ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಹಾಗೂ ಖಾನಾಪೂರ ತಾಲ್ಲೂಕಿನ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ರಸ್ತೆ ಎರಡು ಬದಿಯಲ್ಲಿ ಜನರು ಕಸ ಬಿಸಾಕುತ್ತಿದ್ದು ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬೆಳಗಾವಿ ಹಾಗೂ ಖಾನಾಪೂರ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಪಿ.ಡಿ.ಒ ಗಳ ಜೊತೆ ತ್ಯಾಜ್ಯ ವಿಲೇವಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಬೆಳಗಾವಿ ಮತ್ತು ಖಾನಾಪೂರ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಪ್ರತಿ ದಿನ ವಿಲೇವಾರಿ ಕಡ್ಡಾಯವಾಗಿ ಮಾಡುವುದು, ರಸ್ತೆ ಬದಿಗಳಲ್ಲಿ ಯಾವುದೇ ಕಾರಣಕ್ಕೂ ಕಸ ಬಿಳದಂತೆ ಕ್ರಮ ವಹಿಸಲು ತಿಳಿಸಿದರು. ವಿಶೇಷವಾಗಿ ಸಾಂಬ್ರಾ ವಿಮಾನ ನಿಲ್ದಾಣ ಇರುವದರಿಂದ ರಸ್ತೆ ಪಕ್ಕದ ಕಸದಿಂದ ಪಕ್ಷಿಗಳ ಹಾರಾಟ ಹೆಚ್ಚಾಗಿ ವಿಮಾನ ಹಾರಾಟಕ್ಕೆ ದಕ್ಕೆಯಾಗುತ್ತದೆ. ಕಾರಣ ಬೆಳಗಾವಿಯಿಂದ ಕರಡಿಗುದ್ದಿ ವರೆಗೆ ಬರುವ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು & ಪಿ.ಡಿ.ಒ ಗಳಿಗೆ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಖಾನಾಪೂರ ಮತ್ತು ಬೆಳಗಾವಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ 100% ರಷ್ಟು ಕಸ ವಿಲೇವಾರಿಯಾಗಬೇಕು. ಒಂದು ವೇಳೆ ಕಸವಿಲೇವಾರಿಯಾಗದಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಸ್ಥಳಾವಕಾಶ ಇಲ್ಲದ ಗ್ರಾಮ ಪಂಚಾಯತಿಯವರು ತಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗೈರಾಣ/ಅರಣ್ಯ ಪ್ರದೇಶ ಇರುವ ಕಡೆ ಅರಣ್ಯ ಅಧಿಕಾರಿಗಳು ಮತ್ತು ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರು ಜಂಟಿ ಸಭೆ ನಡೆಸಿ ಕಸ ವಿಲೇವಾರಿಗೆ ಗ್ರಾಮದ ಪಕ್ಕದಲ್ಲಿ ಸ್ಥಳ ನಿಗಧಿ ಮಾಡಲು ತಿಳಿಸಿದರು. ಈಗಾಗಲೇ ಕಸ ವಿಲೇವಾರಿಗೆ ಶೆಡ್ ಮತ್ತು ತಾತ್ಕಾಲಿಕ ಶೇಡ್ ಇರುವವರು ಪ್ರತಿ ದಿನ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಕಡ್ಡಾಯವಾಗಿ ಮಾಡುವುದು ಕಸ ನಿರ್ವಹಣೆ ಮಾಡದೆ ಇರುವ ಗ್ರಾಮ ಪಂಚಾಯತಿಗಳು ಕೂಡಲೇ ಕ್ರಮ ವಹಿಸುವುದು. ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರಿ ಜಾಗ/ಅರಣ್ಯ ಜಾಗ ಯಾವುದೇ ಇರಲಿ ಸರ್ವೆ ನಂ. ಹುಡಕಿ ಪ್ರಸ್ತಾವಣೆ ಸಲ್ಲಿಸಲು ಸಭೆಗೆ ತಿಳಿಸಿದರು. ಕಸ ವಿಲೇವಾರಿ ಯಶಸ್ವಿಗೊಳಿಸಲು ಎಲ್ಲ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳು ಕೈ ಜೋಡಿಸಲು ವಿನಂತಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಎನ್. ಬಂಗಾರೆಪ್ಪನವರ ಬೆಳಗಾವಿ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಹೆಡಗೆ, ಖಾನಾಪೂರ ತಾಪಂ ಸಹಾಯಕ ನಿರ್ದೇಶಕ (ಪಂ.ರಾಜ್) ವಿಜಯ, ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ