಗಳಲ್ಲಿ ಅರ್ಚಕರ ಕೊರತೆ ಇದೆ. ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ? ಜಿಲ್ಲಾಡಳಿತದ ಈ ನಡೆ ಅಚ್ಚರಿ ಮೂಡಿಸಿದೆ ಎಂದು ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ