Belagavi NewsKannada NewsKarnataka NewsLatest

*ಶುಕ್ರವಾರ ಸರಕಾರಿ ರಜೆ, ಶಾಲೆ, ಕಾಲೇಜು ಬಂದ್*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಾಜಿ ಪ್ರಧಾನ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಕರ್ನಾಟಕ ಸರಕಾರ ರಾಜ್ಯದಲ್ಲಿ ಸರಕಾರಿ ರಜೆ ಘೋಷಿಸಿದೆ. ಶಾಲೆ, ಕಾಲೇಜುಗಳಿಗೆ ಕೂಡ ರಜೆ ನೀಡಲಾಗಿದೆ.

ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ನಾಳೆ 10.30ಕ್ಕೆ ಶೃದ್ಧಾಂಜಲಿ ಸಭೆ ನಡೆಸಲಾಗುವುದು. ದೆಹಲಿಯಿಂದ ಬೆಳಗಾವಿಗೆ ಆಗಮಿಸಿರುವ ಎಲ್ಲ ಗಣ್ಯರನ್ನು ಕಳಿಸಲು ಸಕಲ ವ್ಯವಸ್ಥೆ ಮಾಡಲಾಗುವುದು. ನಾನು ಹಾಗೂ ಮುಖ್ಯಮಂತ್ರಿಗಳು ಮತ್ತು ಕೆಲವು ಹಿರಿಯ ಸಚಿವರು ಸಹ ದೆಹಲಿಗೆ ತೆರಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ರಾಜ್ಯದಲ್ಲಿ ಸರಕಾರಿ ರಜೆ ಇದ್ದು, 7 ದಿನಗಳ ಕಾಲ ದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ರದ್ದು; ರಾಜ್ಯದಲ್ಲಿ ಒಂದು ವಾರ ಶೋಕಾಚರಣೆ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಳಗಾವಿ, ಡಿ. 26:

“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ರದ್ದು ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬೆಳಗಾವಿಯ ಸರ್ಕಿಟ್ ಹೌಸ್ ಅಲ್ಲಿ ಗುರುವಾರ ರಾತ್ರಿ ನಡೆದ ತುರ್ತು ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಸಮಾವೇಶ ನಡೆಯಬೇಕಿದ್ದ ವೇದಿಕೆಯಲ್ಲಿಯೇ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಟರ ಬಳಿ ಮಾತನಾಡಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಆದಷ್ಟು ಬೇಗ ತಿಳಿಸಲಾಗುವುದು” ಎಂದರು.

“ಶುಕ್ರವಾರ ಸರ್ಕಾರದ ಹಾಗೂ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ರಾಜ್ಯದಲ್ಲಿ ಒಂದು ವಾರಗಳ ಕಾಲ ಶೋಕಾಚರಣೆ ಮಾಡಲಾಗುವುದು” ಎಂದು ಹೇಳಿದರು.

“ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೊರಜಿಲ್ಲೆಗಳಿಂದ ಜನರು ಆಗಮಿಸುವುದು ಬೇಡ. ಬದಲಾಗಿ ಬೆಳಗಾವಿಯಲ್ಲಿ ಇರುವವರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸಬೇಕು. ಹೊರ ಊರುಗಳಿಂದ ಹೊರಡುವ ಅನೇಕ ಕಾರ್ಯಕರ್ತರು ಹಾಗೂ ನಾಯಕರುಗಳು ಬೆಳಗಾವಿಗೆ ಬರುವುದು ಬೇಡ. ಈಗಾಗಲೇ ಹೊರ ಊರುಗಳಿಂದ ಬಂದಿರುವವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.

“ಹೊರ ಊರುಗಳಿಂದ ಬಂದಿರುವ ಸಂಸದರು ಹಾಗೂ ನಾಯಕರುಗಳ ಹೊಣೆ ಹೊತ್ತಿರುವ ಉಸ್ತುವಾರಿ ಸಮಿತಿಯವರು ಅವರುಗಳು ತೆರಳುವ ತನಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಿಮ್ಮ ಜವಾಬ್ದಾರಿ ಮರೆಯಬಾರದು” ಎಂದು ತಿಳಿಸಿದರು.

ಅಂತಿಮ ದರ್ಶನಕ್ಕಾಗಿ ದೆಹಲಿಗೆ ಪ್ರಯಾಣ

ನೀವು ಸಹ ದೆಹಲಿಗೆ ತೆರಳುವಿರಾ ಎಂದು ಕೇಳಿದಾಗ, “ನಾನು ಪಕ್ಷದ ಅಧ್ಯಕ್ಷನಾಗಿ ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನದಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ರಾಜ್ಯದ ಹಿರಿಯ ನಾಯಕರು ಸೇರಿದಂತೆ ಒಂದಷ್ಟು ಮಂದಿ ದೆಹಲಿಗೆ ತೆರಳಲಿದ್ದೇವೆ. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಹಾಗೂ ಕೈ ಕೆಳಗೆ ಕೆಲಸ ಮಾಡಿದವರು” ಎಂದು ಹೇಳಿದರು.

ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟವರು ಸಿಂಗ್

“ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದವರು. ನರ್ಮ್ ಯೋಜನೆ ಮೂಲಕ ಅನೇಕ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದರು. ಬೆಂಗಳೂರಿನ ಅನೇಕ ಮೇಲ್ಸೇತುವೆಗಳು ಇವರು ನೀಡಿದ ಕೊಡುಗೆಗಳು. ಮನ ಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡಲು ಒಂದು ದಿನವೂ ಸಾಲುವುದಿಲ್ಲ. ಅವರು ದೇಶದ ಎಲ್ಲಾ ವರ್ಗದ ಜನರಿಗೆ ಮರೆಯಲಾಗದ ಕೊಡುಗೆ ಕೊಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿ ಅವರ ಪರವಾಗಿ ದೃಢವಾಗಿ ನಿಂತವರು” ಎಂದು ಸ್ಮರಿಸಿದರು.

“ಪ್ರತಿ ಕೆಲಸದಲ್ಲಿಯೂ ಗಾಂಭೀರ್ಯತೆ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದವರು ಮನಮೋಹನ್ ಸಿಂಗ್ ಅವರು. ಅವರ ಆಡಳಿತ ಕಾಲದಲ್ಲಿ ಬಡವರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನರೇಗಾ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ಉದ್ಯೋಗ ಗ್ಯಾರಂಟಿ ಸೃಷ್ಟಿ ಮಾಡಿದವರು. ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಸೇರಿದಂತೆ ಈ ದೇಶವನ್ನು ಗಟ್ಟಿಗೊಳಿಸುವ ಅನೇಕ ಕಾಯ್ದೆಗಳನ್ನು ನೀಡಿದವರು” ಎಂದರು.

“‘ಗಾಂಧಿ ಭಾರತ’ ಕಾರ್ಯಕ್ರಮ ಅಂಗವಾಗಿ ಬೆಳಗಾವಿಯಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಸಾರ್ವಜನಿಕರ ವೀಕ್ಷಣೆಗೆ ಉಳಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಲಾಗುವುದು. ಸಾಕಷ್ಟು ಜನರು ದೀಪಾಲಂಕಾರವನ್ನು ವೀಕ್ಷಿಸುತ್ತಿದ್ದಾರೆ. ಈ ಕಾರಣಕ್ಕೆ ಉಳಿಸಿಕೊಳ್ಳುವ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button