ಪ್ರಗತಿವಾಹಿನಿ ಸುದ್ದಿ, ಧಾರವಾಡ – ಬೆಳಗಾವಿಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ 4.9 ಕೆಜಿ ಚಿನ್ನದ ಪ್ರಕರಣ ಇಡೀ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತೆ ಮಾಡಿದೆ.
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಇಡೀ ಜಾಲದ ಹಿಂದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಇನ್ನೂ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆತ ಶಾಮೀಲಾಗಿ ಹಲವು ಪೊಲೀಸ್ ಅಧಿಕಾರಿಗಳನ್ನೂ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ.
ಜನೆವರಿ 9ರಂದೇ ಘಟನೆ ನಡೆದಿದೆ. ಅಂದೇ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ತಿಳಿದಿದೆ. ಆದರೆ ಏಪ್ರಿಲ್ 15ರಂದು ನ್ಯಾಯಾಲಯದಿಂದ ಕಾರು ಬಿಡುಗಡೆಯಾದ ನಂತರ ಅದರಲ್ಲಿನ ಚಿನ್ನ ನಾಪತ್ತೆಯಾಗಿದ್ದನ್ನು ನೋಡಿ ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಸುಹಾಸ್ ಅವರಿಗೆ ದೂರು ನೀಡಲಾಗಿದೆ.
ಈ ಕುರಿತು ಪ್ರಕರಣ ಬಯಲಾಗುತ್ತಿದ್ದಂತೆ ಪ್ರಗತಿವಾಹಿನಿ ರಾಘವೇಂದ್ರ ಸುಹಾಸ್ ಅವರನ್ನು ಪ್ರಶ್ನಿಸಿದಾಗ, ಈ ಪ್ರಕರಣದ ಹಿಂದೆ ಹಲವಾರು ಸ್ಮಗ್ಲರ್ ಗಳು ಇದ್ದ ಹಾಗೆ ಕಾಣುತ್ತಿದೆ. ಪ್ರಕರಣದ ತನಿಖೆ ನಡೆಸುವಂತೆ ನಾನೇ ಆದೇಶ ನೀಡಿದ್ದೇನೆ ಎಂದಿದ್ದರು. ಇದೇ ವೇಳೆ ಸಿಐಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇದಾಗಿ 2 -3 ದಿನದಲ್ಲಿ ರಾಘವೇಂದ್ರ ಸುಹಾಸ್ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ.
ಧಾರವಾಡದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ನಿನ್ನೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರವೊಂದನ್ನು ಬರೆದು ಇಡೀ ಪ್ರಕರಣವನ್ನು ಸೂಚ್ಯವಾಗಿ ತೆರೆದಿಟ್ಟಿದ್ದಾರೆ. ಸಮಗ್ರ ತನಿಖೆ ನಡೆಸಿದರೆ ಬಹುದೊಡ್ಡ ರಹಸ್ಯ ಬಹಿರಂಗವಾಗಲಿದೆ ಎಂದಿದ್ದಾರೆ. ಬೆಳಗಾವಿ ಮತ್ತು ಹುಬ್ಬಳ್ಳಿ -ಧಾರವಾಡದ ಹಲವಾರು ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಹಾಗೂ ಇಂತಹ ಇನ್ನಷ್ಟು ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ಕಿಂಗಪಿನ್ ಕಿರಣ ಹಲವು ಹಿರಿಯ ಪೊಲೀಸ ಅಧಿಕಾರಿಗಳ ಸ್ನೇಹ ಸಾಧಿಸಿ ಹಾಗೂ ಹಣದ ಆಮಿಷ ಒಡ್ಡಿ ಇದನ್ನೇ ದಂಧೆಯನ್ನಾಗಿಸಿಕೊಂಡು ಬಂದಿದ್ದಾನೆ. ಹೀಗಾಗಿಯೇ ಆತನನ್ನು ಪೊಲೀಸರು ಹೈವೇ ದಲಾಲ್ ಎಂದು ಸಂಬೋಧಿಸುತ್ತಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಜ. 9ರಂದು ಬೆಳಗಾವಿಯ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳೂರು ಮೂಲದ ತಿಲಕ್ ಪೂಜಾರಿಗೆ ಸೇರಿದ ಎರ್ಟಿಗಾ ಕಾರು ಕೆ ಎ ೧೯ ಎಂ.ಎಚ್ ೯೪೫೧ ಕಾರಿನಲ್ಲಿದ್ದ ೪ ಕೆ ಜಿ ೯೦೦ ಗ್ರಾಂ ಚಿನ್ನವನ್ನು ಕಳುವು ಮಾಡಿರುವ ಕುರಿತು ನಾಲ್ಕು ತಿಂಗಳ ನಂತರ ಸಿಐಡಿ ನಿರ್ದೇಶನದಂತೆ ಪ್ರಕರಣ ದಾಖಲಾಗಿರುವುದು ನೋಡಿದರೆ ಇದರಲ್ಲಿ ಪ್ರಭಾವಿ ಹಿರಿಯ ಪೊಲೀಸ ಅಧಿಕಾರಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಬಸವರಾಜ ಕೊರವರ ಹೇಳಿದ್ದಾರೆ.
ಈ ಪ್ರಕರಣ ಪೊಲೀಸ್ ಸಿಬ್ಬಂದಿಯ ಆತ್ಮಸ್ಥೈರ್ಯ ಕುಂದಿಸುತ್ತಿವೆ. ಎಲ್ಲಾ ಪೊಲೀಸರನ್ನು ಜನಸಾಮಾನ್ಯರು ಕಳ್ಳರಂತೆ ನೋಡುವಂತೆ ಆಗಿದೆ ಎಂದು ಕೊರವರ ಪತ್ರದಲ್ಲಿ ಬರೆದಿದ್ದಾರೆ.
ಚಿನ್ನ ಕಳುವು ಪ್ರಕರಣವನ್ನು ಯಾವುದೇ ಹಿರಿಯ ಅಧಿಕಾರಿಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಇಂತಹ 10-15 ಚಿನ್ನ ಕಳುವು ಪ್ರಕರಣ ಬಯಲಿಗೆ ಬರಲಿವೆ ಎಂದು ಬಸವರಾಜ ಕೊರವರ ತಿಳಿಸಿದ್ದಾರೆ.
ಮಂಗಳೂರು, ಹುಬ್ಬಳ್ಳಿ ಹಾಗೂ ಉತ್ತರಕರ್ನಾಟಕದ ಹಲವು ಜಿಲ್ಲೆಗಳಿಂದ ಮಹಾರಾಷ್ಟ್ರಕ್ಕೆ (ಮುಂಬೈ)ಗೆ ಹೋಗುವ ಮತ್ತು ಮಹಾರಾಷ್ಟ್ರದಿಂದ ಉತ್ತರಕರ್ನಾಟಕ ಭಾಗಕ್ಕೆ ಬರುವ ಚಿನ್ನದ ವ್ಯಾಪಾರಿಗಳ ಕಾರುಗಳನ್ನು ಹಿಡಿದು ಅವರ ಬಳಿಯಿದ್ದ ಕೆಜಿಗಟ್ಟಲೇ ಆಭರಣ ಚಿನ್ನವನ್ನು ದೋಚಿದ್ದಲ್ಲದೆ, ಹಣವನ್ನು ಪಡೆದು ಕೈ ತೊಳೆದುಕೊಳ್ಳಲಾಗಿದೆ. ಹುಬ್ಬಳ್ಳಿ ಮೂಲದ ಕಿರಣ ಹಾಗೂ ಹಲವು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಪೊಲೀಸ್ ಇಲಾಖೆಯ ಗೌರವಕ್ಕೆ ಚ್ಯುತಿ ತರುವುದಲ್ಲದೆ, ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾರೆ ಎಂದು ಬಸವರಾಜ ಕೊರವರ ದೂರಿದ್ದಾರೆ.
ಪ್ರಕರಣ ದಾಖಲು ಆಗದೆ ಇರುವ ೧೦ರಿಂದ ೧೫ ಚಿನ್ನ ಕಳುವಿನ ಪ್ರಕರಣ ಸಾರ್ವಜನಿಕರಿಂದ ಹಾಗೂ ಪೊಲೀಸರ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಅವುಗಳಲ್ಲಿ ಕೆಲವು ನನ್ನ ಗಮನಕ್ಕೆ ಬಂದಿವೆ ಎಂದು ವಿವರಿಸಿದ್ದಾರೆ.
ಅವರು ನೀಡಿರುವ ಕೆಲವು ಮಾಹಿತಿಗಳು ಇಲ್ಲಿವೆ –
- ಮಾ. ೬ರಂದು ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ಕೇರಳದಿಂದ ಮುಂಬೈಗೆ ೩ ಕೋಟಿ ೬೦ ಲಕ್ಷ ಹಾಗೂ ಚಿನ್ನವನ್ನು ತೆಗೆದುಕೊಂಡು ಹೋಗುತ್ತಿದ್ದ ಮುಂಬೈ ಮೂಲದ ವಿಕಾಸ ಎಂಬುವರಿಗೆ ಸೇರಿದ ಕೆಎಲ್ ೮ ಆರ್ ೭೨೯೯ ಸ್ವಿಪ್ಟ್ ಡಿಸೈರ್ ಕಾರ ನಲ್ಲಿದ್ದ ಚಿನ್ನ ಹಾಗೂ ಹಣವನ್ನು ಪಡೆದಿದ್ದಾರೆ.
2 .ಇದೇ ರೀತಿ ಧಾರವಾಡ ಭಾಗದಲ್ಲಿ ೭ ಕೆ ಜಿ ಬಂಗಾರ ಪ್ರಕರಣದಲ್ಲಿ ಜನಾರ್ಧನ ಅಲಿಯಾಸ್ ಜೆಡಿ ಬಳಿ ಸುಮಾರು ನಲವತ್ತು ಲಕ್ಷ ಮೌಲ್ಯದ ೮೩೦ ಗ್ರಾಂ ಬಂಗಾರ ತೆಗೆದುಕೊಂಡು ಪ್ರಕರಣ ಮುಚ್ಚಿ ಹಾಕಿದ್ದಾರೆ.
3. ಅದೇ ರೀತಿ ಕಲಘಟಗಿ ಹಾಗೂ ಧಾರವಾಡ ಪೊಲೀಸ್ ಠಾಣೆಯ ವ್ಯಾಪ್ತಿಗಳಲ್ಲಿ ಸುಮಾರು ಕಾರುಗಳನ್ನು ಹಿಡಿದು ಅವುಗಳಲ್ಲಿ ಇದ್ದ ೧೦ ಕೋಟಿಗೂ ಅಧಿಕ ಬಂಗಾರ ಬದಲಾಗಿ ಲಕ್ಷಾಂತರ ರೂಪಾಯಿ ಹಣ ಲಂಚದ ರೂಪದಲ್ಲಿ ಪಡೆದಿದ್ದಾರೆ.
ಮಂಗಳೂರು ಹಾಗೂ ಹುಬ್ಬಳ್ಳಿ ಮೂಲಕ ಮುಂಬೈಗೆ ಹೋಗುವ ಚಿನ್ನದ ವ್ಯಾಪಾರಿಗಳು ಪ್ರತಿ ತಿಂಗಳೂ ಕಿರಣ ಎಂಬುವರಿಗೆ ಮಾಮೂಲು ನೀಡುತ್ತಾರೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರೇಟ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಜನಾರ್ಧನ ಅಲಿಯಾಸ್ ಜೆಡಿ, ಕಿರಣ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ೧೪ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಲಪಟಾಯಿಸಿದ್ದಾರೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಳಗಾವಿಯ ಐಪಿಎಸ್ ಅಧಿಕಾರಿ ಹಾಗೂ ಹುಬ್ಬಳ್ಳಿ-ಧಾರವಾಡದಿಂದ ವರ್ಗಾವಣೆಗೊಂಡ ಇಬ್ಬರು ಡಿಸಿಪಿ, ೧೦ರಿಂದ ೧೫ ಪೊಲೀಸ್ ಇನ್ಸಪೆಕ್ಟರ್ ಸೇರಿ ಹಲವಾರು ಚಿನ್ನದ ವ್ಯಾಪಾರಿಗಳಿಂದ ಅಕ್ರಮ, ಅವ್ಯವಹಾರ ಕುದಿರಿಸಲು ಹಾಗೂ ಪ್ರಕರಣ ಮುಚ್ಚಿಹಾಕಲು ಹಣ ಪಡೆದಿದ್ದಾರೆ ಎಂದು ಪೊಲೀಸ್ ಸಿಬ್ಬಂದಿಯೇ ಮಾತನಾಡಿಕೊಳ್ಳುವಂತಾಗಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು, ಕಿರಣ ಹಾಗೂ ಜನಾರ್ಧನ ಅಲಿಯಾಸ ಜೆಡಿಯ ವಿರುದ್ದ ಕಾನೂನು ಕ್ರಮ ಕೈಗೊಂಡು ಕುಗ್ಗುತ್ತಿರುವ ಪೊಲೀಸರ ಮನೋಸ್ಥೈರ್ಯ ಹೆಚ್ಚಿಸಬೇಕು ಎಂದು ಬಸವರಾಜ ಕೊರವರ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಒಟ್ಟಾರೆ ಇಡೀ ಪ್ರಕರಣ ಬಿಡಿಸಿಟ್ಟು, ತಿಂದವರ್ಯಾರು, ತಿಂದು ಬಾಯಿಗೆ ಒರೆಸಿದವರ್ಯಾರು, ತಿನ್ನದೇ ಆರೋಪ ಹೊರಿಸಿಕೊಂಡವರ್ಯಾರು, ಇಂತಹ ಇನ್ನೆಷ್ಟು ಪ್ರಕರಣಗಳಿವೆ ಎಲ್ಲವನ್ನೂ ಹೊರಗೆ ತೆಗೆಯಬೇಕಿದೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಚ್ಚಿಟ್ಟ ಸತ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ