*ಚಲಿಸುತ್ತಿದ್ದ ರೈಲಿನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಗೆ ಚೂರಿ ಇರಿತ; 6 ಆರೋಪಿಗಳ ಬಂಧನ*
ಪ್ರಗತಿವಾಹಿನಿ ಸುದ್ದಿ: ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ 6 ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಇರ್ಫಾನ್, ದರ್ಶನ್, ಫೈಸಲ್ ಖಾನ್, ಮೊಹಮ್ಮದ್ ಇಮ್ರಾನ್, ಮೋಯಿನ್ ಪಾಷಾ ಹಾಗೂ ಮುನಿರಾಜು ಎಂದು ಗುರುತಿಸಲಾಗಿದೆ.
ಗೋಲ್ ಗುಂಬಜ್ ರೈಲಿನಲ್ಲಿ ದರೋಡೆ ಹಾಗೂ ಕಳ್ಳತನ ಪ್ರಕರಣಗಳ ಬಗ್ಗೆ ದೂರು ಹಿನ್ನೆಲೆಯಲ್ಲಿ ಭದ್ರತೆಗಾಗಿ ಕಾನ್ಸ್ ಟೇಬಲ್ ಸತೀಶ್ ಚಂದ್ರ ಅವರನ್ನು ನೇಮಕ ಮಾಡಲಾಗಿತ್ತು. ರೈಲಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಎಸ್.5 ಬೋಗಿಯಲ್ಲಿ 6 ಯುವಕರ ಗುಂಪು ವಿಶ್ರಾಂತಿ ಕೊಠಡಿ ಬಳಿ ಧೂಮಪಾನ ಮಾಡುತ್ತಾ, ಪ್ರಯಾಣಿಕರಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಾ ಓಡಾಡುತ್ತಿದ್ದರು. ಇದರಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು. ಇದನ್ನು ಗಮನಿಸಿದ ಕಾನ್ಸ್ ಟೇಬಲ್ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ ಎಂದು ಸೂಚಿಸಿದ್ದಾರೆ.
ಆದಾರೂ ಸುಮ್ಮನಾಗದ ಯುವಕರ ಗುಂಪು ಕಾನ್ಸ್ ಟೇಬಲ್ ಜೊತೆ ವಾಗ್ವಾದ ನಡೆಸಿದೆ. ಈ ವೇಳೆ ಕಾನ್ಸ್ ಟೇಬಲ್ ಆರೋಪಿಗಳನ್ನು ವಶಕ್ಕೆ ಪಡೆಯಲು ಮದ್ದೂರು ನಿಲ್ದಾಣದ ಪೊಲೀಸ್ ಸಿಬ್ಬಂದಿಗಳಿಗೆ ಸಂದೇಶ ರವಾನಿಸಿದ್ದಾರೆ. ಇನ್ನೇನು ನಿಲ್ದಾಣ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಯುವಕರ ಗುಂಪು ಚೂರಿ ತೆಗೆದು ಕಾನ್ಸ್ ಟೇಬಲ್ ಬೆನ್ನಿಗೆ ಇರಿದಿದೆ. ಗಂಭೀರವಾಗಿ ಗಾಯಗೊಂಡು ರಕ್ತ ಬರುತ್ತಿದ್ದರೂ ಬಿಡದ ಕಾನ್ಸ್ ಟೇಬಲ್ ಇಬ್ಬರು ಯುವಕರನ್ನು ಪ್ರಯಾಣಿಕರ ಸಹಾಯದಿಂದ ಹಿಡಿದಿದ್ದಾರೆ.
ಘಟನೆ ಬಳಿಕ ಇದೀಗ ಇನ್ನುಳಿದ ನಾಲ್ವರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ