*ಗೋವುಗಳ ರಕ್ಷಣೆಗೆ ಕೈ ಜೋಡಿಸಲು ನಿವೃತ್ತ ಆರ್.ಸಿ. ಮಹಾಂತೇಶ ಹಿರೇಮಠ ಕರೆ*
ಪ್ರಗತಿವಾಹಿನಿ ಸುದ್ದಿ; ಅಂಕಲಗಿ: ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಮ್ಮ ಭವ್ಯ ಆಯುರ್ವೇದ ಸಂಸ್ಕೃತಿಗೆ ಗೋಮಾತೆಯ ಕೊಡುಗೆ ಅನನ್ಯ ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ, ಎಮ್.ಜಿ.ಹಿರೇಮಠ ಹೇಳಿದರು.
ಶಿವಾಪೂರ ಗ್ರಾಮದಲ್ಲಿರುವ ಗೋಶಾಲೆಗೆ ಬೇಟಿ ಕೊಟ್ಟು ಗೋವುಗಳ ಸಂಕಷ್ಟ ಕಂಡು ಮಾತನಾಡಿದ ಅವರು ಪ್ರಸ್ತುತ ಮಳೆ ಕೈ ಕೊಟ್ಟಿದ್ದರಿಂದಾಗಿ ದನ, ಕರುಗಳು ಮೇವು, ನೀರು ಕೊರೆತೆ ಅನುಭವಿಸುತ್ತಿದ್ದು, ಗೋಶಾಲೆಗಳು ಭವಣೆ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸುಮಾರು 60 ಕ್ಕೂ ಹೆಚ್ಚು ಸಂಖ್ಯೆಯ ಗೋವುಗಳಿರುವ ಈ ಗೋಶಾಲೆ ನಿರ್ವಹಿಸುತ್ತಿರುವ ಶಿವಾಪೂರ ಮುಪ್ಪಿನ ಕಾಡ ಸಿದ್ಧೇಶ್ವರ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಅಪಘಾತದಿಂದಾಗಿ ದೇಣಿಗೆ ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಎಲ್ಲರೂ ಈ ಗೋಶಾಲೆಯ ರಕ್ಷಣೆಗೆ ಕೈಲಾದಷ್ಟು ಸಹಾಯ ಮಾಡಲು ಕೈ ಜೋಡಿಸುವಂತೆ ಕೋರಿದರು.
ಈ ವೇಳೆ ಉಪಸ್ತಿತರಿದ್ದ ಕರ್ನಾಟಕ ಉತ್ತರ ವಿಶ್ವ ಹಿಂದೂ ಪರಿಷತ್ ಕೋಶಾಧ್ಯಕ್ಷರಾದ ಕೃಷ್ಣ ಭಟ್ ಮಾತನಾಡಿ, ಸರ್ಕಾರ ಗೋಶಾಲೆಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿದ್ದು, ಗೋಶಾಲೆಗಳ ಸ್ಥಿತಿ ಗಂಭೀರವಾಗಿದೆ. ಇದನ್ನರಿತು ಪ್ರತಿಯೊಬ್ಬರೂ ಗೋಶಾಲೆಗಳ ರಕ್ಷಣೆಗೆ 11ರೂ ನೀಡುವಂತೆ ಮತ್ತು ಎಲ್ಲರೂ ಈ ಪುಣ್ಯ ಕಾರ್ಯಕ್ಕೆ ಸಹಕರಿಸುವಂತೆ ಕೋರಿದರು.
ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎನ್.ಮಿಸಾಳೆ, ಜಿಲ್ಲಾ ಗೋರಕ್ಷಾ ಪ್ರಮುಖರಾದ ಸಂದೀಪ ಓವುಳಕರ, ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ, ಆನಂದ ಕರಲಿಂಗಣ್ಣವರ, ಡಾ. ಪ್ರಕಾಶ ಬಿದರಿ, ರೋಷನ್ ಪಾಟೀಲ, ಉದಯ ಸಿದ್ದನ್ನವರ, ನ್ಯಾಯವಾದಿ ರವೀಂದ್ರ ಕುಲಕರ್ಣಿ ಸೇರಿದಂತೆ ಗೋರಕ್ಷಾ ಕಾರ್ಯಕರ್ತರು, ಅಭಿಮಾನಿಗಳು, ಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ