Belagavi NewsBelgaum NewsCrimeKannada NewsKarnataka News

*ಬೆಳಗಾವಿಯಲ್ಲಿ ಬ್ಲಾಕ್‌ಮೇಲ್ ಮಾಡಿ 14 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ*; *ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾಸಗಿ ಫೋಟೋಗಳನ್ನು ಪತಿಯೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿದ ಆರೋಪಿಯನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಖನಗಾಂವ ಗ್ರಾಮದ ಸಚಿನ್ ಶಿವಾಜಿ ಪೂಜೇರಿ ಬಂಧಿತ ಆರೋಪಿ. ಗೋಕಾಕ ತಾಲೂಕಿನ ದೇವಗೌಡನಹಟ್ಟಿ ಗ್ರಾಮದ ಲಕ್ಷ್ಮೀ ಗಂಗಪ್ಪ ಬಾರಿಮರದ ಅವರು ನ.8ರಂದು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯು ತನ್ನ ಬಳಿ ಇಬ್ಬರೂ ಜೊತೆಯಾಗಿರುವ ಫೋಟೋಗಳಿವೆ. ಅವುಗಳನ್ನು ನಿನ್ನ ಪತಿಗೆ ಕಳುಹಿಸಿ ಸಂಸಾರ ಹಾಳು ಮಾಡುತ್ತೇನೆ ಹಾಗೂ ಪತಿಯನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಸೆ.27ರಂದು ಬೆಳಗ್ಗೆ 11 ಗಂಟೆಗೆ ದೇವಗೌಡನಹಟ್ಟಿ ಗ್ರಾಮದಲ್ಲಿ ₹14 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಬಲವಂತವಾಗಿ ಪಡೆದುಕೊಂಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಇಬ್ಬರನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 225/2026ರ ಅಡಿಯಲ್ಲಿ ಬಿಎನ್‌ಎಸ್ ಕಲಂ 308(2), 308(5) ಹಾಗೂ 351ರ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನ.10ರಂದು ಆರೋಪಿ ಸಚಿನ್ ಶಿವಾಜಿ ಪೂಜೇರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಆತನಿಂದ ಸುಲಿಗೆ ಮಾಡಿದ್ದ ಬಂಗಾರದ ಆಭರಣಗಳು ಹಾಗೂ ನಗದು ಹಣ ಸೇರಿದಂತೆ ಒಟ್ಟು ₹13.20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ವಸ್ತುಗಳ ವಿವರ

34.74 ಗ್ರಾಂ ತೂಕದ ಬಂಗಾರದ ತಾಳಿ, 10 ಗ್ರಾಂ ತೂಕದ ಬಂಗಾರದ ಆಭರಣ, 12.58 ಗ್ರಾಂ ತೂಕದ ಬಂಗಾರದ ಚೈನ್, ಎರಡು ಜೊತೆ ಬಂಗಾರದ ಜುಮಕಿ, ಬಂಗಾರದ ಕಿವಿಯೋಲೆ ಮತ್ತು ಎಳೆ, 24.98 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರ, ₹5 ಸಾವಿರ ನಗದು ಹಣ ಜಪ್ತಿ ಮಾಡಲಾಗಿದೆ.  ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ಗೋಕಾಕ ಉಪಕಾರಾಗೃಹದಲ್ಲಿ ಇರಿಸಲಾಗಿದೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಿ. ಬಸರಗಿ, ಗೋಕಾಕ ಡಿವೈಎಸ್‌ಪಿ ರವಿ ಡಿ. ನಾಯ್ಕ ಹಾಗೂ ಗೋಕಾಕ ವೃತ್ತದ ಸಿಪಿಐ ವಿಜಯಕುಮಾರ ಸಿನ್ನೂರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕೆ.ಬಿ. ವಾಲಿಕಾರ ಹಾಗೂ ಗೋಕಾಕ ಗ್ರಾಮೀಣ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗಾವಿ ತಾಂತ್ರಿಕ ಘಟಕದ ವಿನೋದ ಠಕ್ಕನ್ನವರ ಸಹಕರಿಸಿದ್ದಾರೆ.

ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿ ಸುಲಿಗೆ ಮಾಡಿದ್ದ ಆಭರಣಗಳನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button