
ಪ್ರಗತಿವಾಹಿನಿ ಸುದ್ದಿ: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ ಐ ಅಧಿಕಾರಿಗಳು ಆಕೆಯ ಮಲತಂದೆ ಡಿಜಿಪಿ ರಾಮಚಂದ್ರರಾವ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹಾಲಿ ಡಿಜಿಪಿಯೊಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ಡಿಆರ್ ಐ ಅಧಿಕಾರಿಗಳ ನೋಟಿಸ್ ಹಿನ್ನೆಲೆಯಲ್ಲಿ ರಾಮಚಂದ್ರ ರಾವ್ ವಿಚಾರಣೆಗೆ ಹಾಜರಾಗಿದ್ದಾರೆ.
ದುಬೈನಿಂದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಮಾರ್ಚ್ 3ರಂದು ಡಿಆರ್ಐ ಅಧಿಕಾರಿಗಳು ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಕಾಫಿಫೋಸಾ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಜಾಮೀನು ಪಡೆಯುವ ಅವಕಾಶ ಇಲ್ಲದಂತಾಗಿದೆ.
ರನ್ಯಾ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯನ್ನು (ಕಾಫಿಫೋಸಾ) ಜಾರಿ ಮಾಡಲಾಗಿದ್ದು, ಈ ವಿಷಯವನ್ನು ನಿರ್ವಹಿಸುವ ಸಲಹಾ ಮಂಡಳಿಯು ಇತ್ತೀಚೆಗೆ ರನ್ಯಾ ರಾವ್ ಅವರಿಗೆ ಅವರ ಬಂಧನದ ಸಂಪೂರ್ಣ ಅವಧಿಯಲ್ಲಿ ಜಾಮೀನು ನೀಡಲಾಗುವುದಿಲ್ಲ ಎಂದು ತೀರ್ಪು ನೀಡಿದೆ.