ಗೋಕಾಕ್, ಅರಭಾವಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಖಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗೋಕಾಕ್ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಸಿಗುವುದು ಗ್ಯಾರಂಟಿ. ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಿದರೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಲಭ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆದ ಗೋಕಾಕ್ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಸೋಮವಾರ (ಏಪ್ರಿಲ್ 15) ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಸುತ್ತಿದ್ದು, ಈ ಎರಡು ಕ್ಷೇತ್ರಗಳಿಂದ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದರು.
ಪಕ್ಷ ಸಂಘಟಿಸಿ, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಮತದಾರರಿಗೆ ಸರ್ಕಾರದ ಸಾಧನೆಗಳನ್ನು ತಿಳಿಹೇಳಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಉತ್ತಮ ವಾತಾವರಣವಿದ್ದು, ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಕರೆ ನೀಡಿದರು.
*ಬೂತ್ ಕಮಿಟಿ ರಚಿಸಿ*
ಎರಡು ಕ್ಷೇತ್ರಗಳಲ್ಲೂ ಬೂತ್ ಕಮಿಟಿ ರಚಿಸಬೇಕು. 15 ಜನರಂತೆ ಪ್ರತಿ ಬೂತ್ ಕಮಿಟಿ ರಚಿಸಬೇಕು. ಇನ್ನು ಮೂರು ದಿನಗಳಲ್ಲಿ ಕಮಿಟಿ ಸದಸ್ಯರ ಹೆಸರನ್ನು ನೀಡಬೇಕು. ಯಾರಿಗೂ ಹೆದರದೇ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಎಂದು ಸಚಿವರು ಕರೆ ನೀಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಶಕ್ತಿ ತುಂಬಬೇಕು. ಮೃಣಾಲ್ ಹೆಬ್ಬಾಳ್ಕರ್ ಗೆದ್ದರೆ ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದಂತೆ ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಓರ್ವ ನಿಸ್ವಾರ್ಥ ರಾಜಕಾರಣಿ, ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸೋಣ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಇನ್ನೂ ಯುವಕನಾಗಿದ್ದು, ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯಲಿದ್ದಾನೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಲ್ಕು ವರ್ಷಗಳ ಬಳಿಕವೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅನಿಲಕುಮಾರ ದಳವಾಯಿ, ಚಂದನ ಗಿಡ್ನವರ್, ರಮೇಶ್ ಉಟಗಿ, ಭರಮಣ್ಣ ಉಪ್ಪಾರ್, ಕಲ್ಲಪ್ಪಗೌಡ ಲಕ್ಕಾರ್, ರಾವಸಾಹೇಬ ಬೆಳಕೋಡು, ಬಸವರಾಜ ಬೆಳಕೋಡು, ಎಸ್.ಆರ್ ಸೋನವಾಲ್ಕರ್, ಸಂಜಯ ಪೂಜಾರಿ, ಗಂಗಾಧರ್ ಬಡಕುಂದ್ರಿ, ಪ್ರಕಾಶ ಅರಳಿ, ಶಂಕರ ಹುರಕಡ್ಲಿ, ಭರಮಣ್ಣ ಉಪ್ಪಾರ, ಪ್ರಕಾಶ ಡಾಂಗೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ