*ಬೆಳಗಾವಿಗೆ 1722 ಕೋಟಿ ರೂ. ನೀಡಿ: ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ ಬಿಜೆಪಿ ನಾಯಕರು*

ಪ್ರಗತಿವಾಹಿನಿ ಸುದ್ದಿ: ಘಟಪ್ರಭಾ ಬಲದಂಡೆ ಕಾಲುವೆ (GRBC) ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆ (CBCI) ಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಅಂದಾಜು ರೂ. 1722 ಕೋಟಿ ವೆಚ್ಚಕ್ಕೆ ತಯಾರಿಸಿ ರಾಜ್ಯ ಸರ್ಕಾರವು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕೇಂದ್ರ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಇವರ ಜೊತೆ ಬೆಳಗಾವಿ ಲೋಕಸಭಾ ಸದಸ್ಯರಾದ ಮಂತ್ರಿಗಳಾದ ಜಗದೀಶ ಶೆಟ್ಟರ ಹಾಗೂ ಶಾಸಕ ರಮೇಶ ಜಾರಕಿಹೋಳಿ ಅವರು ಇಂದು ನವದೆಹಲಿಯಲ್ಲಿ ಭೇಟಿ ಮಾಡಿದರು.
ಪ್ರಸ್ತಾಪಿತ ಈ ಕಾಲುವೆಗಳು ಸುಮಾರು ಮೂರು ದಶಕಗಳ ಕಾಲದಷ್ಟು ಹಳೆಯದಾಗಿದ್ದು, ಇದರಿಂದಾಗಿ ರೈತರು ಹೊಂದಿದ ಜಮೀನುಗಳಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರು ಹರಿದು ಹೋಗದೆ ಇರುವುದರಿಂದ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ.
ಈ ಕಾಲುವೆಗಳನ್ನು ನವೀಕರಿಸುವುದರೊಂದಿಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಡಿ ಬರುವಂತಹ ಅನೇಕ ಗ್ರಾಮಗಳಲ್ಲಿನ ಲಕ್ಷಾಂತರ ರೈತ ಬಾಂಧವರಿಗೆ ಅವರು ಹೊಂದಿದ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯಲಿದೆ.
ಪ್ರಸ್ತಾಪಿತ ಈ ಯೋಜನೆಯ ಅಗತ್ಯತೆಯ ಅನುಗುಣವಾಗಿ ಸಲ್ಲಿಸಲಾದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ. ಆರ್ ಪಾಟೀಲ ಇವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕಾರ್ಯಗತಗೊಳ್ಳಲಿರುವ ಬಗ್ಗೆ ಭರವಸೆ ಹೊಂದಿರುವುದಾಗಿ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.