ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಎಲ್ಲಿ ಬೇಡಿಕೆ ಇದೆ, ಎಲ್ಲಿ ಅವಶ್ಯಕತೆ ಇದೆ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ನೋಡಿಕೊಂಡು ಪಿಪಿಪಿ ಮಾಡೆಲ್‌ನಲ್ಲಿ ಯಾರಾದರೂ ಪ್ರತಿಷ್ಠಿತವಾಗಿ ಇರುವಂತವರು ಖಾಸಗಿ ವ್ಯಕ್ತಿಗಳಾಗಲೀ ಅಥವಾ ಸಂಸ್ಥೆಗಳಾಗಲೀ ಮುಂದೆ ಬಂದಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡುವ ಕುರಿತು ಗಮನಕ್ಕೆ ತೆಗೆದುಕೊಳ್ಳುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಮಹಾಂತೇಶ್ ಕವಟಗಿಮಠ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ದೇಶದಲ್ಲಿ ವೈದ್ಯಕೀಯ ಮಹಾ ವಿದ್ಯಾಲಯಗಳನ್ನು ಹೆಚ್ಚಿಸುವ ಕುರಿತು ಈ ಮೊದಲು ಇದ್ದ ನಿಯಮಗಳನ್ನು ಸಡಿಲಗೊಳಿಸಿದ್ದಾರೆ. ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ೧೮ ವಿಧಾನಸಭಾ ಕ್ಷೇತ್ರಗಳನ್ನು ಹಾಗೂ ಎರಡೂವರೆ ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.
ಪ್ರಸ್ತುತ ಬೆಳಗಾವಿಯಲ್ಲಿ ತಲಾ ಒಂದು ಬಿಮ್ಸ್ ಮತ್ತು ಕೆಎಲ್ಇ ಮೆಡಿಕಲ್ ಕಾಲೇಜು ಇದೆ. ಚಿಕ್ಕೋಡಿಯನ್ನು ಶೈಕ್ಷಣಿಕ ಜಿಲ್ಲೆ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿಯೂ ಮೆಡಿಕಲ್ ಕಾಲೇಜಿನ ಅಗತ್ಯತೆಯಿದ್ದು, ಸರ್ಕಾರ ಚಿಕ್ಕೋಡಿಯಲ್ಲಿ ಹೊಸ ಮೆಡಿಕಲ್ ಕಾಲೇಜು ಆರಂಭಿಸಲು ಮುಂದಾಗಬೇಕೆಂದು ಕೋರಿದರು.
ಅದಕ್ಕೆ ವೈದ್ಯಕೀಯ ಶಿಕ್ಷಣ ಸಚಿವರು ಉತ್ತರ ನೀಡುತ್ತಾ ಬೆಳಗಾವಿ ಒಂದು ದೊಡ್ಡ ಜಿಲ್ಲೆ ಹಾಗಾಗಿ, ಸ್ಥಳೀಯವಾಗಿ ಎಲ್ಲಿ ಬೇಡಿಕೆ ಇದೆ, ಎಲ್ಲಿ ಅವಶ್ಯಕತೆ ಇದೆ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ನೋಡಿಕೊಂಡು ಪಿಪಿಪಿ ಮಾಡೆಲ್‌ನಲ್ಲಿ ಯಾರಾದರೂ ಪ್ರತಿಷ್ಠಿತವಾಗಿ ಇರುವಂತವರು ಖಾಸಗಿ ವ್ಯಕ್ತಿಗಳಾಗಲೀ ಅಥವಾ ಸಂಸ್ಥೆಗಳಾಗಲೀ ಮುಂದೆ ಬಂದಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡುವ ಕುರಿತು ಖಂಡಿತವಾಗಿಯೂ ಗಮನಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ