Kannada NewsKarnataka NewsLatest

*ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಯೋಮಿತಿ 3 ವರ್ಷ ಸಡಿಲಿಸಿ ಸರ್ಕಾರ ಆದೇಶ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಎಲ್ಲಾ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಲವಾರು ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಮೋದನೆಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇಂದು ಆದೇಶ ಪ್ರಕಟಿಸಿದೆ.

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು  ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿತ್ತು.

ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಅಂಗೀಕರಿಸಿ, ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳನ್ನು 5 ಪ್ರವರ್ಗಗಳ ಬದಲಾಗಿ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶೇಕಡ 17 ರಷ್ಟು ಮೀಸಲಾತಿಯನ್ನು ಪ್ರವರ್ಗ- ಎರಲ್ಲಿನ ಸಮುದಾಯಗಳಿಗೆ ಶೇಕಡ 6 ರಷ್ಟು, ಪ್ರವರ್ಗ-ಬಿ ರಲ್ಲಿನ ಸಮುದಾಯಗಳಿಗೆ ಶೇಕಡ 6 ರಷ್ಟು ಮತ್ತು ಪ್ರವರ್ಗ – ಸಿ ರಲ್ಲಿನ ಸಮುದಾಯಗಳಿಗೆ ಶೇಕಡ 5 ರಷ್ಟು ನಿಗದಿಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ. 

ಈ ಹಿಂದೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆ ಬಯಸಿ ಅರ್ಜಿಗಳನ್ನು ಸಲ್ಲಿಸಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಕ್ರಮವಾಗಿ 2 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಲಾಗಿರುತ್ತು.

Home add -Advt

ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 2 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿತ್ತು. 

ಆದರೆ ಹಲವಾರು ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿದ್ದರು.

ಸದರಿ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿ, ದಿನಾಂಕ: 06.09.2025ರ ಆದೇಶದ  ಹಿಂಪಡೆದು, ಈ ಆದೇಶ ಹೊರಡಿಸಿದ ದಿನಾಂಕದ ನಂತರ ಮುಂದಿನ ದಿನಾಂಕ 31-12-2027 ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 3 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು) ಆದೇಶ ಹೊರಡಿಸಿದೆ.

Related Articles

Back to top button