ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಮೂಲೆ ಮೂಲೆಗೂ ನೀರಾವರಿ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಅದರ ಉಪ ನದಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪ್ರಮಾಣದಲ್ಲಿ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಹೇಳಿದರು.
ಜಲ ಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ನಿಗಮದ ವತಿಯಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ (ಹಳೆ ದಿಗ್ಗೆವಾಡಿ) – ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ೩೩ ಕೋಟಿ ರೂಪಾಯಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣಕ್ಕೆ ಶನಿವಾರ (ಮಾ.೭ ) ರಾಯಬಾಗ ತಾಲೂಕಿನ ದಿಗ್ಗೆವಾಡಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನೀರಾವರಿ ಇಲಾಖೆಗೆ ಯಾವುದೇ ಜಾತಿ, ಪಕ್ಷ ಇಲ್ಲ; ಎಲ್ಲ ರೈತರು ಮತ್ತು ಜನರಿಗೆ ನೀರು ನೀಡುವುದು ನಮ್ಮ ಕೆಲಸ. ಕೃಷ್ಣಾ ಮತ್ತು ಉಪ ನದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರೇಜ್ ನಿರ್ಮಿಸಲು ಎಷ್ಟೇ ಖರ್ಚಾದರೂ ನೀಡಲು ಸಿದ್ಧ ಎಂದು ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಸಭೆಗಳನ್ನು ಮಾಡಿ ಜಿಲ್ಲೆಯ ಎಲ್ಲ ಹದಿನೆಂಟು ಕ್ಷೇತ್ರಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ಮಾಡುವ ಕನಸು ಅನೇಕ ವರ್ಷಗಳ ಹಿಂದಿನದು. ಶಾಸಕನಾದಾಗಿನಿಂದಲೂ ನೀರಾವರಿಗೆ ಆದ್ಯತೆ ನೀಡಿರುತ್ತೇನೆ.
ಮುಂದಿನ ಮೂರು ವರ್ಷಗಳ ಕಾಲ ಇನ್ನೂ ಹೆಚ್ಚಿನ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರೈತಪರ ಕೆಲಸ ಮಾಡಲು ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಹೇಳಿದರು. ಆಲಮಟ್ಟಿ ಎತ್ತರ ಹೆಚ್ಚಿಸಲು ಹಾಗೂ ಪುನರ್ವಸತಿ ಗೆ ಸಾವಿರಾರು ಕೋಟಿ ಅಗತ್ಯವಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಡಾ.ಪ್ರಭಾಕರ್ ಕೋರೆ ನೇತೃತ್ವದಲ್ಲಿ ತಂಡವಾಗಿ ಕೆಲಸ ಮಾಡುವುದಾಗಿ ಸಚಿವ ಜಾರಕಿಹೊಳಿ ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಅವರು ಮಾತನಾಡಿ, ಇಪ್ಪತ್ತು ವರ್ಷಗಳ ಕನಸು ಇದೀಗ ಈಡೇರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬೇಸಿಗೆ ಕಾಲದಲ್ಲಿ ಪ್ರತಿವರ್ಷ ಮಹಾರಾಷ್ಟ್ರಕ್ಕೆ ನೀರಿಗಾಗಿ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಈ ಭಾಗದವರೇ ಜಲಸಂಪನ್ಮೂಲ ಇಲಾಖೆಯ ಸಚಿವರಾಗಿರುವುದರಿಂದ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಈಗಾಗಲೇ ಸ್ಥಗಿತಗೊಂಡಿರುವ ಯೋಜನೆ ಪೂರ್ಣಗೊಳಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಸಪ್ತನದಿಗಳ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿಯಿದೆ. ಆದ್ದರಿಂದ ಮಳೆಗಾಲದಲ್ಲಿ ಹರಿಯುವ ನೀರು ಹಿಡಿದಿಡಲು ಮಹಾರಾಷ್ಟ್ರದ ಮಾದರಿಯಲ್ಲಿ ಪ್ರತಿ ಐದು ಅಥವಾ ಹತ್ತು ಕಿಲೋಮೀಟರ್ ಗೆ ಒಂದು ಬಾಂದಾರ ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಹೆಚ್ಚು ಹೆಚ್ಚು ಬ್ಯಾರೇಜ್ ನಿರ್ಮಿಸಿ ಜಿಲ್ಲೆಯ ರೈತರಿಗೆ ನೀರು ಒದಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು, ತಮ್ಮ ಮತಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಯೋಜನೆ ಕುರಿತು ಮಾಹಿತಿ ನೀಡಿದ ಕರ್ನಾಟಕ ನೀರಾವರಿ ನಿಗಮದ (ಉತ್ತರ ವಲಯ) ಮುಖ್ಯ ಎಂಜಿನಿಯರ್ ಅರವಿಂದ ಕಣಗಿಲ್, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಬ್ಯಾರೇಜ್ ಪ್ರಯೋಜನಗಳು:
ರಾಯಬಾಗ ತಾಲೂಕಿನ ಜಲಾಲಪೂರ (ಹಳೆ ದಿಗ್ಗೆವಾಡಿ) – ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ೩೩ ಕೋಟಿ ರೂಪಾಯಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣದಿಂದ ರಾಯಬಾಗ, ಚಿಕ್ಕೋಡಿ ಹಾಗೂ ಅಥಣ ತಾಲೂಕಿನ ಒಟ್ಟು ಹತ್ತು ಗ್ರಾಮಗಳಿಗೆ ಪ್ರಯೋಜನವಾಗಲಿದೆ.
ಹಳೆ ದಿಗ್ಗೇವಾಡಿ-ಇಂಗಳಿ ಗ್ರಾಮಗಳ ಸಂಪರ್ಕ ಮತ್ತು ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಈ ಬ್ಯಾರೇಜ್ ನಿರ್ಮಾಣದ ಉದ್ಧೇಶವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ