
ಪ್ರಗತಿವಾಹಿನಿ ಸುದ್ದಿ: ಬಸ್ ನಲ್ಲಿ ಪ್ರಯಾಣಿಸುವಾಗ ಕಳೆದು ಹೋಗಿದ್ದ ಚಿನ್ನದ ಹಾರ ಮನೆಯ ವರಾಂಡಾದಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಪೊಯಿನಾಚಿ ಎಂಬಲ್ಲಿ ನಡೆದಿದೆ.
ಪೊಯಿನಾಚಿ ಪರಂಬದ ನಿವೃತ್ತ ಕಂದಾಯ ಅಧಿಕಾರಿ ದಾಮೋದರನ್ ಪತ್ನಿಯ ತಾಳಿಯಿದ್ದ ಸರ ಪೊಯಿನಾಚಿ-ಪರಂಬ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಳೆದುಹೋಗಿತ್ತು. ದಾಮೋದರನ್ ಸಾಮಾಜಿಕ ಜಾಲತಾಣಗಳಲ್ಲಿ ಸರ ಕಳೆದುಹೋದ ಬಗ್ಗೆ ಫೋಟೋವನ್ನು ಪೋಸ್ಟ್ ಮಾಡಿದ್ದರು. ಯಾರಿಗಾದರೂ ಸರ ಸಿಕ್ಕಲ್ಲಿ ದಯವಿಟ್ಟು ಹಿಂತಿರುಗಿಸಿ ಎಂದು ಮನವಿ ಮಾಡಿದ್ದರು.
ಚಿನ್ನದ ಸರದ ಹುಡುಕಾಟ ನಡೆಸುತ್ತಿದ್ದಾಗ ಮನೆಯ ವರಾಂಡದಲ್ಲಿ ಸರದ ಜೊತೆ ಪತ್ರವೊಂದು ಪತ್ತೆಯಾಗಿದೆ. ಪತ್ರದಲ್ಲಿ ಈ ಹಾರ ಸಿಕ್ಕು ೯ ದಿನಗಳಾಗಿವೆ. ಮೊದಲು ನನಗೆ ಸಂತೋಷವಾಯಿತು. ಆದರೆ ಪ್ರತಿಭಾರಿ ಅದನ್ನು ಎತ್ತಿದಾಅಗಲೂ ನಕಾರಾತ್ಮಕ ಭಾವನೆ, ನಡುಕವುಂಟಾಗುತ್ತಿತ್ತು. ಬಳಿಕ ಏನು ಮಾಡಬೇಕೆಂದು ಯೋಚಿಸಿದೆ. ವಾಟ್ಸಾಪ್ ನಲ್ಲಿ ಸಂದೇಶ ನೋಡಿ ವಿಳಾಸ ಸಿಕ್ಕಿತು. ನಾನು ನನ್ನನ್ನು ಪರಿಚಯಿಸಿಕೊಳ್ಲಲ್ಲ. ಇಷ್ಟು ದಿನ ನನ್ನ ಬಳಿ ಹಾರ ಇಟ್ಟುಕೊಂಡಿದ್ದಕ್ಕಾಗಿ ಹಾಗೂ ನಿಮ್ಮನ್ನು ನೋಯಿಸಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದಿದೆ.
ಚಿನ್ನದ ಹಾರ ಮರಳಿ ಸಿಕ್ಕಿರುವ ಹಿನ್ನೆಲೆಯಲ್ಲಿ ದಾಮೋದರನ್ ವಾಟ್ಸಾಪ್ ನಲ್ಲಿ ಹರ ಹಿಂತಿರುಗಿಸಿದವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.