Kannada NewsLatestNational

*ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನ, ಬೆಳ್ಳಿ ಆಮದು ಮೇಲಿನ ಸುಂಕ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ ಕೇಂದ್ರ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಯುದ್ಧದ ಸಂದರ್ಭ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಇಂಧನ ಬಿಕ್ಕಟ್ಟಿನ ನಡುವೆಯೇ ದೇಶದ ಆರ್ಥಿಕತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಒಂದು ವರ್ಷಗಳ ಕಾಲ ದೇಶದ ಜನತೆ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ಮೋದಿ ಕರೆ ನೀಡಿರುವ ಬೆನ್ನಲ್ಲೇ ಚಿನ್ನ, ಬೆಳ್ಳಿ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಆರ್ಥಿಕ ಮಿತವ್ಯಯ’ದ ಮನವಿಯ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇದರಿಂದ ಚಿನ್ನದ ದರ ಹಾಗೂ ಬೆಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

ಈಗಾಗಲೇ ಗಗನಮುಖಿಯಾಗಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು, ಸರ್ಕಾರದ ಹೊಸ ನಿರ್ಧಾರದಿಂದಾಗಿ ಮತ್ತಷ್ಟು ದುಬಾರಿಯಾಗಲಿವೆ. ಈ ಹಿಂದೆ ಶೇ 6 ರಷ್ಟಿದ್ದ ಒಟ್ಟಾರೆ ಆಮದು ಸುಂಕವನ್ನು ಈಗ ಶೇ 15 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ 10 ರಷ್ಟು ಮೂಲ ಕಸ್ಟಮ್ಸ್ ಸುಂಕ ಮತ್ತು ಶೇ 5 ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ ಸೇರಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು 95.75 ರ ಸಾರ್ವಕಾಲಿಕ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಇರಾನ್ ಯುದ್ಧ ಮತ್ತು ಜಾಗತಿಕ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಆರ್ಥಿಕ ಆಘಾತವನ್ನು ಎದುರಿಸಲು ಪ್ರಧಾನಿ ಮೋದಿ ಅವರು ನಾಗರಿಕರಲ್ಲಿ ವಿಶೇಷ ಮನವಿ ಮಾಡಿದ್ದರು. ಕನಿಷ್ಠ ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ತಡೆಯಿರಿ, ವಿದೇಶಿ ಪ್ರವಾಸಗಳನ್ನು ಮುಂದೂಡಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ ಎಂದು ಅವರು ಸಲಹೆ ನೀಡಿದ್ದರು. ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದು ಪ್ರಧಾನಿಯವರ ಈ ಕರೆಯ ಮುಖ್ಯ ಉದ್ದೇಶವಾಗಿದೆ.

ಭಾರತವು ವಿಶ್ವದಲ್ಲೇ ಚಿನ್ನದ ಎರಡನೇ ಅತಿದೊಡ್ಡ ಗ್ರಾಹಕ ದೇಶವಾಗಿದ್ದು, ಆಮದು ಸುಂಕದ ಏರಿಕೆಯಿಂದಾಗಿ ಬೇಡಿಕೆಯಲ್ಲಿ ಕುಸಿತ ಉಂಟಾಗುವ ಸಾಧ್ಯತೆಯಿದೆ. ಬುಲಿಯನ್ ಮಾರುಕಟ್ಟೆ ತಜ್ಞರ ಪ್ರಕಾರ, ಅಧಿಕ ತೆರಿಗೆಯಿಂದಾಗಿ ಚಿನ್ನದ ಕಳ್ಳಸಾಗಣೆ ಮತ್ತೆ ಹೆಚ್ಚಾಗುವ ಆತಂಕವಿದೆ.

ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಭಾರತದ ಚಿನ್ನದ ಆಮದು ಕಳೆದ 30 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿತ್ತು, ಈಗಿನ ಆಮದು ಸುಂಕ ಏರಿಕೆ ಯಿಂದ ಮತ್ತಷ್ಟು ಕುಸಿತವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button