Latest

ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಹರಿಸುವುದು ಗ್ರಾಮ ವಾಸ್ತವ್ಯದ ಉದ್ದೇಶ

ಪ್ರಗತಿವಾಹಿನಿ ಸುದ್ದಿ; ಮೈಸೂರು : ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸಲು ಜನರು ಇದ್ದಲ್ಲಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಅವರ ಸಮಸ್ಯೆಗಳನ್ನು ಅರಿತು, ಬಗೆಹರಿಸುವುದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು.

ಇಂದು ಹೆಚ್.ಡಿ.ಕೋಟೆ ತಾಲೂಕಿನ ಭೀಮನ ಕೊಲ್ಲಿಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮ ವಾಸ್ತವ್ಯ ಎನ್ನುವುದು ಪಾಠಶಾಲೆ ಇದ್ದ ಹಾಗೆ. ಗ್ರಾಮ ವಾಸ್ತವ್ಯದಿಂದ ಹಳ್ಳಿಯ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹೆಚ್.ಡಿ.ಕೋಟೆ ತಾಲೂಕು ಅರಣ್ಯ ಪ್ರದೇಶದ ಅಂಚಿನಲ್ಲಿದ್ದು, ಇಲ್ಲಿ ಪ್ರಾಣಿಗಳ ಮತ್ತು ಮನುಷ್ಯನ ಸಂಘರ್ಷ ಇದೆ. ಇಂತಹ ಸಮಸ್ಯೆಗಳಿದ್ದರೂ ಜನರು ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಹಾಡಿಗಳು ಹೆಚ್ಚಾಗಿದ್ದು, ಗಿರಿಜನ ಹೆಚ್ಚಾಗಿ ವಾಸಿಸುತ್ತಾರೆ. ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ ಗ್ರಾಮಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಸ್ಥಳದಲ್ಲಿ ಮಾಶಾಸನ, ಪೌತಿ ಖಾತೆ ಬದಲಾವಣೆ, ಸೌಲಭ್ಯಗಳ ವಿತರಣೆ ಹಾಗೂ ಹಕ್ಕು ಪತ್ರಗಳ ವಿತರಣೆ ಮಾಡಲಾಗುವುದು. ಪೌತಿ ಖಾತೆ ಮಾಡುವಾಗ ಹೆಣ್ಣು ಮಕ್ಕಳ ಸಹಿ ಪಡೆಯುವುದು ಕಡ್ಡಾಯ. ಕಾರಣ ಹೆಣ್ಣು ಮಕ್ಕಳಿಗೂ ತಂದೆ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದರು.

ಬಡವರು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದರೆ ಅಂಥವರಿಗೆ 94 ಸಿ ಅಡಿಯಲ್ಲಿ ಆ ಜಾಗವನ್ನು ಅವರಿಗೆ ಖಾತೆ ಮಾಡಿ ಕೊಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿದ್ದರೆ, ಈ ಹಿಂದೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿತ್ತು. ಇದಕ್ಕೆ ತಿದ್ದುಪಡಿ ತಂದು ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಕೋಳಿ ಸಾಕಾಣಿಕೆಗೆ ಈ ಹಿಂದೆ ಭೂ ಪರಿವರ್ತನೆ ಮಾಡಿಸಬೇಕಿತ್ತು ಆದರೆ ಕಾನೂನು ತಿದ್ದುಪಡಿ ಮಾಡಿ ಕೋಳಿ ಸಾಕಾಣಿಕೆಯನ್ನು ಕೃಷಿ ವ್ಯಾಪ್ತಿಗೆ ತರಲಾಗಿದೆ ಎಂದರು.

ಭೂಮಿಯನ್ನು ಖಾತೆ ಮಾಡಿಸಲು ಇದ್ದ 30 ದಿನಗಳ ಅವಧಿಯನ್ನು ಏಳು ದಿನಗಳಿಗೆ ಇಳಿಸಲಾಗಿದೆ. ಎಸ್.ಸಿ/ಎಸ್.ಟಿ ಸಮುದಾಯದವರಿಗೆ ಸರ್ಕಾರ ನೀಡಿರುವ ಜಮೀನಿನಲ್ಲಿ ಮನೆ ನಿರ್ಮಿಸಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಮನೆ ನಿರ್ಮಿಸಿಕೊಳ್ಳಲು ಬ್ಯಾಂಕ್ ಸಾಲ ಪಡೆಯುವುದಕ್ಕಾಗಿ ಭೂ ಪರಿವರ್ತನೆ ಮಾಡಲು 7 ದಿನಗಳೊಳಗೆ ಅವಕಾಶ ಕಲ್ಪಿಸಲಾಗಿದೆ. ಹಲೋ ಕಂದಾಯ ಸಚಿವರೇ ಸಹಾಯ ವಾಣಿಯ ಮೂಲಕ 72 ಗಂಟೆಗಳೊಳಗೆ ಹಿರಿಯ ನಾಗರೀಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಳೆ ಹಾನಿಯಾದ 3060 ರೈತರಿಗೆ 2.5 ಕೋಟಿ ರೂಪಾಯಿ ಪರಿಹಾರವನ್ನು, 5444 ಮನೆಗಳ ಹಾನಿಗೆ 45 ಕೋಟಿ ಹಾಗೂ ಕೋವಿಡ್ ನಿಂದ ಮೃತ ಪಟ್ಟ 3644 ಕುಟುಂಬಗಳಿಗೆ ತಲಾ ಒಂದು ಲಕ್ಷದಂತೆ 27 ಕೋಟಿ ರೂ. ಪರಿಹಾರ ನೀಡಲಾಗಿದೆ ನೀಡಿದರು.

ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾತನಾಡಿ ಹೆಚ್.ಡಿ.ಕೋಟೆ ತಾಲೂಕಿನಲ್ಲಿ 120 ಹಾಡಿಗಳಿದ್ದು, ಗಿರಿಜನರು ಹೆಚ್ಚಾಗಿ ವಾಸಿಸುತ್ತಾರೆ. ಇವರು ಸರ್ಕಾರಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಹಕ್ಕು ಪತ್ರಗಳನ್ನು ನೀಡಬೇಕು. ತಾಲೂಕಿನಲ್ಲಿ 48 ಪುನರ್‌ವಸತಿ ಗ್ರಾಮಗಳಿದ್ದು, ಇವುಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಬೇಕು. ಹೆಚ್.ಡಿ.ಕೋಟೆ ತಾಲೂಕು ವಿಸ್ತೀರ್ಣದಲ್ಲಿ ದೊಡ್ಡದಿದ್ದು, ವಿಸ್ತೀರ್ಣದ ಆಧಾರದಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಜನರ ನಡುವೆ ಇದ್ದು, ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇಂದು 7,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಸಲಾಗುತ್ತಿದೆ. ಇಂದು ಸ್ವೀಕಾರ ಮಾಡುವ ಅರ್ಜಿಗಳಲ್ಲಿ ಬಹುತೇಕ ಸ್ಥಳದಲ್ಲಿ ಪರಿಹಾರ ನೀಡಲಾಗುವುದು. ಉಳಿದ ಅರ್ಜಿಗಳಿಗೆ ಎರಡು ವಾರದೊಳಗೆ ಪರಿಹಾರಗಳನ್ನು ನೀಡಲಾಗುವುದು ಎಂದರು.
ಕಂದಾಯ ಸಚಿವರಿಗೆ ಪೂರ್ಣ ಕುಂಭದ ಮೂಲಕ ಅದ್ಧೂರಿ ಸ್ವಾಗತ ಮಾಡಲಾಯಿತು. ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ನೀಡುವ ಸೌಲಭ್ಯಗಳ ಕುರಿತು ತೆರೆದಿರುವ ಮಳಿಗೆಗಳನ್ನು ಸಚಿವರು ಉದ್ಘಾಟಿಸಿದರು.

ವೇದಿಕೆ ಮೇಲೆ ವಿಕಲಚೇತನ ಫಲಾನುಭವಿಯಾದ ಅಮಾವಾಸ್ಯೆಯವರಿಗೆ ಸಚಿವರು ಕೃತಕ ಕಾಲನ್ನು ಜೋಡಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗಿಯ ಆಯುಕ್ತರಾದ ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್ ಚೇತನ್, ಅಪರ ಜಿಲ್ಲಾಧಿಕಾರಿಗಳಾದ ಮಂಜುನಾಥ್ ಸ್ವಾಮಿ, ಎನ್ ಬೇಗೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಶೀಲಮ್ಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

https://pragati.taskdun.com/statue-of-freedom-fighter-kedambadi-ramaiah-gowdabavutaguddecm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button