ಪ್ರಗತಿವಾಹಿನಿ ಸುದ್ದಿ: ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ ಅಕ್ಕಿ ಜತೆಗೆ ನೀಡುತ್ತಿರುವ ನಗದು ಬದಲು ‘ದಿನಸಿ ಕಿಟ್’ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಅಕ್ಟೋಬರ್ ನಿಂದ ಯೋಜನೆ ಆರಂಭಿಸುವ ಸಾಧತೆ ಇದೆ.
ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಉಪ್ಪು ದಿನಸಿ ಕಿಟ್‌ನಲ್ಲಿ ಇರಲಿದೆ. ಈ ಕುರಿತು ಆಹಾರ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಸಿದ್ಧತೆ ನಡೆದಿದೆ.
ಅನ್ನಭಾಗ್ಯದ ಗ್ಯಾರಂಟಿಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿತ್ತು. ಅಷ್ಟು ಪ್ರಮಾಣದ ಅಕ್ಕಿ ಲಭ್ಯವಾಗದೇ ಇದ್ದಾಗ, ಐದು ಕೆ.ಜಿ ಅಕ್ಕಿ ಜತೆಗೆ, ಉಳಿದ ಐದು ಕೆ.ಜಿ ಲೆಕ್ಕದಲ್ಲಿ ನಗದು ನೀಡುವ ಯೋಜನೆ ಜಾರಿಗೊಳಿಸಿತ್ತು. ನಗದಿನ ಬದಲು ದಿನಸಿ ನೀಡುವ ಯೋಜನೆ ಜಾರಿಗೆ ಬರಲಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಯೋಜನೆ ಜಾರಿಗೆ ಅಗತ್ಯವಿದ್ದ ಹೆಚ್ಚುವರಿ ಅಕ್ಕಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಈ ಹಿಂದೆ ಪ್ರತಿ ವ್ಯಕ್ತಿಗೆ ನೀಡುತ್ತಿದ್ದ ಐದು ಕೆ.ಜಿ ಹೊರತುಪಡಿಸಿ ಹೆಚ್ಚುವರಿ ಅಕ್ಕಿ ಸರಬರಾಜು ಮಾಡಲು ಕೇಂದ್ರ ಒಪ್ಪಿರಲಿಲ್ಲ. ಅದಕ್ಕಾಗಿಯೆ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಕೆ.ಜಿ ಅಕ್ಕಿಗೆ ರೂ. 34 ರಂತೆ ಲೆಕ್ಕಹಾಕಿ ಪ್ರತಿ ಫಲಾನುಭವಿ ಖಾತೆಗೆ ರೂ 170 ನೇರ ಜಮಾ ಮಾಡಲು ಸರ್ಕಾರ ತೀರ್ಮಾನಿಸಿತ್ತು. 2023ರ ಜುಲೈ 10 ರಿಂದ ಅಧಿಕೃತ ಚಾಲನೆ ನೀಡಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ