ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಡಿಸೆಂಬರ್ 5ರಂದು ನಡೆಯಲಿರುವ ಉಪಚುನಾವಣೆಗೆ ಆಖಾಡ ಸಿದ್ದವಾಗುತ್ತಿದೆ. 3 ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ರಾಜ್ಯದ ಗಮನ ಸೆಳೆದಿದೆ. ಅದರಲ್ಲೂ ಗೋಕಾಕ ಕ್ಷೇತ್ರದ ಮೇಲೆ ಎಲ್ಲರ ಕಣ್ಣು.
ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲಿ ಅನರ್ಹ ಶಾಸಕರೊಂದಿಗೆ ಬಿಜೆಪಿ ಮಾಡಿಕೊಂಡಿರುವ ತೆರೆಯ ಹಿಂದಿನ ಒಪ್ಪಂದಕ್ಕೆ ಬದ್ದವಾಗುವ ಸಾಧ್ಯತೆ ಹೆಚ್ಚಾಗಿದೆ. ಬುಧವಾರ ಹೊರಬರಬಹುದಾದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಮೇಲೆ ಅದು ಅವಲಂಬಿಸಿದೆ.
ಅನರ್ಹರು ಸ್ಪರ್ಧಿಸಲು ಹಸಿರು ನಿಶಾನೆ ಸಿಕ್ಕಿದಲ್ಲಿ ಗೋಕಾಕ ಕ್ಷೇತ್ರಕ್ಕೆ ರಮೇಶ ಜಾರಕಿಹೊಳಿ, ಅಥಣಿಗೆ ಮಹೇಶ ಕುಮಠಳ್ಳಿ ಕಣಕ್ಕಿಳಿಯಲಿದ್ದಾರೆ. ಕಾಗವಾಡ ಕ್ಷೇತ್ರದ ಚುನಾವಣೆಗೆ ಸುಪ್ರಿಂ ಕೋರ್ಟ್ ತಡೆ ಸಿಗಬಹುದೆನ್ನಲಾಗುತ್ತಿದ್ದು, ಚುನಾವಣೆ ನಡೆದಲ್ಲಿ ಶ್ರೀಮಂತ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ.
ಈಗ ಎಲ್ಲರ ಕುತೂಹಲ ಕೆರಳಿಸಿರುವುದು ಕಾಂಗ್ರೆಸ್ ಅಭ್ಯರ್ಥಿಗಳು. ಏಕೆಂದರೆ ಈ ಮೂರು ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದಿರುವವರು ಕಾಂಗ್ರೆಸ್ ಅಭ್ಯರ್ಥಿಗಳು. ಹಾಗಾಗಿ ತನ್ನದೇ ಕ್ಷೇತ್ರವನ್ನು ಅನಾಯಾಸವಾಗಿ ಕಳೆದುಕೊಂಡಿರುವ ಕಾಂಗ್ರೆಸ್ ಈಗ ಅವುಗಳನ್ನು ಮತ್ತೆ ಗಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.
ಕಳೆದ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ರಾಜು ಕಾಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಆದರೆ ಎಲ್ಲಿಗೆ ಎನ್ನುವ ಕುತೂಹಲ ಹಾಗೆಯೇ ಇದೆ. ಏಕೆಂದರೆ ಕಾಗವಾಡ ಕ್ಷೇತ್ರದಲ್ಲಿ ಚುನಾವಣೆ ನಡೆಸದತೆ ತಡೆಯಾಜ್ಞೆ ಬಂದಲ್ಲಿ ರಾಜು ಕಾಗೆ ಅಥಣಿ ಕ್ಷೇತ್ರಕ್ಕೆ ಸ್ಪರ್ಧಿಸಬಹುದು. ರಾಜು ಕಾಗೆ ಕಾಂಗ್ರೆಸ್ ಸೇರುವುದು ಖಚಿತ, ಆದರೆ ಕ್ಷೇತ್ರ ಮಾತ್ರ ಅಂತಿಮವಾಗಬೇಕಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಕಾಂಗ್ರೆಸ್ V/S ಸಿದ್ದರಾಮಯ್ಯ
ಇನ್ನು ಎಲ್ಲಕ್ಕಿಂತ ಕುತೂಹಲ ಕೆರಳಿಸಿರುವ ಗೋಕಾಕ ಕ್ಷೇತ್ರಕ್ಕೆ ಈ ಮೊದಲು ಚುನಾವಣೆ ಘೋಷಣೆಯಾದಾಗ ಲಖನ್ ಜಾರಕಿಹೊಳಿ ಹೆಸರು ಘೋಷಣೆಯಾಗಿತ್ತು. ಆದರೆ ಈ ಬಾರಿ ಮೊದಲ ಪಟ್ಟಿಯಲ್ಲಿ ಲಖನ್ ಹೆಸರು ಸೇರಿಲ್ಲ. ಕೇವಲ 8 ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪದೇ ಪದೆ ಲಖನ್ ಜಾರಕಿಹೊಳಿಯೇ ಗೋಕಾಕ ಅಭ್ಯರ್ಥಿ ಎಂದು ಹೇಳುತ್ತಿದ್ದರೂ ಅವರ ಹೆಸರನ್ನು ಘೋಷಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದಕ್ಕೆ ಕಾರಣ ಕಾಂಗ್ರೆಸ್ ನ ಇತರ ನಾಯಕರ ಅಭಿಪ್ರಾಯ ಮತ್ತು ಸಿದ್ದರಾಮಯ್ಯ ಅಭಿಪ್ರಾಯ ತಾಳೆಯಾಗದಿರುವುದು. ಸತೀಶ್ ಜಾರಕಿಹೊಳಿ ಬಿಟ್ಟು ಚುನಾವಣೆ ಮಾಡಲು ಸಿದ್ದರಾಮಯ್ಯ ಸಿದ್ದರಿಲ್ಲ. ಆದರೆ ಕಾಂಗ್ರೆಸ್ ನ ಇತರ ನಾಯಕರು ಜಾರಕಿಹೊಳಿ ಸಹೋದರರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡುವ ಒಲವು ತೋರಿಸುತ್ತಿದ್ದಾರೆ.
ಜೊತೆಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅಶೋಕ ಪೂಜಾರಿ ನಿರಂತರವಾಗಿ ಕಾಂಗ್ರೆಸ್ ಸಂಪರ್ಕದಲ್ಲಿರುವುದು ಸಹ ಕುತೂಹಲ ಮೂಡಿಸಿದೆ. ಅಶೋಕ ಪೂಜಾರಿ ಬಿಜೆಪಿ ಆಪರ್ ಮಾಡಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಹುದ್ದೆಯನ್ನು ನಿರಾಕರಿಸಿ, ಉಪಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅದು ಯಾವಪಕ್ಷದ್ದಾದರೂ ಓಕೆ ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ.
ಜಾರಕಿಹೊಳಿ ಸಹೋದರರು ಎಲ್ಲರೂ ಒಂದೇ. ಸುಮ್ಮನೆ ನಾಟಕವಾಡುತ್ತಾರೆ. ಅಂತಿಮವಾಗಿ ಒಳ ಒಪ್ಪಂದ ಮಾಡಿಕೊಂಡು ಒಬ್ಬರನ್ನು ಗೆಲ್ಲಿಸುತ್ತಾರೆ. ಹಾಗಾಗಿ ಕಾಂಗ್ರೆಸ್ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಭಾವನೆ ಕಾಂಗ್ರೆಸ್ ಗೆ ಬಂದಿದೆ. ಹಾಗಾಗಿ ಲಖನ್ ಗೆ ಟಿಕೆಟ್ ಕೊಡಲು ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗುತ್ತಿದೆ.
ಏನೇ ಆದರೂ ಲಖನ್ ಗೆ ಟಿಕೆಟ್ ಖಚಿತ ಎನ್ನುತ್ತವೆ ಮೂಲಗಳು. ಇಲ್ಲವಾದಲ್ಲಿ ಸತೀಶ್ ಜಾರಕಿಹೊಳಿ ಚುನಾವಣೆ ಪ್ರಚಾರದಿಂದ ಹಿಂದೆ ಸರಿಯಬಹದು. ಕಾಂಗ್ರೆಸ್ ಸೋಲಿಸಲು ಕಾಂಗ್ರೆಸ್ ಮುಖಂಡರೇ ಮುಂದಾಗಬಹುದು ಎನ್ನುವ ಆತಂಕ ಪಕ್ಷದಲ್ಲಿದೆ. ಇದು ಕಾಂಗ್ರೆಸ್ ನ ಅನಿವಾರ್ಯತೆ. ಇಂದು ಸಂಜಯೊಳಗೆ ಬಹುತೇಕ ಟಿಕೆಟ್ ಅಂತಿಮವಾಗುವ ಸಾಧ್ಯತೆ ಇದೆ. ಲಖನ್ ಜಾರಕಿಹೊಳಿ ಈಗಾಗಲೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ತಮಗೇ ಟಿಕೆಟ್ ಖಚಿತ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ