ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರದ ಸಚಿವರು ಮೃತರಾದರೂ ಅವರ ಮೃತದೇಹವನ್ನು ಬೆಳಗಾವಿಗೆ ತಂದು ಶೃದ್ಧಾಂಜಲಿ ಸಲ್ಲಿಸಲು ಅವಕಾಶ ಕಲ್ಪಿಸದೆ ಸುರೇಶ ಅಂಗಡಿಯವರ ಕುಟುಂಬಕ್ಕೆ ಸರಕಾರ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಿಲ್ಟ್ರಿ ನೆಲೆ ಇರುವುದರಿಂದ ಮೃತದೇಹ ತರುವುದು ದೊಡ್ಡ ಮಾತಾಗಿರಲಿಲ್ಲ. ಸುರೇಶ ಅಂಗಡಿ ಮುಖ್ಯಮಂತ್ರಿಯಾಗುವವರಿದ್ದರು ಎಂದು ಅವರ ಸೋದರ ಮಾವ ಹೇಳಿಕೆ ನೀಡಿದ್ದಾರೆ. 4 ತಿಂಗಳಲ್ಲಿ ಏನೇನು ನಡೆಯಿತೋ ಗೊತ್ತಿಲ್ಲ. ಆದರೆ ಕುಟುಂಬಕ್ಕೆ ಅನ್ಯಾಯ ಮಾಡಬಾರದಿತ್ತು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದ್ದ ರಾಹುಲ್ ಗಾಂಧಿ ವಿರುದ್ಧ ನಡೆದುಕೊಂಡ ಕ್ರಮ ಅಕ್ಷಮ್ಯ. ಅಲ್ಲಿ ಜಂಗಲ್ ಸರಕಾರ. ಮುಖ್ಯಮಂತ್ರಿ ಯೋಗಿಯೋ ರೋಗಿಯೋ ಗೊತ್ತಿಲ್ಲ ಎಂದರು.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅದು ಬಿಜೆಪಿಯ ಆಸ್ತಿಯಲ್ಲ. ಮೊದಲು ಯೋಗಿ ಆದಿತ್ಯನಾಥ ರಾಜಿನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ