Kannada NewsLatest

ವಿಧಾನ ಪರಿಷತ್ ನಲ್ಲಿ ಮೊದಲ ಮಾತಿನಲ್ಲೇ ಗ್ರಾಮ ಪಂಚಾಯತ್ ಸದಸ್ಯರ ವೇತನ ಹೆಚ್ಚಳಕ್ಕೆ ಚನ್ನರಾಜ ಹಟ್ಟಿಹೊಳಿ ಆಗ್ರಹ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಅಧಿವೇಶನದಲ್ಲಿ ಮಂಗಳವಾರ ಮಂಗಳವಾರ ಮಾತನಾಡಿದ ಬೆಳಗಾವಿ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು ಅವರಿಗೆ ಗೌರವ ನೀಡುವ ರೀತಿಯಲ್ಲಿ ಹೆಚ್ಚಳ ಮಾಡುವಂತೆ ಆಗ್ರಹಿಸಿದರು.

ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ  ಚನ್ನರಾಜ್ ಹಟ್ಟಿಹೋಳಿ ವಿಧಾನ ಪರಿಷತ್ ನಲ್ಲಿ ವಿಷಯ ಪ್ರಸ್ತಾಪಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರ ವೇತನ ವಿಚಾರವಾಗಿ ನಡೆದ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಚನ್ನರಾಜ ಹಟ್ಟಿಹೋಳಿ, ಚುನಾವಣೆ ವೇಳೆ ನಾವು ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ವೇತನ ಹೆಚ್ಚಳ ಮಾಡುವಂತೆ ಅಳಲು ತೋಡಿಕೊಂಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಆದರೆ ನಮಗೆ ಗೌರವಧನ ತುಂಬಾ ಕಡಿಮೆಯಿದೆ. ಇದರಿಂದ ಸಮಸ್ಯೆಗಳಾಗುತ್ತಿದೆ. ಗೌರವಧನ ಹೆಚ್ಚಿಸುವಂತೆ ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದ್ದರು ಎಂದು ಅವರು ಹೇಳಿದರು.

ರಾಜ್ಯದಲ್ಲಿ 91,600 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಪ್ರಮುಖವಾಗಿ ಬೆಳಗಾವಿಯ 14 ತಾಲೂಕು 498 ಗ್ರಾಂ. ಪಂಚಾಯತ್ ನಲ್ಲಿ 8123 ಸದಸ್ಯರಿದ್ದಾರೆ.  ಅವರ ಗೌರವಧನವನ್ನು ಸಿದ್ದರಾಮಯ್ಯ ಸರಕಾರ ಇದ್ದಾಗ 250ರಿಂದ 1000 ರೂ.ಗೆ ಏರಿಕೆ ಮಾಡಲಾಗಿತ್ತು.  ಆದರೆ ಕಳೆದ 5 ವರ್ಷಗಳಿಂದ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಪರಿಷ್ಕರಣೆಯಾಗಿಲ್ಲ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಗಮನಹರಿಸಿ, ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದರು.

ಸರಕಾರದ ಯೋಜನೆಗಳನ್ನು ಜಾರಿಗೊಳಿಸಲು ಗ್ರಾಮಪಂಚಾಯಿತಿಗೆ ಹೆಚ್ಚಿನ ಅಧಿಕಾರ ಕೊಡುತ್ತಿದ್ದೇವೆ. ಆದರೆ ಅದೇ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಜನಪ್ರತಿನಿಧಿಗಳಿಗೆ ನೀಡುವ ಗೌರವಧನ ಅವರಿಗೆ ಗೌರವ ನೀಡುವಂತಿರಲಿ. ಅಂಗನವಾಡಿ ಕಾರ್ಯಕರ್ತರಿಗೆ, ನರೇಗಾ ಕಾರ್ಮಿಕರಿಗೆ, ಸರಕಾರಿ ನೌಕರರಿಗೆ ಎಲ್ಲರಿಗೂ ಗೌರವಯುತ ಗೌರವಧನ, ವೇತನ ನೀಡುತ್ತೇವೆ. ಆದರೆ ಅತ್ಯಂತ ಕಡಿಮೆ ಗೌರವ ಧನ ಪಡೆಯುತ್ತಿರುವವರೇ ಗ್ರಾಮ ಪಂಚಾಯಿತಿ ಸದಸ್ಯರು. ಗ್ರಾಮ ಪಂಚಾಯಿತಿಗೆ ಆರಿಸಿ ಬರುವವರು ಅತ್ಯಂತ ಹಿಂದುಳಿದವರು. ಹಾಗಾಗಿ ಕಳೆದ 5 ವರ್ಷದಿಂದ ಆಗದ ಗೌರವಧನ ಪರಿಷ್ಕರಣೆಗೆ ಈಗ ಕ್ರಮ ತೆಗೆದುಕೊಳ್ಳಬೇಕು ಎಂದು ಚನ್ನರಾಜ ಸವಿಸ್ತಾರವಾಗಿ ಪ್ರಸತಾಪಿಸಿ, ಗಮನಸೆಳೆದರು.

ಇದು ನನ್ನ ಮೊದಲ ಅಧಿವೇಶನ, ಹಿರಿಯರ ಸದನ, ಚಿಂತನ ಚಾವಡಿ. ನನಗೆ ಅವಕಾಶ ಮಾಡಿಕೊಟ್ಟ ಪಕ್ಷದ ಎಲ್ಲ ನಾಯಕರಿಗೆ, ಜಿಲ್ಲೆಯ ಜನರಿಗೆ, ಸಹೋದರಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಚನ್ನರಾಜ ಆರಂಭದಲ್ಲೇ ಹೇಳಿ ತಮ್ಮ ಮಾತು ಆರಂಭಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button